ಕೋವಿಡ್ ಮೃತ ಕುಟುಂಬಗಳಿಗೆ ಪರಿಹಾರಕ್ಕೆ ಶಾಸಕ ದಿನೇಶ್ ಗುಂಡೂರಾವ್ ಅಗ್ರಹ
ಬೆಂಗಳೂರು, ಆ. 24: ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಗಳ ಕುಟುಂಬ ಸದಸ್ಯರಿಗೆ ಬಾಕಿ ಪರಿಹಾರ ಧನ ಬಿಡುಗಡೆ ಮಾಡುವಂತೆ ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.
ಕೋವಿಡ್19 ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಕುಟುಂಬದ ವಾರಸುದಾರರಿಗೆ ಮತ್ತು ಬಡತನ ರೇಖೆಗಿಂತ ಕೆಳಗೆ ಇರುವ ಕುಟುಂಬದ ಕಾನೂನು ಬದ್ಧ ವಾರಸುದಾರರಿಗೆ ಸಂಧ್ಯಾ ಸುರಕ್ಷಾ ಯೋಜನೆ ಅಡಿ 1 ಲಕ್ಷ ರೂ. ಮತ್ತು ರಾಜ್ಯ ವಿಪತ್ತು ಪರಿಹಾರ ನಿಧಿ ಅಡಿ 50 ಸಾವಿರ ರೂ. ಪಾವತಿ ಮಾಡಲು ಸರ್ಕಾರ ಆದೇಶಿಸಿದೆ. ಸರ್ಕಾರ ಈ ಕುರಿತು 2021 ರಲ್ಲಿಯೇ ಆದೇಶ ಮಾಡಿದೆ. ಈ ಆದೇಶದ ಅನುಸಾರ ಗಾಂಧಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮೊದಲ ಹಂತದಲ್ಲಿ ಅರ್ಜಿ ಸಲ್ಲಿಸಿದ ಪಲಾನುಭವಿಗಳಿಗೆ ನೇರ ಹಣ ವರ್ಗಾವಣೆ ಮೂಲಕ ಪರಿಹಾರ ನೀಡಲಾಗಿದೆ.
ಎರಡನೇ ಹಂತದಲ್ಲಿ ನನ್ನ ಕ್ಷೇತ್ರದ 98 ಜನ ಫಲಾನುಭವಿಗಳು ಪರಿಹಾರ ಧನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯ ಜೊತೆಗೆ ಸೂಕ್ತ ದಾಖಲೆಗಳನ್ನು ಒದಗಿಸಿದ್ದಾರೆ. ಸ್ವತಃ ನಾನೇ ಪಾಲಿಕೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಸಹಕಾರದೊಂದಿಗೆ ವಾರ್ಡ್ ವಾರು ಸಭೆ ನಡೆಸಿ, ಪರಿಹಾರ ಧನ ಪಡೆಯಲು ಅರ್ಜಿ ನಮೂನೆ ಹಾಗೂ ದಾಖಲೆ ಸಲ್ಲಿಸಲು ನೆರವು ನೀಡಿದ್ದೇನೆ. 98 ಫಲಾನುಭವಿಗಳು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿ ಈಗಾಗಲೇ ಹಲವು ತಿಂಗಳುಗಳೇ ಕಳೆದು ಹೋಗಿವೆ. ಆದರೂ 98 ಫಲಾನುಭವಿಗಳಿಗೆ ಪರಿಹಾರದ ಧನ ಬಿಡುಗಡೆಯಾಗಿಲ್ಲ ಎಂದು ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.

ಸರ್ಕಾರದ ಖಜಾನೆಯಲ್ಲಿ ಹಣವಿಲ್ಲವೆ ಎಂಬ ಅನುಮಾನ
ಈ ಬಗ್ಗೆ ನಾನು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಹಲವಾರು ಬಾರಿ ದೂರವಾಣಿ ಕರೆ ಮಾಡಿ ಪರಿಹಾರದ ಧನ ಬಿಡುಗಡೆ ಮಾಡುವಂತೆ ಮನವಿ ಮಾಡಿರುತ್ತೇನೆ. ಇಷ್ಟಾದರೂ ಸರ್ಕಾರದಿಂದ ಯಾವುದೇ ಪರಿಹಾರ ದೊರೆತಿರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕೋವಿಡ್‌ನಿಂದ ಮನೆಯ ಕುಟುಂಬದ ಸದಸ್ಯರನ್ನು ಕಳೆದುಕೊಂಡವರ ಕಷ್ಟಕ್ಕೆ ಸ್ಪಂದಿಸಬೇಕಾದದ್ದು ಸರ್ಕಾರದ ಕರ್ತವ್ಯ. ಆದರೆ ರಾಜ್ಯ ಬಡವರ ವಿಚಾರದಲ್ಲಿ ಅತ್ಯಂತ ಬೇಜವಾಬ್ಧಾರಿಯಿಂದ ವರ್ತಿಸುತ್ತಿದೆ. ಪರಿಹಾರ ನೀಡುವಂತೆ ನ್ಯಾಯಲಯವೇ ಸೂಚನೆ ನೀಡಿದೆ. ಆದರೂ ಈ ಸರ್ಕಾರಕ್ಕೆ ಬಡವರ ನೋವು ಕೇಳುತ್ತಿಲ್ಲ. ಸರ್ಕಾರದ ಧೋರಣೆ ನೋಡಿದರೆ ಪರಿಹಾರ ನೀಡಲೂ ಸರ್ಕಾರದ ಖಜಾನೆಯಲ್ಲಿ ಹಣವಿಲ್ಲವೆ ಎಂಬ ಅನುಮಾನ ಮೂಡುತ್ತಿದೆ ಎಂದು ಟೀಕೆ ಮಾಡಿದ್ದಾರೆ.

ಪಶ್ಚಿಮ ವಲಯದ ಕುಟುಂಬದ ಸದಸ್ಯರು
ಕೋವಿಡ್‌ನಿಂದ ಮೃತಪಟ್ಟ 98 ಕುಟುಂಬದ ಸದಸ್ಯರು ಪರಿಹಾರಕ್ಕಾಗಿ ಅಧಿಕಾರಿಗಳ ಬಳಿ ದುಂಬಾಲು ಬೀಳುವ ಪರಿಸ್ಥಿತಿ ಎದುರಾಗಿದೆ. ಜೊತೆಗೆ ಪ್ರತಿನಿತ್ಯ ನನ್ನ ಕಚೇರಿಗೂ ಆಗಮಿಸಿ ಪರಿಹಾರ ಕೊಡಿಸುವಂತೆ ಒತ್ತಡ ಹೇರುತ್ತಿದ್ದಾರೆ. ಕೋವಿಡ್ ಸೋಂಕಿನಿಂದ ಮೃತಪಟ್ಟ ಕುಟುಂಬ ಬಡತನ ರೇಖೆಗಿಂತ ಕೆಳಗಿದ್ದು ಅತ್ಯಂತ ಸಂಕಷ್ಟದಲ್ಲಿದ್ದಾರೆ. ನನ್ನ ಮತಕ್ಷೇತ್ರದ ಅರ್ಹ 98 ಫಲಾನುಭವಿಗಳ ಬೇಡಿಕೆಯನ್ನು ಸರ್ಕಾರ ಮಾನವೀಯ ದೃಷ್ಟಿಯಿಂದ ಪರಿಗಣಿಸಿ ಪರಿಹಾರ ನೀಡಬೇಕೆಂದು ಈ ದಿನ ಪಾಲಿಕೆಯ ಪಶ್ಚಿಮ ವಲಯದ ವಲಯ ಆಯುಕ್ತರು, ಜಂಟಿ ಆಯುಕ್ತರು, ಹಾಗೂ ಹಣಕಾಸು ವಿಭಾಗದ ಅಧಿಕಾರಿಗಳನ್ನು ಒತ್ತಾಯಿಸಿರುತ್ತೇನೆ ಎಂದು ಗುಂಡೂರಾವ್ ತಿಳಿಸಿದ್ದಾರೆ.

ಚಿಕಿತ್ಸಾ ವೆಚ್ಚ ಭರಿಸಿದ ಸರ್ಕಾರ:
ಕೋವಿಡ್ ರೋಗಿಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರದಿಂದಲೇ ಭರಿಸಲಾಗಿದೆ. ಮೊದಲನೇ ಅಲೆಯಲ್ಲಿ, 2020 ರ ಮಾರ್ಚ್‌ನಿಂದ 2021 ರ ಮಾರ್ಚ್‌ವರೆಗೆ 391.26 ಕೋಟಿ ರೂ., ಎರಡನೇ ಅಲೆಯಲ್ಲಿ, 2021ರ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ 376.76 ಕೋಟಿ ರೂ. ಹಾಗೂ ಮೂರನೇ ಅಲೆಯ ವೇಳೆ, 2022 ರ ಜನವರಿಯಿಂದ ಮಾರ್ಚ್‌ವರೆಗೆ 11.80 ಕೋಟಿ ರೂ. ಪಾವತಿಸಲಾಗಿದೆ.

ಶುಲ್ಕ ವಸೂಲಿ ಬಗ್ಗೆ ಸಚಿವ ಡಾ.ಕೆ.ಸುಧಾಕರ್
ಈ ಕುರಿತು ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ಸರ್ಕಾರದಿಂದ ಹಣ ಪಡೆಯುವುದರ ಜೊತೆಗೆ ಕೋವಿಡ್ ರೋಗಿಗಳಿಂದಲೂ ಶುಲ್ಕ ವಸೂಲಿ ಮಾಡಿದ ಆಸ್ಪತ್ರೆಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಈವರೆಗೆ 1.58 ಕೋಟಿ ರೂ.ನಷ್ಟು ಹಣವನ್ನು ರೋಗಿಗಳ ಕುಟುಂಬಕ್ಕೆ ಹಿಂದಿರುಗಿಸಿ ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ. ಇದು, ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರ ನೀಡಿರುವ ಸ್ಪಷ್ಟ ಎಚ್ಚರಿಕೆ ಎಂದು ತಿಳಿಸಿದ್ದಾರೆ.












Click it and Unblock the Notifications