ಬೆಂಗಳೂರು ಮನೆ ಕಳೆದುಕೊಂಡ ಗಾಲಿ ಜನಾರ್ದನ ರೆಡ್ಡಿ
ಬೆಂಗಳೂರು, ಆ.17: ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಜೈಲುವಾಸಿಯಾಗಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಮತ್ತೊಮ್ಮೆ ಹಿನ್ನಡೆಯಾಗಿದೆ. ಮನಿ ಲಾಂಡ್ರಿಂಗ್ ವಿರೋಧಿ ವಿಶೇಷ ನ್ಯಾಯಾಲಯವು ಕೋಟ್ಯಂತರ ಮೊತ್ತದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ. ಇದರಲ್ಲಿ ಬೆಂಗಳೂರಿನ ಫ್ಲಾಟ್ ಹಾಗೂ ಬಳ್ಳಾರಿಯ ಒಂದು ಮನೆ ಪ್ರಮುಖವಾಗಿದೆ.
ಬಹುಕೋಟಿ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಲಿ ಜನಾರ್ದನ ರೆಡ್ಡಿ ಹಾಗೂ ಅವರ ಪತ್ನಿ ಅರುಣಾ ಅವರಿಗೆ ಸೇರಿರುವ ಸುಮಾರು 37.86 ಕೋಟಿ ರು ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.[ರೆಡ್ಡಿಗೆ ಷರತ್ತುಬದ್ಧ ಜಾಮೀನು]
ಮುಟ್ಟುಗೋಲಾದ ಆಸ್ತಿಯಲ್ಲಿ 4 ಕೋಟಿ ರು ಮೌಲ್ಯದ ಬೆಂಗಳೂರಿನ ಫ್ಲಾಟ್, ಬಳ್ಳಾರಿಯಲ್ಲಿದ್ದ 14 ಲಕ್ಷ ರು ಮೌಲ್ಯದ ಮನೆ, ನಿಶ್ಚಿತ ಠೇವಣಿ ಹಾಗೂ ಬ್ಯಾಂಕ್ ಖಾತೆಯಲ್ಲಿರುವ ಮೊತ್ತವನ್ನು ಜಾರಿ ನಿರ್ದೇಶನಾಲಯ ವಶಕ್ಕೆ ತೆಗೆದುಕೊಂಡಿದೆ. ಅಕ್ರಮ ಹಣ ಚಲಾವಣೆ ನಿರ್ಬಂಧ ಕಾಯ್ದೆ(PMLA)ಯಡಿ ಮಾಜಿ ಸಚಿವ ಜನಾರ್ದನರೆಡ್ಡಿಗೆ ಸೇರಿರುವ ಸುಮಾರು 880 ಕೋಟಿ ರೂ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆಗೆ 2012ರಲ್ಲೇ ಚಾಲನೆ ಸಿಕ್ಕಿತ್ತು.

ಗಾಲಿ ರೆಡ್ಡಿ ಅವರ ಪತ್ನಿ ಜಿ ಲಕ್ಷ್ಮಿ ಅರುಣಾ ಅವರ ಒಡೆತನದ ಬಳ್ಳಾರಿ ಜಿಲ್ಲೆಯ ಹವಂಭಾವಿಯಲ್ಲಿರುವ ಮೆಸರ್ಸ್ ಅಸೋಸಿಯೇಟೆಡ್ ಮೈನಿಂಗ್ ಕಂಪನಿ(ಗುರು ಐರನ್ ಓರ್ ಮೈನ್ಸ್) ಕಂಪನಿಯ ಮೊತ್ತ 37,88,66,108.70 ಜಾರಿ ನಿರ್ದೇಶನಾಲಯ ಕೈ ಸೇರಿದೆ.[880 ಕೋಟಿ ರೂ ಆಸ್ತಿ ಮುಟ್ಟುಗೋಲು?]
ಇದಲ್ಲದೆ ಗಣಿಗಳ ಮಾಲೀಕರು ಮತ್ತು ನೋಂದಾಯಿತ ಮಾರಾಟಗಾರರ ಬ್ಯಾಂಕ್ ಖಾತೆಗಳಿಂದ ಈ ಲಾಭಾಂಶದ ಮೊತ್ತ ಹಲವು ಖಾತೆಗಳನ್ನು ದಾಟಿಕೊಂಡು, ಜನಾರ್ದನ ರೆಡ್ಡಿ ಮತ್ತು ಒಎಂಸಿ ಒಡತಿ ಗಾಲಿ ರೆಡ್ಡಿ ಅವರ ಪತ್ನಿ ಜಿ.ಲಕ್ಷ್ಮಿ ಅರುಣಾ ಅವರ ಖಾತೆ ಸೇರುತ್ತಿತ್ತು. ನಂತರ ರೆಡ್ಡಿ ದಂಪತಿ ಸ್ವಂತ ಚೆಕ್ಕುಗಳ ಮೂಲಕವೇ ಹಣವನ್ನು ಡ್ರಾ ಮಾಡುತ್ತಿದ್ದರು. ಹೀಗೆ 2,800 ಕೋಟಿ ರೂಪಾಯಿಗೂ ಹೆಚ್ಚು ಮೊತ್ತ ಅವರ ಖಜಾನೆಗೆ ಬಂದಿದೆ ಎನ್ನಲಾಗಿದೆ.
2007 ರಿಂದ 2009ರವರೆಗೆ 215 ಕೋಟಿ ರಫ್ತು ಸುಂಕ ವಂಚನೆ ಹಾಗೂ ಸರ್ಕಾರಕ್ಕೆ ಓಎಂಸಿಯಿಂದ 5100 ಕೋಟಿ ಮತ್ತು ಎಎಂಸಿ ಯಲ್ಲಿ 480 ಕೋಟಿ ರು ನಷ್ಟ ಉಂಟಾಗಿದೆ ಎಂದು ಕೋರ್ಟಿಗೆ 2012ರಲ್ಲಿ ಸಿಬಿಐ ಸಲ್ಲಿಸಿರುವ ಚಾರ್ಚ್ ಶೀಟ್ ನಲ್ಲಿ ಹೇಳಲಾಗಿದೆ. ಈ ಆಧಾರದ ಮೇಲೆ ತನಿಖೆ ಮುಂದುವರೆಸಿ ಪಿಎಂಎಲ್ ಎ ಕೋರ್ಟ್ ಆದೇಶದಂತೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಚೇರ್ಮನ್ ಕೆ ರಾಮಮೂರ್ತಿ ಹೇಳಿದ್ದಾರೆ.












Click it and Unblock the Notifications