Modi In Bengaluru: ನಮಗೆ ಬಿಜೆಪಿ ಸರ್ಕಾರ ಬೇಡ: ಮೋದಿ ಬಂದ್ರೆ ಜನರಿಗ್ಯಾಕೆ ಹಿಂಸೆ ಕೊಡ್ತಿರಾ ಎಂದು ಕುಡುಕನ ಆಕ್ರೋಶ
ಪ್ರಧಾನಿ ನರೇಂದ್ರ ಮೋದಿ ರಾಜ್ಯ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ. ಬೀದರ್ ಮತ್ತು ವಿಜಯಪುರದಲ್ಲಿ ಬೃಹತ್ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಶನಿವಾರ ಸಂಜೆ ಬೆಂಗಳೂರಿನಲ್ಲಿ ರೋಡ್ ಶೋ ನಡೆಸಲಿದ್ದಾರೆ.
ಮಾಗಡಿ ರಸ್ತೆಯ ನೈಸ್ ರೋಡ್ ಜಂಕ್ಷನ್‌ನಿಂದ ಸುಮನಹಳ್ಳಿ ಜಂಕ್ಷನ್‌ವರೆಗೆ 5.3 ಕಿಲೀ ಮೀಟರ್ ರೋಡ್ ಶೋ ನಡೆಸಲಿದ್ದಾರೆ. ಮೋದಿ ರೋಡ್ ಶೋ ಹಿನ್ನಲೆಯಲ್ಲಿ ಪೊಲೀಸರು ಭಾರಿ ಬಂದೋಬಸ್ತ್ ಮಾಡಿದ್ದಾರೆ. ಹಲವು ರಸ್ತೆಗಳನ್ನು ಬಂದ್ ಮಾಡಿರುವುದರಿಂದ ವಾಹನ ಸವಾರರು ಪರದಾಡುವಂತಾಯಿತು.

ಹೆಚ್ಚಿನ ವಾಹನಗಳು ರಸ್ತೆಯಲ್ಲಿ ನಿಂತಿದ್ದು ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು. ಇದನ್ನು ಕಂಡ ಕುಡುಕ ವ್ಯಕ್ತಿಯೊಬ್ಬ ಮೋದಿ ವಿರುದ್ಧ ರೊಚ್ಚಿಗೆದ್ದ ಘಟನೆ ನಡೆದಿದೆ. ಮನೆಗೆ ಹೋಗೊರಿಗೆ ಬಿಡ್ರಯ್ಯಾ, ಪ್ರಧಾನಿ ಬರೋದ್ಕೆ ಜನಕ್ಕೆ ಯಾಕೆ ಹಿಂಸೆ ಕೊಡ್ತಿದ್ದೀರಾ ಅಂತಾ ಫುಲ್ ಗರಂ ಆಗಿದ್ದಾರೆ.
"ಮೋದಿ ಬರೋದ್ಕೆ ಜನರನ್ನೆಲ್ಲಾ ತಡೆದಿದ್ದಿರಾ, ಇವರಿಗೆಲ್ಲಾ ಹೊಟ್ಟೆಪಾಡು ಇರಲ್ವಾ? ಮೋದಿ ಏನು ಮಾಡವ್ರೆ, ಎಲ್ಲಾ ಬೆಲೆಗಳನ್ನ ಹೆಚ್ಚಿಸಿದ್ದಾರೆ ಎಂದು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಲ್ಲದೆ ನಮ್ದು ಜೆಡಿಎಸ್ ಪಕ್ಷ, ಮಂಡ್ಯ ಗೌಡ್ರು, ಮೋದಿ ಸರ್ಕಾರ ಬೇಡ್ವೇ ಬೇಡ ನಮಗೆ, ಈ ಸರ್ಕಾರ ನಮಗೆ ಬೇಡ, ಬಂದ್ರೆ ಜೆಡಿಎಸ್ ಬರಲಿ ಇಲ್ಲ ಕಾಂಗ್ರೆಸ್ ಬರಲಿ, ಮಂಡ್ಯ ಗೌಡ ಹೇಳ್ತಾಯಿರದು" ಎಂದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಲ್ಯಾಣ ಮಂಟಪಕ್ಕೆ ತೆರಳಲು ಪರದಾಡಿದ ವಧು-ವರರು
ಮೋದಿ ರೋಡ್ ಶೋ ಹಿನ್ನಲೆಯಲ್ಲಿ ಬೆಂಗಳೂರಿನ ಹಲವು ರಸ್ತೆಗಳಲ್ಲಿ ಸಂಚಾರಕ್ಕೆ ನಿರ್ಬಂಧಿಸಿರುವುದು ಮದುವೆ ಸಮಾರಂಭಗಳ ಮೇಲೂ ಪರಿಣಾಮ ಬೀರಿದೆ. ಶನಿವಾರ, ಭಾನುವಾರ ಹೆಚ್ಚಿನ ಮದುವೆಗಳು ನಡೆಯುವುದು ಸಾಮಾನ್ಯ. ಸುಂಕದಕಟ್ಟೆಯಲ್ಲಿ ಹಲವು ಕಲ್ಯಾಣ ಮಂಟಪಗಳಿಗೆ ವಧು-ವರರು ತೆರಳಲು ಕೂಡ ಪರದಾಡಬೇಕಾಯಿತು.
ಕಾರಿನಲ್ಲಿ ಬರುತ್ತಿದ್ದ ಮದುಮಗಳನ್ನು ಸುಂಕದಕಟ್ಟೆ ಬಳಿ ತಡೆಯಲಾಗಿದ್ದು, ಕೊನೆಗೆ ದ್ವಿಚಕ್ರ ವಾಹದಲ್ಲಿ ಮದುವೆ ಮಂಟಪಕ್ಕೆ ತೆರಳುವಂತಾಯಿತು. ಬೆಳಿಗ್ಗೆ ನೈಸ್ ರೋಡ್ ಜಂಕ್ಷನ್‌ನಲ್ಲಿ ಕಲ್ಯಾಣ ಮಂಟಪಕ್ಕೆ ಹೊರಟಿದ್ದ ಮದುಮಗನನ್ನು ಪೊಲೀಸರು ಅಡ್ಡಗಟ್ಟಿದ್ದರು. ಮದುವೆ ಕಲಶವನ್ನು ಸ್ಕ್ಯಾನ್ ಮಾಡಿದ ಪೊಲೀಸರು, ದ್ವಿಚಕ್ರ ವಾಹನದಲ್ಲಿ ತೆರಳಲೂ ಅನುಮತಿ ನೀಡಲು ನಿರಾಕರಿಸಿದ್ದಾರೆ, ನಂತರ ಮಾಧ್ಯಮಗಳು ವರದಿ ಪ್ರಸಾರ ಮಾಡಲು ಮುಂದಾದಾಗ ವಾಹನವನ್ನು ಬಿಟ್ಟಿದ್ದಾರೆ.












Click it and Unblock the Notifications