ನಾನು ಡಿಸಿಎಂ ಸ್ಥಾನದ ಆಕಾಂಕ್ಷಿಯಲ್ಲ : ಡಿಕೆಶಿ
ಬೆಂಗಳೂರು, ಆ.6: ಬಳ್ಳಾರಿ ಪ್ರವಾಸನಿರತರಾಗಿರುವ ಇಂಧನ ಸಚಿವ ಡಿ.ಕೆ ಶಿವಕುಮಾರ್ ಅವರು ರಾಜ್ಯದಲ್ಲಿ ಹೊಸದಾಗಿ ಎದ್ದಿರುವ ಡಿಸಿಎಂ ಹುದ್ದೆ ಅಲೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. 'ನಾನು ಡಿಸಿಎಂ ಸ್ಥಾನದ ಆಕಾಂಕ್ಷಿಯಲ್ಲ' ಎಂದು ನೇರವಾಗಿ ಸ್ಪಷ್ಟಪಡಿಸಿದ್ದಾರೆ.
ಉಪ ಚುನಾವಣೆ ಸಂಬಂಧಿಸಿದಂತೆ ಇಲ್ಲಿಗೆ ಬಂದಿರುವ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿ, 'ನಾನೊಬ್ಬ ಶಿಸ್ತಿನ ಕಾಂಗ್ರೆಸ್ ಕಾರ್ಯಕರ್ತ. ಅಧಿಕಾರ, ಹುದ್ದೆ ನೀಡುವುದು ಪಕ್ಷದ ವರಿಷ್ಠರಿಗೆ ಬಿಟ್ಟಿದ್ದು. ಪ್ರಸ್ತುತ ರಾಜ್ಯದಲ್ಲಿ ಡಿಸಿಎಂ ಹುದ್ದೆ ಸೃಷ್ಟಿ ಕುರಿತಂತೆ ನಾನು ಯಾವುದೇ ಪ್ರತಿಕ್ರಿಯೆ ನೀಡಲು ಸಿದ್ಧನಿಲ್ಲ ಮತ್ತು ನಾನು ಆ ಸ್ಥಾನಕ್ಕೆ ಲಾಬಿ ನಡೆಸಿಲ್ಲ' ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರಿಗೆ ಅಧಿಕಾರ ನೀಡುವ ಬಗ್ಗೆ ಕೇಂದ್ರ ನಾಯಕರು ತೀರ್ಮಾನ ಕೈಗೊಳ್ಳುತ್ತಾರೆ.ಇಂದು ಅವರ ಹುಟ್ಟುಹಬ್ಬ. ಅವರ ಆಸೆ, ಆಕಾಂಕ್ಷೆ ಈಡೇರಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದರು. [ಹುಟ್ಟುಹಬ್ಬದಂದು ಮನಬಿಚ್ಚಿ ಮಾತನಾಡಿದ ಪರಮೇಶ್ವರ್]
ಸ್ಥಳೀಯ ಕಾರ್ಯಕರ್ತರಲ್ಲಿ ಎದ್ದಿದ್ದ ಸಣ್ಣ ಪ್ರಮಾಣದ ಅಸಮಾಧಾನವನ್ನು ನಾನು ಅರ್ಧ ಗಂಟೆಯಲ್ಲೇ ಇತ್ಯರ್ಥ ಪಡಿಸಿದ್ದೇನೆ. ಇನ್ನು ಯಾವುದೇ ಗೊಂದಲಗಳಿಲ್ಲ. ಸಂಘಟಿತರಾಗಿ ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಎಲ್ಲರೂ ಒಂದಾಗಿದ್ದೇವೆ ಎಂದು ಹೇಳಿದರು.

ಹಾಗಾದರೆ ಡಿಕೆಶಿ ಯಾರ ಪರ?
ನಾನು ಭವಿಷ್ಯ ಹೇಳುವುದಿಲ್ಲ. ಲೋಕಸಭೆ ಚುನಾವಣೆ ಜಿ ಪರಮೇಶ್ವರ್ ನಾಯಕತ್ವದಲ್ಲೇ ನಡೆಯಲಿದೆ. ಅವರ ಅಧ್ಯಕ್ಷತೆ ಬಗ್ಗೆ ಯಾವುದೇ ಅಪಸ್ವರ ಬೇಡ. ರಾಜಕೀಯದಲ್ಲಿ ಯಾರೂ ಯಾರನ್ನು ಹತ್ತಿಕ್ಕಲು ಸಾಧ್ಯವಿಲ್ಲ. ನಮ್ಮ ಪಕ್ಷ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದಿದ್ದ ಡಿಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಪರ ಬ್ಯಾಟಿಂಗ್ ಆರಂಭಿಸಿದ್ದಾರೆ.
ಚುನಾವಣೆಗೂ ಮುನ್ನ ಡಿಕೆಶಿ ನೀಡಿದ್ದ ಹೇಳಿಕೆ
ಚುನಾವಣೆಗೂ ಮುನ್ನ ಡಿಕೆಶಿ ನೀಡಿದ್ದ ಹೇಳಿಕೆ ಇಲ್ಲಿದೆ ನೋಡಿ

ಸಿದ್ದರಾಮಯ್ಯ ಅವರಿಗೆ ಇರಸು ಮುರಸು
ಕರ್ನಾಟಕದಲ್ಲಿ ನನ್ನ ಅಧಿಕಾರ ಇರುವವರೆಗೂ ನಾನೊಬ್ಬನೇ ಸಿಎಂ, ಡಿಸಿಎಂ ಹುದ್ದೆ ಸೃಷ್ಟಿ ಅನಗತ್ಯ ಎನ್ನುತ್ತಾ ಬಂದಿರುವ ಸಿದ್ದರಾಮಯ್ಯ ಅವರಿಗೆ ಕಳೆದ ಲೋಕಸಭೆ ಚುನಾವಣೆ ಫಲಿತಾಂಶ ಕೈಕೊಟ್ಟ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಹೈಕಮಾಂಡ್ ಮುಂದೆ ಕೈಕಟ್ಟಿ ನಿಲ್ಲಬೇಕಾಗಿದೆ.
ಬಹುದಿನಗಳಿಂದ ಡಿಸಿಎಂ ಹುದ್ದೆ ಆಕಾಂಕ್ಷಿಯಾಗಿರುವ ಜಿ ಪರಮೇಶ್ವರ್ ಅವರು ಈ ಬಾರಿ ಹೇಗಾದರೂ ಸಿದ್ದರಾಮಯ್ಯ ಅವರ ಸೀಟಿನ ಅರ್ಧ ಭಾಗ ಆಕ್ರಮಿಸುವ ಯೋಜನೆಯಲ್ಲಿದ್ದಾರೆ. ಸಿದ್ದು ಹಾಗೂ ಬೆಂಬಲಿಗರ ನಡೆ ಇನ್ನೂ ನಿಗೂಢವಾಗಿದೆ.

ಡಿಕೆಶಿ ಕುಟುಂಬಕ್ಕೆ ಮತ್ತೆ ನೋಟಿಸ್
ಡಿಕೆ ಶಿವಕುಮಾರ್ ಅವರ ಕುಟುಂಬ ಹಾಗೂ ತಮ್ಮ ಡಿಕೆ ಸುರೇಶ್ ಅವರ ಗ್ರಾನೈಟ್ ಕಂಪನಿ ವಿರುದ್ಧ ಹೈಕೋರ್ಟ್ ನೋಟಿಸ್ ನೀಡಿದೆ. ಅಕ್ರಮ ಕಲ್ಲುಗಣಿಗಾರಿಕೆ ಬಗ್ಗೆ ಸಿಬಿಐ ತನಿಖೆ ನಡೆಯಲಿ ಎಂದು ಸಲ್ಲಿಸಿದ್ದ ಅರ್ಜಿ ಪರಿಗಣಿಸಿ ನೋಟಿಸ್ ಜಾರಿ ಮಾಡಲಾಗಿದೆ. ಈ ಗೊಂದಲದ ನಡುವೆ ಡಿಕೆಶಿ ಅವರು ಪರಮೇಶ್ವರ್ ಅವರ ಪರ ನಿಂತಿದ್ದಾರೆ.
ಪರಮೇಶ್ವರ್ ಅವರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಬಂದಿದ್ದಾರೆ. ದಲಿತ ಸಮುದಾಯ ಅಹವಾಲು ಹಾಗೂ ಆಕಾಂಕ್ಷೆಯನ್ನು ಹಿರಿಯ ನಾಯಕರಿಗೆ ತಿಳಿಸಿ ಡಿಸಿಎಂ ಸ್ಥಾನಕ್ಕೆ ಭರ್ಜರಿಯಾಗಿ ಲಾಬಿ ಮಾಡಿದ್ದಾರೆ.












Click it and Unblock the Notifications