ಮೆಟ್ರೋ ಕಾಮಗಾರಿಗೆ ಮತ್ತೊಂದು ಬಲಿ

ಜಾರ್ಖಂಡ್ ಮೂಲದ ಕಮಲೇಶ್ ರಾವ್(32) ಮೃಪತಪಟ್ಟ ಕಾರ್ಮಿಕರಾಗಿದ್ದಾರೆ. ಹೆಸರಘಟ್ಟ ಸ್ಟೇಷನ್ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಇವರು, ಕಬ್ಬಿಣದ ರಾಡ್ ಗಳನ್ನು ಬಳಸಿ ನಿರ್ಮಿಸಿದ್ದ ಮೆಟ್ಟಿಲುಗಳ ಮೇಲೆ ನಿಂತು ಕೆಲಸ ಮಾಡುತ್ತಿದ್ದರು.
ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಮೃತಪಟ್ಟಿದ್ದಾರೆ. ತಕ್ಷಣ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ತಲೆಗೆ ತೀವ್ರವಾದ ಪೆಟ್ಟು ಬಿದ್ದು, ರಕ್ತ ಸೋರಿಕೆಯಾದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ಕಮಲೇಶ್ ಮೃತಪಟ್ಟಿದ್ದಾರೆ.
ಭಾನುವಾರ ಮೆಟ್ರೋ ಕಾಮಗಾರಿಗೆ ರಜೆ ಇರುತ್ತದೆ. ಆದರೆ, ಹೆಸರಘಟ್ಟ ನಿಲ್ದಾಣ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದ ಕೆಲವು ಕಾರ್ಮಿಕರು ಅರ್ಧದಿನ ಕೆಲಸ ಮಾಡಿ, ರಜೆ ತೆಗೆದುಕೊಳ್ಳುವುದಾಗಿ ಕೆಲಸಕ್ಕೆ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಕಮಲೇಶ್ ಕಾಲುಜಾರಿ ಬಿದ್ದು ಮೃತಪಟ್ಟಿದ್ದಾರೆ. ಕಾಮಗಾರಿಯ ಗುತ್ತಿಗೆ ಪಡೆದಿರುವ ವಿನೋದ್ ರಾಮ್ ಮತ್ತು ಇತರರ ವಿರುದ್ಧ ಪೀಣ್ಯ ಠಾಣೆಯಲ್ಲಿ ನಿರ್ಲಕ್ಷ್ಯತೆ ದೂರು ದಾಖಲಾಗಿದೆ.
ಕಮಲೇಶ್ ಸಾವಿನ ಕುರಿತು ತನಿಖೆ ನಡೆಸಿ, ಕ್ರಮ ಕೈಗೊಳ್ಳುವುದಾಗಿ ಡಿಸಿಪಿ ಸಂದೀಪ್ ಪಾಟೀಲ್ ಹೇಳಿದ್ದಾರೆ. ಶವದ ಮರಣೋತ್ತರ ಪರೀಕ್ಷೆ ನಡೆಸಿ, ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.












Click it and Unblock the Notifications