ಶಾಸಕರ ಬೆಂಬಲಿಗರಿಂದ ಎಎಪಿ ಕಾರ್ಯಕರ್ತರ ಮೇಲೆ ಹಲ್ಲೆ ಯತ್ನ: ಸತೀಶ್ ಕುಮಾರ್
ಬೆಂಗಳೂರು, ಡಿಸೆಂಬರ್ 13: ಬೆಂಗಳೂರಿನ ನಗರದ ಮಾಗಡಿ ರಸ್ತೆಯ ಹೇರೋಹಳ್ಳಿ ಕೆರೆಗೆ ಕಲುಷಿತ ನೀರು ಬಿಟ್ಟು ಸುತ್ತಮುತ್ತಲಿನ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಅನೈರ್ಮಲ್ಯ ವಾತಾವರಣ ಉಂಟಾಗಿತ್ತು. ಸ್ಥಳೀಯರ ಸಮಸ್ಯೆಯನ್ನು ಆಮ್ ಆದ್ಮಿ ಪಕ್ಷ (AAP) ಪರಿಶೀಲಿಸಲು ಸ್ಥಳಕ್ಕೆ ತೆರಳಿದ್ದ ವೇಳೆ ಎಎಪಿ ಕಾರ್ಯಕರ್ತರ ಮೇಲೆ ಶಾಸಕರ ಬೆಂಬಲಿಗರು ಹಲ್ಲೆಗೆ ಯತ್ನಿಸಿದ್ದಾರೆ ಎಂದು ಪಕ್ಷದ ಬೆಂಗಳೂರು ನಗರಾಧ್ಯಕ್ಷ ಡಾ.ಸತೀಶ್ ಕುಮಾರ್ ಅವರು ಆರೋಪಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಶವಂತಪುರ ಹೇರೋಹಳ್ಳಿ ಕೆರೆ ಕಲುಷಿತ ಪರಿಶೀಲಿಸಲು ಗುರುವಾರ ಎಎಪಿ ನಾಯಕರು, ಕಾರ್ಯಕರ್ತರು ತೆರಳಿದ್ದರು. ಈ ವೇಳೆ ಮಾಧ್ಯಮದವರು ಜೊತೆಗೆ ಇದ್ದರು. ಆಗ ಯಶವಂತಪುರ ಶಾಸಕ ಎಸ್. ಟಿ. ಸೋಮಶೇಖರ್ ಅವರ ಬೆಂಬಲಿಗರು ಏಕಾಏಕಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲಿಗೆ ಯತ್ನಿಸಿದ್ದರು. ಈ ಘಟನೆಯನ್ನು ಅವರು ಖಂಡಿಸಿದ್ದಾರೆ. ನಿಮ್ಮ ಗೂಂಡಾ ವರ್ತನೆಗಳಿಗೆ ಬಗ್ಗುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಸ್ಥಳೀಯ ಶಾಸಕರುಗಳ ಬಗ್ಗೆ ರಾಜ್ಯ ಕಾಂಗ್ರೆಸ್ ಮಹಿಳಾ ಅಧ್ಯಕ್ಷ ಸೌಮ್ಯ ರೆಡ್ಡಿ ಗಮನಹರಿಸಿದರೆ ಒಳ್ಳೆಯದು. ಪಕ್ಷದ ಕಾರ್ಯಕರ್ತರು ಜನತೆಯ ಮೂಲ ಸೌಕರ್ಯಗಳು ಹಾಗೂ ಸಮಸ್ಯೆಗಳ ಬಗ್ಗೆ ಹೋರಾಟವನ್ನು ಮುಂದುವರಿಸಿಕೊಂಡು ಬರುತ್ತದೆ ಎಂದು ಹೇಳಿದರು.
ಪಕ್ಷವು ಬೆಂಗಳೂರಿನಲ್ಲಿ ಜನತೆಯ ಧ್ವನಿಯಾಗಿ ಈಗಾಗಲೇ ಅನೇಕ ಹೋರಾಟಗಳನ್ನು ಹಲವು ವರ್ಷಗಳಿಂದ ಮಾಡಿಕೊಂಡು ಬಂದಿದೆ. ಇದಕ್ಕಾಗಿ ಸಾಕಷ್ಟು ಸುಳ್ಳು ಸುಳ್ಳು ಕೇಸುಗಳನ್ನು ಹಾಕುವ ಮೂಲಕ, ಹಾಗೂ ಗುಂಡ ಪ್ರವೃತ್ತಿ ಯ ಮೂಲಕ ನಮ್ಮ ಧ್ವನಿಯನ್ನು ಯಾವುದೇ ಕಾರಣಕ್ಕೂ ಅಡಗಿಸಲು ಸಾಧ್ಯವಿಲ್ಲ ಎಂದು ಗುಡುಗಿದರು. ಈ ಹೇರೋಹಳ್ಳಿ ಕೆರೆಯ ಅಭಿವೃದ್ಧಿಗಾಗಿ ಈಗಾಗಲೇ ಕೋಟಿಗಟ್ಟಲೆ ಅನುದಾನ ವ್ಯಯ ಮಾಡಲಾಗಿದೆ ಎಂದು ಅವರು ವಿವರಿಸಿದರು.
ಇದು ಸಂಪೂರ್ಣ ಭ್ರಷ್ಟಾಚಾರಿಗಳ ಪಾಲಾಗಿ ಸ್ಥಳೀಯ ಜನತೆ ಮನೆಗಳಲ್ಲಿ ವಾಸ ಮಾಡಲು ಸಾಧ್ಯವಾಗದ ವಾತಾವರಣ ಉಂಟಾಗಿದೆ. ಶಾಸಕ ಎಸ್ ಟಿ ಸೋಮಶೇಖರ್ ಕೂಡಲೇ ಇತ್ತ ಕಡೆ ಗಮನಹರಿಸಿ ಸಮಸ್ಯೆಯನ್ನು ಬಗೆಹರಿಸದಿದ್ದಲ್ಲಿ ತೀವ್ರ ಮಟ್ಟದ ಹೋರಾಟವನ್ನು ಕೈಗೆತ್ತಿಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.
ಮೀಸಲಾತಿ ಹೋರಾಟಕ್ಕೆ ಜಾತಿ ಗಣತಿಯೇ ಮಂತ್ರ
ದೇಶದಲ್ಲಿನ ಪ್ರತಿಯೊಬ್ಬರಿಗೂ ಸಹ ಯಾವುದೇ ಜಾತಿ, ಧರ್ಮ ಭೇದವಿಲ್ಲದೆ ಅಂತರರಾಷ್ಟ್ರೀಯ ಮಟ್ಟದ ಗುಣಮಟ್ಟದ ಶಿಕ್ಷಣ ದೊರಕಿದಲ್ಲಿ ಈ ರೀತಿಯ ಜಾತಿ ಹೋರಾಟಗಳು ಖಂಡಿತ ನಿಲ್ಲುತ್ತದೆ. ಈ ರೀತಿಯ ಗುಣಮಟ್ಟದ ಶಿಕ್ಷಣ ಪೀಳಿಗೆ ಪೀಳಿಗೆಗಳಿಗೆ ಸಿಗದೇ ಮೇಲ್ವರ್ಗ ಹಾಗೂ ಕೆಲ ವರ್ಗಗಳ ಎಲ್ಲ ಜಾತಿ ಜನಾಂಗಗಳಲ್ಲಿ ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದವರ ಸಂಖ್ಯೆ ಹೆಚ್ಚಿದೆ.
ದೇಶದ ಪ್ರತಿಯೊಬ್ಬರಿಗೆ ಗುಣಮಟ್ಟದ ಶಿಕ್ಷಣ ,ಆರೋಗ್ಯ ಸೇರಿದಂತೆ ಇನ್ನಿತರ ಸೌಲಭ್ಯಗಳು ದೊರೆಯಬೇಕು ಎಂಬುದು ಸಂವಿಧಾನದ ಆಶಯ. ಇಂತಹ ಮಹತ್ಕಾರ್ಯಗಳನ್ನು ಯಾವುದೇ ಪಕ್ಷಗಳು ಅಳವಡಿಸಿಕೊಳ್ಳದೆ ಕೇವಲ ಜಾತಿ ಜನಾಂಗಗಳ ಮೇಲೆ ವೋಟ್ ರಾಜಕಾರಣ ಮಾಡಿಕೊಂಡು ಬರುತ್ತಿವೆ. ಈವೆಲ್ಲ ಪಡೆಯಲು ಜಾತಿ ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ ನಡೆಯುತ್ತಿವೆ. ಎಲ್ಲ ಜಾತಿಗಳ ಮೀಸಲಾತಿ ಹೋರಾಟಕ್ಕೆ ಅಂತಿಮ ತೆರೆ ಎಳೆಯಲು ಜಾತಿಗಣತಿ ವರದಿ ಮಂಡನೆಯೇ ಮೂಲ ಮಂತ್ರ ಎಂದು ಅವರು ಅಭಿಪ್ರಾಯಪಟ್ಟರು.












Click it and Unblock the Notifications