ರಾಜ್ಯವನ್ನು ಲೂಟಿ ಮಾಡುವುದು, ಜನರಿಗೆ ಅನ್ಯಾಯ, ಕಲಾಪದ ಸಮಯ ಹಾಳುವುದೇ ಬಿಜೆಪಿ ಕೆಲಸ : ಸಚಿವ ಕೃಷ್ಣಭೈರೇಗೌಡ
ಬೆಂಗಳೂರು, ಜುಲೈ. 12: ರಾಜ್ಯವನ್ನು ಲೂಟಿ ಮಾಡುವುದು, ಜನಸಾಮಾನ್ಯರಿಗೆ ಅನ್ಯಾಯ ಮಾಡುವುದು ಮತ್ತು ಅನವಶ್ಯಕ ಕೂಗಾಟಗಳ ಮೂಲಕ ಸದನ ಕಲಾಪದ ಸಮಯ ವ್ಯರ್ಥ ಮಾಡುವುದೊಂದೆ ಬಿಜೆಪಿ ನಾಯಕರ ಕೆಲಸ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಬುಧವಾರ ವಿಧಾನ ಪರಿಷತ್‌ನಲ್ಲಿ ಕಿಡಿಕಾರಿದ್ದಾರೆ.
ಕೊಲೆ ಆರೋಪಿ ಪುನೀತ್ ಕೆರೆಹಳ್ಳಿಗೆ ಉಪ್ಪಾರಪೇಟೆ ಪೊಲೀಸ್ ಠಾಣಾ ಅಧಿಕಾರಿ ಇತ್ತೀಚೆಗೆ ನೋಟೀಸ್ ಜಾರಿ ಮಾಡಿದ್ದರು. ಆ ನೊಟೀಸ್ ನಲ್ಲಿ ಮೆಜೆಸ್ಟಿಕ್ ಬಳಿ ಇರುವ ನಾಗರ ಕಟ್ಟಗೆ ಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲು ಸಂಬಂಧ ಪಟ್ಟ ಅಧಿಕಾರಿಗಳಿಂದ ಅನುಮತಿ ಪಡೆಯುವಂತೆ ಸೂಚಿಸಲಾಗಿತ್ತು. ಈ ಬಗ್ಗೆ ವಿರೋಧ ಪಕ್ಷದ ನಾಯಕರು "ಪುನೀತ್ ಕೆರೆಹಳ್ಳಿ ಹಿಂದೂ ದೇವರಿಗೆ ಕೈಮುಗಿಯಲು ಪೋಲಿಸರ ಅನುಮತಿ ಪಡೆಯಬೇಕೆ?" ಎಂದು ಆಕ್ರೋಶ ಹೊರಹಾಕಿದ್ದರು.

ಇದಕ್ಕೆ ಬುಧವಾರ ವಿಧಾನ ಪರಿಷತ್ ಶೂನ್ಯ ವೇಳೆ ಕಲಾಪದಲ್ಲಿ ಸರ್ಕಾರದ ಪರವಾಗಿ ಉತ್ತರ ನೀಡಲು ಮುಂದಾದ ಸಚಿವ ಕೃಷ್ಣಭೈರೇಗೌಡ, "ಈ ಪ್ರಕರಣದ ಬಗ್ಗೆ ಮಾಹಿತಿ ಇಲ್ಲ. ಸಂಬಂಧಿಸಿ ಅಧಿಕಾರಿಯಿಂದ ಮಾಹಿತಿ ಪಡೆದು ಎರಡು ದಿನಗಳಲ್ಲಿ ಸದನಕ್ಕೆ ಉತ್ತರ ನೀಡಲಾಗುವುದು" ಎಂದು ಸ್ಪಷ್ಟೀಕರಣ ನೀಡಿದ್ದಾರೆ. ಅದರೆ, ಇಷ್ಟಕ್ಕೆ ಸುಮ್ಮನಾಗದ ವಿರೋಧ ಪಕ್ಷದ ನಾಯಕರು ಈಗಾಗಲೇ ಉತ್ತರ ಬೇಕು ಎಂದು ಪಟ್ಟುಹಿಡಿದ್ದಾರೆ.
ಈ ವೇಳೆ ಸದನದ ನೀತಿ ನಿಯಮಗಳನ್ನು ಉಲ್ಲೇಖಿಸಿದ ಕೃಷ್ಣಭೈರೇಗೌಡ " ಸದನದ ನಿಯಮ 51ಡಿ ಪ್ರಕಾರ ವಿರೋಧ ಪಕ್ಷದ ಸದಸ್ಯರ ಪ್ರಶ್ನೆಗಳಿಗೆ ಉತ್ತರ ನೀಡಲು ಎರಡು ದಿನಗಳ ಅವಕಾಶ ಇದೆ. ವಿರೋಧ ಪಕ್ಷದ ನಾಯಕರು ದಯವಿಟ್ಟು ನಿಯಮಗಳ ಅನುಸಾರ ಕಲಾಪ ನಡೆಸಲು ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.

ಸಭಾಪತಿ ಬಸವರಾಜ ಹೊರಟ್ಟಿ ಸಹ ಸಚಿವ ಕೃಷ್ಣಭೈರೇಗೌಡ ಅವರ ಮಾತಿಗೆ ದನಿಗೂಡಿಸಿ, ಬಿಜೆಪಿಗರು ಗದ್ದಲ ಎಬ್ಬಿಸಿ ಸದನದ ಕಲಾಪಕ್ಕೆ ಅಡ್ಡಿಪಡಿಸಬಾರದು ಎಂದು ಸೂಚಿಸಿದರು. ಆದರೂ, ಸಭಾಪತಿಗಳ ಮಾತಿಗೂ ಕಿವಿಗೊಡದ ಬಿಜೆಪಿ ಸದಸ್ಯರು ಸದನದ ಭಾವಿಗಿಳಿದು ಸಚಿವರು ಈಗಲೇ ಉತ್ತರ ನೀಡಬೇಕು ಎಂದು ಪಟ್ಟುಹಿಡಿದ ಕಾರಣ ಸದನದಲ್ಲಿ ಗದ್ದಲ ಉಂಟಾಗಿತ್ತು.
ಈ ವೇಳೆ ವಿರೋಧ ಪಕ್ಷದ ಸದಸ್ಯರ ವರ್ತನೆಯ ವಿರುದ್ಧ ಕಿಡಿಕಾರಿದ ಸಚಿವ ಕೃಷ್ಣಭೈರೇಗೌಡ, " ನಿಮಯದ ಅನುಸಾರ ಎರಡು ದಿನಗಳಲ್ಲಿ ಉತ್ತರ ನೀಡುವುದಾಗಿ ಹೇಳಿದರೂ ವಿರೋಧ ಪಕ್ಷದ ನಾಯಕರು ಉದ್ದೇಶಪೂರ್ವಕವಾಗಿ ಸದನದ ಸಮಯವನ್ನು ಹಾಳು ಮಾಡುತ್ತಿದ್ದಾರೆ. ಇವರಿಗೆ ಸದನ ನಡೆಯುವುದು ಅಗತ್ಯವಿಲ್ಲ. ರಾಜ್ಯವನ್ನು ಲೂಟಿ ಮಾಡುವುದು, ಜನರಿಗೆ ಅನ್ಯಾಯ ಮಾಡುವುದೊಂದೇ ಇವರ ಗುರಿ. ಇವರು ಏನೇ ಗದ್ದಲ ಎಬ್ಬಿಸಿದರು ಸತ್ಯವೇನು? ಎಂಬುದು ಜನರಿಗೆ ಗೊತ್ತು" ಎಂದು ವಾಗ್ದಾಳಿ ನಡೆಸಿದ್ದಾರೆ.












Click it and Unblock the Notifications