ಬೈಯಪ್ಪನಹಳ್ಳಿಯಲ್ಲಿ ಮೆಟ್ರೋ ರೈಲು ಅಪಘಾತ ?
ಬೆಂಗಳೂರು, ಏಪ್ರಿಲ್ 28: ಬೈಯಪ್ಪನಹಳ್ಳಿ ಮೆಟ್ರೋ ಡಿಪೋದಲ್ಲಿ ಮೆಟ್ರೋ ರೈಲೊಂದು ಕಬ್ಬಿಣದ ತಡೆಗೋಡೆ ದಾಟಿ ಮುಂದಕ್ಕೆ ಹೋದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಏ.21ರ ಮಧ್ಯಾಹ್ನ 3 ಗಂಟೆಗೆ ಎಮರ್ಜೆನ್ಸಿ ತಂಡಕ್ಕೆ ತರಬೇತಿ ನೀಡುತ್ತಿದ್ದಾಗ ಲೋಕೊಪೈಲಟ್ ಅಜಾಗರೂಕತೆಯಿಂದ ರೈಲು ಚಲಾಯಿಸಿದ್ದಾರೆ. ಇದರಿಂದ ಹಳಿಗೆ ಅಳವಡಿಸಿದ್ದ ಕಬ್ಬಿಣದ ತಡೆಗೆ ರೈಲು ಡಿಕ್ಕಿ ಹೊಡೆದಿದೆ. ಈ ರಭಸಕ್ಕೆ ಹಳಿಯ ಮೇಲೆ ಹಾಕಿದ್ದ ಕಬ್ಬಿಣದ ತಡೆಗೋಡೆ ಅಂದಾಜು 1 ಅಡಿ ಹಿಂದಕ್ಕೆ ಚಲಿಸಿದೆ.
ಸಿಸಿ ಕ್ಯಾಮರಾ ದೃಶ್ಯ ಪರಿಶೀಲಿಸಿದಾಗ ರೈಲು ಕಬ್ಬಿಣದ ತಡೆಗೋಡೆಗೆ ಡಿಕ್ಕಿಯಾಗಿರುವುದು ಹಾಗೂ ಕೆಲ ನಿಮಿಷದ ನಂತರ ಹಿಂದಕ್ಕೆ ಚಲಿಸಿರುವುದು ಪತ್ತೆಯಾಗಿದೆ. ಈ ಕುರಿತು ಹಿರಿಯ ಅಧಿಕಾರಿಗಳು ಆಡಳಿತ ಮಂಡಳಿಗೆ ಇ-ಮೇಲ್ ಮೂಲಕ ಮಾಹಿತಿ ನೀಡಿದ್ದಾರೆ.

ತರಾತುರಿ ತರಬೇತಿ: ಕಳೆದ ತಿಂಗಳು ಮೆಟ್ರೋ ಸಿಬ್ಬಂದಿ ಮುಷ್ಕರ ನಡೆಸಲು ಸಿದ್ಧತೆ ನಡೆಸಿದ್ದಾಗ, ತುರ್ತು ಪರಿಸ್ಥಿತಿಯಲ್ಲಿ ರೈಲು ಕಾರ್ಯಾಚರಣೆಗೊಳಿಸಲು ಬಿಎಂಆರ್ ಸಿಎಲ್ 90 ಸಿಬ್ಬಂದಿಯ ವಿಶೇಷ ತಂಡ ರಚಿಸಿತ್ತು. ಈ ಸಿಬ್ಬಂದಿಗಳಿಗೆ ತರಾತುರಿಯಲ್ಲಿ ತರಬೇತಿ ನೀಡಿರುವುದ ಪರಿಣಾಮ ಈ ಅವಘಡ ಸಂಭವಿಸಿದೆ ಎಂದು ಮೆಟ್ರೋ ನೌಕರರ ಸಂಘದ ಸದಸ್ಯರು ಆರೋಪಿಸಿದ್ದಾರೆ.











Click it and Unblock the Notifications