ಬೆಂಗಳೂರು; 50 ಕಡೆ ಮಳೆ ನೀರು ಸಾಗಲು ತಾತ್ಕಾಲಿಕ ವ್ಯವಸ್ಥೆ
ಬೆಂಗಳೂರು, ಜೂನ್ 27: ಬೆಂಗಳೂರು ನಗರದಲ್ಲಿ ಅರ್ಧ ಗಂಟೆ ಮಳೆ ಸುರಿದರೆ ರಸ್ತೆಗಳು ಜಲಾವೃತ, ವಾಹನ ಸವಾರರ ಪರದಾಟ ಎಂಬ ಸುದ್ದಿಗಳು ಮಾಧ್ಯಮದಲ್ಲಿ ಬರುತ್ತದೆ. ಒಂದು ಗಂಟೆ ಬಿರುಸಿನ ಮಳೆಯಾದರೆ ತಗ್ಗು ಪ್ರದೇಶಗಳು ಜಲಾವೃತವಾಗುತ್ತದೆ. ಇದಕ್ಕೆ ಕಾರಣ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಇಲ್ಲದಿರುವುದು.
ಮಳೆಗಾಲದಲ್ಲಿ ನಗರದಲ್ಲಿ ನೀರು ಎಲ್ಲೆಂದರಲ್ಲಿ ನುಗ್ಗಿ ಜನರು ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುವುದು ಸಾಮಾನ್ಯ. ಈ ಬಾರಿಯ ಮಳೆಗಾಲದಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲು ಬಿಬಿಎಂಪಿ ಕ್ರಮ ಕೈಗೊಂಡಿದೆ. ಇದು ಹೇಗೆ ಕೆಲಸ ಮಾಡಿದೆ? ಎಂಬುದನ್ನು ನೋಡಲು ಮುಂಗಾರು ಮಳೆ ಬಿರುಸಿನಿಂದ ಸುರಿಯಬೇಕಿದೆ.

ಹೌದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಗರದಲ್ಲಿ 40 ರಿಂದ 50 ಸ್ಥಳಗಳನ್ನು ಗುರುತು ಮಾಡಿದೆ. ಈ ಸ್ಥಳಗಳಲ್ಲಿ ಸದಾ ಮಳೆ ನೀರು ನಿಂತು ಅವಾಂತರ ಮಾಡುತ್ತದೆ. ಆದ್ದರಿಂದ ಈ ಬಾರಿ ನೀರು ಹರಿದು ಹೋಗಲು ತಾತ್ಕಾಲಿಕ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಮೂಲಕ ನಗರದಲ್ಲಿ ಜೋರಾಗಿ ಮಳೆ ಸುರಿದಾಗ ಆಗುವ ಅವಾಂತರ ತಡೆಯುವತ್ತ ಹೆಜ್ಜೆ ಇಟ್ಟಿದೆ.
ಒತ್ತುವರಿ ತೆರವು; ನಗರದಲ್ಲಿ ಮಳೆ ನೀರು ಹರಿದು ಸರಾಗವಾಗಿ ರಾಜಕಾಲುವೆ ಸೇರಲು ಮಾಡಿದ್ದ ದಾರಿಗಳು ಬಂದ್ ಆಗಿವೆ. ಬಿಬಿಎಂಪಿ ಅಕ್ರಮ ಒತ್ತುವರಿ ತೆರವು ಮಾಡಲು ಜೆಸಿಬಿಗಳ ಮೂಲಕ ಕೆಲಸ ಮಾಡುತ್ತಿದೆ. ಆದರೆ ಅದು ಈ ಮಳೆಗಾಳದಲ್ಲಿ ಪೂರ್ಣಗೊಳ್ಳುವುದಿಲ್ಲ. ಅದಕ್ಕಾಗಿ ಈ ಬಾರಿಯ ಮಳೆಗಾಲದಲ್ಲಿ ಜನರಿಗೆ ತೊಂದರೆ ಉಂಟಾಗಬಾರದು ಎಂದು 40 ರಿಂದ 50 ಪ್ರದೇಶಗಳನ್ನು ಗುರುತು ಮಾಡಿ ತಾತ್ಕಾಲಿಕ ಬೈಪಾಸ್ ಮೂಲಕ ಮಳೆ ನೀರು ಹರಿದು ರಾಜಕಾಲುವೆ ಸೇರುವ ವ್ಯವಸ್ಥೆ ಮಾಡಲಾಗುತ್ತಿದೆ.
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿ, "ಕಂದಾಯ ಇಲಾಖೆಯ ಜೊತೆ ಸೇರಿ ನಾವು ಅಕ್ರಮ ಒತ್ತುವರಿ ತೆರವುಗೊಳಿಸುವ ಕಾರ್ಯಾಚರಣೆಯನ್ನು ಮಾಡುತ್ತಿದ್ದೇವೆ. ಕೆಲವು ಕಡೆ ಕಟ್ಟಡಗಳು ಇರುವುದರಿಂದ ಅವುಗಳನ್ನು ತೆರವುಗೊಳಿಸಲು ಸಮಯ ಬೇಕಾಗುತ್ತದೆ" ಎಂದರು.
"ನಾವು ಸದ್ಯ ಮಳೆ ನೀರು ಚರಂಡಿ, ಕೆರೆಗಳನ್ನು ನೀರು ಸೇರುವ ಜಾಗ ಒತ್ತುವರಿ ಆಗಿದ್ದರೆ ಅದನ್ನು ತೆರವುಗೊಳಿಸುವ ಕಾರ್ಯ ಮಾಡುತ್ತಿದ್ದೇವೆ. ವಿಪತ್ತು ನಿರ್ವಹಣಾ ಕಾಯ್ದೆಯ ಅಡಿ ಅಕ್ರಮವಾಗಿ ಕಟ್ಟಡ ಕಟ್ಟಿದ್ದರೆ ಅದನ್ನು ವಶಕ್ಕೆ ಪಡೆದು ತೆರವುಗೊಳಿಸಿ, ಪ್ರವಾಹ ಉಂಟಾಗದಂತೆ ಕ್ರಮ ಕೈಗೊಳ್ಳುತ್ತಿದ್ದೇವೆ" ಎಂದು ಹೇಳಿದ್ದಾರೆ.
ಪ್ರತಿ ಬಾರಿ ಮಳೆಯಾದಗಲೂ ಕೆಲವು ಬಡಾವಣೆಗಳು ಮಳೆ ನೀರಿನಿಂದ ಆವೃತವಾಗುತ್ತದೆ. ಆಗ ಬಿಬಿಎಂಪಿ ಮತ್ತೆ ಸುದ್ದಿಯಾಗುತ್ತದೆ. ಆದ್ದರಿಂದ ಕಂದಾಯ ಇಲಾಖೆಯ ಜೊತೆ ಸೇರಿ ಮಳೆ ನೀರು ಹರಿದು ಹೋಗಲು ಇರುವ ಜಾಗ ಒತ್ತುವರಿಯಾಗಿದ್ದರೆ, ಒತ್ತುವರಿ ಮಾಡಿದವರು ಎಷ್ಟು ಪ್ರಭಾವಿಯಾಗಿದ್ದರೂ ಸಹ ಅದನ್ನು ತೆರವು ಮಾಡಲಾಗುತ್ತಿದೆ.
ಬಿಬಿಎಂಪಿಯ 8 ವಲಯಗಳ ವ್ಯಾಪ್ತಿಯಲ್ಲಿ ಈಗಾಗಲೇ ಇಂತಹ ಒತ್ತುವರಿ ಜಾಗಗಳನ್ನು ಪಾಲಿಕೆ ಗುರುತು ಮಾಡಿದೆ. ಅವುಗಳನ್ನು ಮಾರ್ಕ್ ಮಾಡಿ ಜೆಸಿಬಿಗಳ ಮೂಲಕ ತೆರವು ಮಾಡಲಾಗುತ್ತಿದೆ. ಈ ಮೂಲಕ ಭವಿಷ್ಯದಲ್ಲಿ ಸಹ ನಗರದಲ್ಲಿ ಮಳೆ ನೀರು ಹರಿದು ಹೋಗಲು ಅಡಚಣೆ ಉಂಟಾಗದಂತೆ ಮಾಡಲು ಬಿಬಿಎಂಪಿ ಕ್ರಮವನ್ನು ಕೈಗೊಂಡಿದೆ.
ತಗ್ಗು ಮತ್ತು ಸೂಕ್ಷ್ಮ ಪ್ರದೇಶಗಳು, ಹೊಸದಾಗಿ ನಿರ್ಮಾಣಗೊಂಡಿರುವ ಬಡಾವಣೆಗಳಲ್ಲಿ ಪ್ರವಾಹ ತಡೆಗಟ್ಟಲು ಕ್ರಮ ಕೈಗೊಳ್ಳಲಾಗಿದೆ. ಆದ್ದರಿಂದ ಒತ್ತುವರಿ ಕಂಡುಬಂದರೆ ಭೂ ಮಾಪಕರು ಆದ್ಯತೆಯ ಮೇಲೆ ಸಮೀಕ್ಷೆ ನಡೆಸುತ್ತಾರೆ. ಕಂದಾಯ ಇಲಾಖೆಯ ತಹಶೀಲ್ದಾರ್ ತುರ್ತಾಗಿ ಒತ್ತುವರಿ ತೆರವು ಆದೇಶವನ್ನು ಹೊರಡಿಸುತ್ತಾರೆ.
ಈಗಾಗಲೇ ಬಿಬಿಎಂಪಿ ವಲಯವಾರು ಒತ್ತುವರಿ ತೆರವು ಕಾರ್ಯಾಚರಣೆಯನ್ನು ಕೈಗೊಂಡಿದೆ. ಮಹದೇವಪುರ ಮತ್ತು ಆರ್. ಆರ್. ನಗರ ವಲಯದಲ್ಲಿಯೇ ಹೆಚ್ಚಿನ ಒತ್ತುವರಿಗಳು ಕಂಡು ಬಂದಿವೆ ಎನ್ನುತ್ತಾರೆ ಅಧಿಕಾರಿಗಳು. ಎಷ್ಟು ಮಳೆ ಸುರಿದರೂ ಸಹ ನಗರದ ಒಳಭಾಗದಲ್ಲಿ ಯಾವುದೇ ಸಮಸ್ಯೆ ಕಂಡುಬಂದಿಲ್ಲ. ಈ ಹಿಂದೆ ರೂಪಿಸಿದ ಯೋಜನೆಯಂತೆ ಮಳೆ ನೀರು ಸರಾಗವಾಗಿ ಹರಿದು ಹೋಗುತ್ತಿದೆ.
ಈಗಾಗಲೇ ಬಿಬಿಎಂಪಿಯ ಅಧಿಕಾರಿಗಳು ಈ ಬಾರಿಯ ಮಳೆಗಾಲ ಎದುರಿಸಲು ಪಾಲಿಕೆ ಸಿದ್ಧವಾಗಿದೆ ಎಂದು ಘೋಷಣೆ ಮಾಡಿದ್ದಾರೆ. ನಗರದಲ್ಲಿ ಈಗ ಜಿಟಿ ಜಿಟಿ ಮಳೆಯಾಗುತ್ತಿದೆ. ಸಾಮಾನ್ಯವಾಗಿ ಜುಲೈನಲ್ಲಿ ಬೆಂಗಳೂರು ನಗರದಲ್ಲಿ ಮುಂಗಾರು ಮಳೆ ಬಿರುಸಿನಿಂದ ಸುರಿಯುತ್ತದೆ. ನೀರು ನುಗ್ಗುವ ಸೂಕ್ಷ್ಮ ಪ್ರದೇಶಗಳನ್ನು ಈಗಾಗಲೇ ಗುರುತು ಮಾಡಿ, ರಾಜಕಾಲುವೆ ದುರಸ್ತಿಯನ್ನು ಮಾಡಿ ನೀರಿನ ಹರಿವಿಗೆ ಕ್ರಮಗಳನ್ನು ಕೈಗೊಳ್ಳಲಾಗಿದೆ.











Click it and Unblock the Notifications