ನಿರುದ್ಯೋಗದ ಬಗ್ಗೆ ಯುವಕರು ಮೋದಿ ಸರ್ಕಾರದ ವಿರುದ್ಧ ಧ್ವನಿ ಎತ್ತಬೇಕು: ಸಿದ್ದರಾಮಯ್ಯ
ಬೆಂಗಳೂರು,ಜು.12: ಇಂದು ದೇಶದ ಯುವಕರ ಮೇಲೆ ದೊಡ್ಡ ಜವಾಬ್ದಾರಿ ಇದೆ. ಇದನ್ನು ಬಳಸಿಕೊಂಡು ದೇಶ ಕಟ್ಟುವ ಕೆಲಸ ಆಗಬೇಕಿದೆ. ದುರಾದೃಷ್ಟವಶಾತ್ ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಯುವಕರ ಶಕ್ತಿಯನ್ನು ಸದುಪಯೋಗ ಮಾಡಿಕೊಂಡು ದೇಶ ಕಟ್ಟುವ ಕೆಲಸ ಆಗಿಲ್ಲ. ದೇಶದ ಯುವಶಕ್ತಿ ದುರುಪಯೋಗ ಆಗುತ್ತಿದೆ. ನಿರುದ್ಯೋಗ ತಾಂಡವವಾಡುತ್ತಿದೆ. ಹಾಗಾಗಿ ನಾವೆಲ್ಲರೂ ಮೋದಿ ಅವರ ಕೇಂದ್ರ ಸರ್ಕಾರದ ವಿರುದ್ಧ ಧ್ವನಿ ಎತ್ತುವ ಕೆಲಸ ಮಾಡಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಯುವ ಕಾಂಗ್ರೆಸ್ ಆಯೋಜಿಸಿದ್ದ ಯುವ ಜನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,
ಜಗತ್ತಿನ ಒಟ್ಟು 193 ದೇಶಗಳಲ್ಲಿ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ದೇಶಗಳ ಪೈಕಿ ಭಾರತ 164 ಸ್ಥಾನದಲ್ಲಿ ಇದೆ ಎಂದು ಮೋದಿ ಅವರು ಹೇಳಿದ್ದಾರೆ. ಇದಕ್ಕೆ ಬಿಜೆಪಿಯ ಸುಬ್ರಮಣ್ಯಂಸ್ವಾಮಿ ಅವರು ಇಂದು ಟ್ವೀಟ್ ಮಾಡಿ, 2011 ರಲ್ಲಿ ಆರ್ಥಿಕ ಅಭಿವೃದ್ಧಿಯಲ್ಲಿ ಜಾಗತಿಕವಾಗಿ ನಮ್ಮ ದೇಶ 3ನೇ ಸ್ಥಾನದಲ್ಲಿತ್ತು, ಮೋದಿ ಅವರು ಪ್ರಧಾನಿಯಾದ ಮೇಲೆ ಅದು 164ನೇ ಸ್ಥಾನಕ್ಕೆ ಕುಸಿದುಹೋಗಿದೆ ಎಂದಿದ್ದಾರೆ ಎಂದರು.
ಅಗ್ನಿಪಥ ಯೋಜನೆ ಜಾರಿಗೆ ತಂದು ಯುವಕರಿಗೆ ಕೇವಲ 4 ವರ್ಷ ಸೈನ್ಯದಲ್ಲಿ ಉದ್ಯೋಗ ನೀಡಲು ಹೊರಟಿದ್ದಾರೆ. ಈ ಅವಧಿ ಮುಗಿದ ಮೇಲೆ ಸೈನ್ಯದಲ್ಲಿ ಇದ್ದವರು ಏನು ಮಾಡಬೇಕು? 17 ವರ್ಷಕ್ಕೆ ಕೆಲಸಕ್ಕೆ ಸೇರಿದವರು 21 ವರ್ಷಕ್ಕೆ ನಿವೃತ್ತಿಯಾಗುತ್ತಾರೆ, ಆಮೇಲೆ ಆತ ಬದುಕಿರುವವರೆಗೆ ಏನು ಕೆಲಸ ಮಾಡಬೇಕು. ಶಿಕ್ಷಣವೂ ಪೂರೈಸಿರುವುದಿಲ್ಲ, ಇತ್ತ ಉದ್ಯೋಗವೂ ಸಿಗುವುದಿಲ್ಲ. ಕೊನೆಗೆ ಯಾವ ದಾರಿ ಸಿಗದೆ ಯುವಕರು ತಪ್ಪು ದಾರಿ ಹಿಡಿಯುತ್ತಾರೆ ಎಂದು ಹೇಳಿದರು.
ಮೋದಿ ಅವರು ಮೈಸೂರು, ಬೆಂಗಳೂರಿಗೆ ಬಂದಾಗ ನಿರುದ್ಯೋಗ, ಬೆಲೆಯೇರಿಕೆ, ರೈತರ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರ? ಇದನ್ನು ಯುವಜನರು ಗಂಭೀರವಾಗಿ ಪರಿಗಣಿಸಬೇಕು. ವಿದ್ಯಾವಂತ ಯುವಕರು ಕೆಲಸ ಕೇಳಿದರೆ ಪಕೋಡ ಮಾರೋಕೆ ಹೋಗಿ ಎನ್ನುತ್ತಾರೆ, ಇದಕ್ಕಿಂತ ನೋವಿನ ಸಂಗತಿ ಬೇರೆ ಇಲ್ಲ. ಒಮ್ಮೆ ಬಾದಾಮಿಯ ರಥೋತ್ಸವ ಕಾರ್ಯಕ್ರಮಕ್ಕೆ ಹೋಗಿದ್ದೆ ಆಗ ಕಾಂಗ್ರೆಸ್ ನ ಹುಡುಗರು ನನ್ನ ಪರ ಘೋಷಣೆ ಕೂಗಿದರು, ಆ ನಂತರ ಬಿಜೆಪಿಯವರು ಒಟ್ಟುಸೇರಿ ಮೋದಿ, ಮೋದಿ ಎಂದು ಕೂಗಿದರು. ಅದಕ್ಕೆ ನಾನು ಮೋದಿ ನಿಮ್ಮ ಮನೆ ಹಾಳು ಮಾಡಿ, ನಿಮ್ಮ ಭವಿಷ್ಯಕ್ಕೆ ಕತ್ತರಿ ಹಾಕಿದ್ದಾರೆ. ಯಾಕಪ್ಪ ಅವರ ಹೆಸರು ಕೂಗ್ತೀರ ಎಂದೆ. ಈಗ ಈ ರೀತಿ ಕೂಗುವವರ ಸಂಖ್ಯೆ ಕಡಿಮೆಯಾಗಿದೆ.
2019ರಲ್ಲಿ ರೈಲ್ವೇ ಇಲಾಖೆಯ ಸಿ ಮತ್ತು ಡಿ ದರ್ಜೆಯ 35,000 ಹುದ್ದೆಗಳಿಗೆ ಅರ್ಜಿ ಕರೆದಿದ್ದರು. ಇದಕ್ಕೆ ಅರ್ಜಿ ಹಾಕಿದವರು 1 ಕೋಟಿ 26 ಲಕ್ಷ ಜನ. ಎಸ್‌ಎಸ್‌ಎಲ್‌ಸಿ, ಪಿಯುಸಿ, ಡಿಗ್ರಿ, ಮಾಸ್ಟರ್ ಡಿಗ್ರಿ, ಪಿಹೆಚ್‌ಡಿ ಆದವರು ಹೀಗೆ ಎಲ್ಲರೂ ಅರ್ಜಿ ಹಾಕಿದ್ದರು. ಒಂದು ಹುದ್ದೆಗೆ ಸರಾಸರಿ 350 ಜನ ಅರ್ಜಿ ಹಾಕಿದ್ದರು. ಇದರಿಂದ ನಿರುದ್ಯೋಗ ಸಮಸ್ಯೆ ಯಾವ ಪ್ರಮಾಣದಲ್ಲಿದೆ ಎಂಬುದು ಅರ್ಥವಾಗುತ್ತೆ ಎಂದರು.

ಅದು ಯಾರಪ್ಪನ ಮನೆ ಹಣ?
ನರೇಂದ್ರ ಮೋದಿ ಅವರು ನೋಟು ರದ್ದತಿ ಘೋಷಿಸಿ, ರಾತ್ರಿ 12 ಗಂಟೆಗೆ ಮಾಡಿದ ಭಾಷಣದಲ್ಲಿ ಇನ್ನು ಮುಂದೆ ಕಪ್ಪು ಹಣ ಇರಲ್ಲ ಎಂದಿದ್ದರು. ಈಗ ಗೋವಾದಲ್ಲಿ 50 ಕೋಟಿ ಕೊಟ್ಟು ಶಾಸಕರ ಖರೀದಿ ಮಾಡುತ್ತಿದ್ದಾರಲ್ಲ ಅದು ಯಾರಪ್ಪನ ಮನೆ ಹಣ? ಇಲ್ಲಿ ಯಡಿಯೂರಪ್ಪ 30 - 40 ಕೋಟಿ ಕೊಟ್ಟು ಶಾಸಕರನ್ನು ಕೊಂಡುಕೊಂಡಿದ್ದು ಯಾವ ಹಣದಲ್ಲಿ? ಮಹಾರಾಷ್ಟ್ರದಲ್ಲಿ ಶಾಸಕರಿಗೆ ತಲಾ 50 ಕೋಟಿ ಕೊಟ್ಟಿದ್ದು ಯಾರಪ್ಪನ ಮನೆ ದುಡ್ಡು? ಕಪ್ಪು ಹಣ ಇರಲ್ಲ ಎಂದಿದ್ದರು, ಇದಕ್ಕೇನಂತಾರೆ? ಎಂದು ಟೀಕಿಸಿದರು.

ಎಳೆಯ ಮಕ್ಕಳಿಗೆ ವಿಷ ಕೊಡುವ ಕೆಲಸ
ನಿರುದ್ಯೋಗ, ಬಡತನ, ರೈತರು. ಮಹಿಳೆಯರು, ಮಕ್ಕಳ ಸಮಸ್ಯೆಗಳು ಜನರಿಗೆ ಗೊತ್ತಾಗಬಾರದು ಎಂದು ಧರ್ಮದ ವಿಚಾರವನ್ನು ಮುನ್ನೆಲೆಗೆ ತಂದಿದ್ದಾರೆ. ಆರ್‌ಎಸ್‌ಎಸ್ ನವರು ಬರೀ ಇಂಥಾ ಕೆಲಸಗಳನ್ನೇ ಮಾಡೋದು. ರೋಹಿತ್ ಚಕ್ರತೀರ್ಥ ಎಂಬುವವನು ಪಠ್ಯದಲ್ಲಿರುವ ಚರಿತ್ರೆಯನ್ನು ತಿರುಚಿ, ಕೇಸರಿಕರಣ ಮಾಡಿ ಎಳೆಯ ಮಕ್ಕಳಿಗೆ ವಿಷ ಕೊಡುವ ಕೆಲಸ ಮಾಡಿದ್ದ. ಸಂವಿಧಾನ ರಚನೆ ಮಾಡಿದ್ದು ಬಾಬಾ ಸಾಹೇಬರು ಎಂದು ಎಲ್ಲರಿಗೂ ಗೊತ್ತಿದೆ. ಆದರೆ ಪಠ್ಯದಲ್ಲಿ ಸಂವಿಧಾನ ಶಿಲ್ಪಿ ಎಂಬ ಪದವನ್ನೇ ತೆಗೆದು ಹಾಕಲಾಗಿದೆ. ಕಾರಣ ಬಿಜೆಪಿಯವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ, ಇವರು ಚತುರ್ವರ್ಣ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟುಕೊಂಡವರು.

ಹಿಡನ್ ಅಜೆಂಡಾ ಅರ್ಥ ಮಾಡಿಕೊಳ್ಳಿ
ದೇವನೂರು ಮಹಾದೇವ ಅವರು ಆರ್‌ಎಸ್‌ಎಸ್ ಆಳ ಮತ್ತು ಅಗಲ ಎಂಬ ಪುಸ್ತಕ ಬರೆದಿದ್ದಾರೆ. ಇದನ್ನು ಪ್ರತಿಯೊಬ್ಬರೂ ಓದಬೇಕು. ಇವರ ಬಹಿರಂಗ ಅಜೆಂಡಾ ಮತ್ತು ಹಿಡನ್ ಅಜೆಂಡಾ ಏನು ಎಂಬುದನ್ನು ದೇಶದ ಪ್ರತಿಯೊಬ್ಬರು ಅರ್ಥಮಾಡಿಕೊಳ್ಳಬೇಕು. ಯುವಕರು, ಯುವತಿಯರ ದಾರಿ ತಪ್ಪಿಸುತ್ತಿದ್ದಾರೆ. ಮೂಲ ಆರ್‌ಎಸ್‌ಎಸ್‌ನ ಒರಿಜಿನಲ್ ಗಿರಾಕಿಗಳು ಯಾವುದಕ್ಕೂ ಮುಂದುಗಡೆ ಬರಲ್ಲ, ಪರಿಶಿಷ್ಟ ಜಾತಿ, ವರ್ಗದ ಹಾಗೂ ಹಿಂದುಳಿದ ಜಾತಿಗಳ, ಬಡವರ ಮಕ್ಕಳನ್ನು ಮುಂದೆ ತಳ್ಳುತ್ತಾರೆ ಎಂದರು.

ಬಿಜೆಪಿಯವರು ಯಾವತ್ತೂ ಮೀಸಲಾತಿ ಪರ ಇದ್ದವರಲ್ಲ
ಶ್ರೇಣೀಕೃತ ವ್ಯವಸ್ಥೆ ಮುಂದುವರೆಯಬೇಕು ಎಂಬುದು ಬಿಜೆಪಿ ಅವರ ಉದ್ದೇಶ. 1991 ರಲ್ಲಿ ವಿಪಿ ಸಿಂಗ್ ಅವರು ಮಂಡಲ್ ಕಮಿಷನ್ ವರದಿ ಜಾರಿ ಮಾಡಿ ಮೀಸಲಾತಿ ನೀಡುತ್ತೇವೆ ಎಂದಾಗ ಅದನ್ನು ವಿರೋಧ ಮಾಡಿದವರು ಬಿಜೆಪಿಯವರು. ಬಿಜೆಪಿಯ ಅಡ್ವಾಣಿಯವರು ರಥಯಾತ್ರೆ ಹೊರಟರು. ಕೇಂದ್ರ ಸಚಿವ ಅರ್ಜುನ್ ಸಿಂಗ್ ಐಐಟಿ ಗಳಲ್ಲಿ ಮೀಸಲಾತಿ ಕೊಡಬೇಕು ಎಂದು ತೀರ್ಮಾನ ಮಾಡಿದಾಗ ಅದನ್ನು ವಿರೋಧ ಮಾಡಿದ್ದು ಇದೇ ಬಿಜೆಪಿ ನಾಯಕರು. ಕರ್ನಾಟಕದಲ್ಲಿ ಅನಂತ್ ಕುಮಾರ್, ಯಡಿಯೂರಪ್ಪ, ಈಶ್ವರಪ್ಪ ಪ್ರತಿಭಟನೆ ಮಾಡಿದ್ದರು. ಬಿಜೆಪಿಯವರು ಯಾವತ್ತೂ ಸಾಮಾಜಿಕ ನ್ಯಾಯ, ಮೀಸಲಾತಿ ಪರ ಇದ್ದವರಲ್ಲ ಎಂದರು.

ಬಡವರು ಜೀವನ ಮಾಡೋಕೆ ಆಗುತ್ತಾ?
ಇಂದು ಬೆಲೆಯೇರಿಕೆ ಗಗನಕ್ಕೆ ಮುಟ್ಟಿದೆ. ಮನಮೋಹನ್ ಸಿಂಗ್ ಅವರ ಸರ್ಕಾರದ ಅವಧಿಯಲ್ಲಿ ಗ್ಯಾಸ್ ಬೆಲೆ 414 ರೂಪಾಯಿ, ಡೀಸೆಲ್ ಬೆಲೆ 46 ಹಾಗೂ ಪೆಟ್ರೋಲ್ 68 ರೂಪಾಯಿ ಇತ್ತು. ಇಂದು ಪೆಟ್ರೋಲ್ 113. ಡೀಸೆಲ್ 95 ಹಾಗೂ ಗ್ಯಾಸ್ ಬೆಲೆ 1050 ರೂಪಾಯಿ ಆಗಿದೆ. ಹೀಗಾದರೆ ಹಿಂದುಳಿದ ಜಾತಿಯ, ಅಲ್ಪಸಂಖ್ಯಾತ, ದಲಿತ ಜಾತಿಯ ಬಡವರು ಜೀವನ ಮಾಡೋಕೆ ಆಗುತ್ತಾ? ಎಷ್ಟು ಬೇಗ ನರೇಂದ್ರ ಮೋದಿ ಅವರ ಸರ್ಕಾರ ಮತ್ತು ರಾಜ್ಯದ ಬಿಜೆಪಿ ಸರ್ಕಾರ ತೊಲಗುತ್ತದೋ ಅಷ್ಟು ಬೇಗ ದೇಶಕ್ಕೆ ಒಳ್ಳೆಯದಾಗುತ್ತೆ. ಯುವಕರ ದ್ವನಿ ನಿಜವಾದ ಸಮಸ್ಯೆಗಳನ್ನು ಜನರಿಗೆ ತಲುಪಿಸುವತ್ತ, ಅನ್ಯಾಯಗಳ ವಿರುದ್ಧ ಇರಬೇಕು. ಈ ಕೆಲಸವನ್ನು ನಾವು ನೀವೆಲ್ಲ ಸೇರಿ ಮಾಡೋಣ ಎಂದು ಕರೆ ನೀಡಿದರು.












Click it and Unblock the Notifications