ಆಶಾ ಕಾರ್ಯಕರ್ತೆಯರ ಬೃಹತ್ ಪ್ರತಿಭಟನೆ: ಮೆಜೆಸ್ಟಿಕ್ ಸುತ್ತ ಟ್ರಾಫಿಕ್ ಜಾಮ್
ಬೆಂಗಳೂರು, ಜನವರಿ 3: 15 ತಿಂಗಳಿಂದ ಬಾಕಿ ಇರುವ ಪ್ರೋತ್ಸಾಹ ಧನವನ್ನು ನೀಡುವಂತೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ಬೆಂಗಳೂರಿನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ ವರೆಗೆ ಪ್ರತಿಭಟನಾ ಮೆರವಣಿಗೆ ಆರಂಭಗೊಂಡಿದ್ದು, ಸುಮಾರು 10 ಸಾವಿರಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
ಹಲವು ದಿನಗಳ ಹಿಂದೆಯೇ ಹಲವು ಬಾರಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ, 300 ರೂ, 500 ಹೀಗೆ ಒಬ್ಬೊಬ್ಬರಿಗೆ ಮನಸಿಗೆ ಬಂದಂತೆ ಹಣವನ್ನು ಹಾಕಿದ್ದಾರೆ. ಹದಿನೈದು ತಿಂಗಳಿನಿಂದ ಎಷ್ಟು ಹಣ ನೀಡಬೇಕೋ ಅಷ್ಟು ಹಣವನ್ನು ನೀಡಿಲ್ಲ ಎನ್ನುವುದು ಆಶಾ ಕಾರ್ಯಕರ್ತೆಯರ ದೂರಾಗಿದೆ.

ಆಶಾ ಕಾರ್ಯಕರ್ತೆಯರು ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆಯ ಅಡಿಯಲ್ಲಿ ಬರುತ್ತಾರೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇವರು ಕೆಲಸ ಮಾಡುತ್ತಾರೆ. ಒಂದು ಸಾವಿರ ಜನಸಂಖ್ಯೆಗೆ ಒಬ್ಬರಂತೆ ರಾಜ್ಯದಲ್ಲಿ 41 ಸಾವಿರ ಕಾರ್ಯಕರ್ತೆಯರು ಕೆಲಸ ಮಾಡುತ್ತಿದ್ದಾರೆ.
ಮೂವತ್ತು ಜಿಲ್ಲೆಗಳಿಂದ 41 ಸಾವಿರ ಕಾರ್ಯಕರ್ತೆಯರು ಕೆಲಸ ಮಾಡುತ್ತಿದ್ದಾರೆ. ಪ್ರತಿಭಟನೆ ಹಿನ್ನೆಲೆ ನಿನ್ನೆಯಿಂದಲೇ ಕೆಲಸ ನಿಲ್ಲಿಸಿದ್ದಾರೆ.
ಕೇಂದ್ರ ಸರ್ಕಾರದಿಂದ ಕಳೆದ ಹದಿನೈದು ತಿಂಗಳಿನಿಂದ ಪ್ರೋತ್ಸಾಹ ಧನ ಬಂದಿಲ್ಲ. ಕಾರ್ಯಕರ್ತೆಯರಿಗೆ ಬರಬೇಕಾದ ಎಂಸಿಟಿಸಿ(ಮದರ್ ಚೈಲ್ಡ್ ಟ್ರ್ಯಾಕಿಂಗ್ ಸಿಸ್ಟಂ) ರಾಷ್ಟ್ರೀಯ ಆರೋಗ್ಯ ಅಭಿಯಾನದ ಹಣ ಕೇಂದ್ರ ಸರ್ಕಾರ ಬಾಕಿ ಉಳಿಸಿಕೊಂಡಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಸುಮಾರು 25 ರಿಂದ 30 ಸಾವಿರ ಹಣ ಬಾಕಿ ಬರಬೇಕಿದೆ.
ಆರ್‌ಸಿಎಚ್ ಪೋರ್ಟಲ್‌ನಲ್ಲಿ ಆಶಾ ಕಾರ್ಯಕರ್ತೆಯರ ಚಟುವಟಿಕೆಗಳನ್ನು ಡಿ ಲಿಂಕ್ ಮಾಡಬೇಕು. ನಿಗದಿತ 12 ಸಾವಿರ ವೇತನ ನೀಡುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ.
ಇಂದು ಸ್ವಾತಂತ್ರ್ಯ ಉದ್ಯಾನದ ಎದುರು ಪ್ರತಿಭಟನೆಗೆ ಪೊಲೀಸರು ಅವಕಾಶ ಮಾಡಿಕೊಟ್ಟಿದ್ದಾರೆ. ಒಂದೊಮ್ಮೆ ಬೇಡಿಕೆ ಈಡೇರದಿದ್ದಲ್ಲಿ ಸ್ವಾತಂತ್ರ್ಯ ಉದ್ಯಾನದ ಎದುರು ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಕಾರ್ಯಕರ್ತೆಯರು ಎಚ್ಚರಿಕೆ ನೀಡಿದ್ದಾರೆ.

ಮೆಜೆಸ್ಟಿಕ್, ಕೆಆರ್ ವೃತ್ತ, ಆನಂದ್ ರಾವ್ ಸರ್ಕಲ್, ಶೇಷಾದ್ರಿಪುರಂ, ಕಾರ್ಪೊರೇಷನ್, ಕೆಜಿ ರಸ್ತೆ ಸೇರಿದಂತೆ ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ಆಶಾ ಕಾರ್ಯಕರ್ತೆಯರ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಭರವಸೆ ನೀಡಿದ್ದಾರೆ. ಆಶಾ ಕಾರ್ಯಕರ್ತೆಯರ ಸಂಬಳ ಹೆಚ್ಚಳ ಕುರಿತು ಈಗಾಗಲೇ ಇಲಾಖೆಗೆ ಪತ್ರ ಬರೆದಿದ್ದೇನೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸಿಗುವ ಪ್ರೋತ್ಸಾಹ ಧನವನ್ನು ಒಟ್ಟಿಗೆ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ. ನಿಮ್ಮ ರಕ್ಷಣೆ ನಮ್ಮ ಆದ್ಯ ಕರ್ತವ್ಯ ಶೀಘ್ರವೇ ಅವರ ಬೇಡಿಕೆ ಈಡೇರಿಸುತ್ತೇವೆ ಎಂದು ಭರವಸೆ ನೀಡಿದರು.












Click it and Unblock the Notifications