BREAKING: ಬೆಂಗಳೂರಿನ ಆರ್‌ಟಿ ನಗರದಲ್ಲಿ ಅಗ್ನಿ ಅವಘಡ: ರಕ್ಷಣಾ ಕಾರ್ಯ
ಬೆಂಗಳೂರು, ಏಪ್ರಿಲ್ 05: ಬೆಂಗಳೂರಿನಲ್ಲಿ ಐದಾರು ದಿನಗಳ ಹಿಂದೆ ಕಾಡುಗೋಡಿ ವ್ಯಾಪ್ತಿಯಲ್ಲಿ ಅಗ್ನಿ ಅವಘಡ ಕಾಣಿಸಿಕೊಂಡಿತ್ತು. ಇದೀಗ ನಗರದ ಹೃದಯಭಾಗದಲ್ಲಿ ಕಟ್ಟಡವೊಂದರಲ್ಲಿ ಬೆಂಕಿ ಹೊತ್ತಿ ಉರಿದಿದೆ ಹಲವು ಕೆಲಸಗಾರರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಕಟ್ಟಡದೊಳಗೆ ಸಿಲುಕಿದವರ ರಕ್ಷಣಾ ಕಾರ್ಯಾಚರಣೆ ನಡೆದಿದೆ.
ಶುಕ್ರವಾರ (ಏಪ್ರಿಲ್ 05) ರಂದು ಆರ್‌ಟಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಟ್ಟಡದೊಳಗೆ ಬೆಂಕಿ ಕಂಡು ಬಂದಿದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆರ್‌ಟಿ ನಗರದ 80 ಅಡಿ ರಸ್ತೆಯಲ್ಲಿರುವ ಮಿರಾಕಲ್ ಡ್ರೀಂಕ್ಸ್ ಕಟ್ಟಡದಲ್ಲಿ ಈ ಅಗ್ನಿ ಅವಘಡ ಸಂಭವಿಸಿದೆ ಎಂದು ವರದಿ ಆಗಿದೆ.

ಸ್ಥಳಿಯರು ಸೇರಿದಂತೆ ಬೇರೆ ರಾಜ್ಯಗಳಿಂದ ಬಂದವರು ಸಹ ಈ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದರು. ಘಟನೆಯಲ್ಲಿ ಅವರೇ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ. ಬೆಂಕಿ ಕೆನ್ನಾಲಿಗೆ ಇಡೀ ಬಿಲ್ಡಿಂಗ್ ಆವರಿಸುತ್ತಿದ್ದಂತೆ ದಟ್ಟ ಹೊಗೆ ನೋಡ ನೋಡುತ್ತಿದ್ದಂತೆ ಬಾನೆತ್ತರಕ್ಕೆ ಚಿಮ್ಮಿತು.
ಅಗ್ನಿ ಶಾಮಕ, ಪೊಲೀಸ್ ಸಿಬ್ಬಂದಿ ದೌಡು
ಕೂಡಲೇ ಸ್ಥಳೀಯರು ಪೊಲೀಸರಿಗೆ, ಅಗ್ನಿ ಶಾಮದ ದಳ ಸಿಬ್ಬಂದಿ ಹಾಗೂ ಮಾಧ್ಯಮಗಳಿಗೆ ಕರೆ ಮಾಡಿ ಮಾಹಿತಿ ನೀಡಿದರು. ಸದ್ಯ ಆರ್‌ಟಿ ನಗರದಲ್ಲಿ ಬೆಂಕಿ ಹೊತ್ತಿಕೊಂಡಿರುವ ಕಟ್ಟಡದ ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ, ಪೊಲೀಸರು ದೌಡಾಯಿಸಿದ್ದಾರೆ.
ಬೆಂಕಿ ಹೊತ್ತಿಕೊಂಡ ಕೆಲವೇ ಕ್ಷಣಗಳಲ್ಲಿ ಸ್ಥಳೀಯರು ಕಟ್ಟಡಕ್ಕೆ ಹೊರಗೋಡೆಗೆ ಏನಿ ಇಟ್ಟು ಕಟ್ಟಡದ ಒಂದು ಬದಿ ಏರಿ ಒಳಗೆ ಸಿಲುಕಿದವರಲ್ಲಿ ಸಾಧ್ಯವಾದವರನ್ನು ರಕ್ಷಿಸಲು ಮುಂದಾಗಿದ್ದಾರೆ. ಕೆಲವೇ ನಿಮಿಷಗಳಲ್ಲಿ ಬಂದ ಬಂದ ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದರು.
ಜೀವ ಹಾನಿಯಾಗಿಲ್ಲ
ಮೂಲಗಳ ಮಾಹಿತಿ ಪ್ರಕಾರ ಯಾವುದೇ ಹಾನಿ ಆಗಿಲ್ಲ. ಅದೃಷ್ಟವಶಾತ್ ಜೀವ ಹಾನಿ, ಗಾಯಗಳು ಸಂಭವಿಸಿಲ್ಲ ಎನ್ನಲಾಗಿದೆ. ಮೇಲ್ನೋಟಕ್ಕೆ ಶಾರ್ಟ್ ಸರ್ಕ್ಯೂಟ್‌ನಿಂದ ಈ ಘಟನೆ ನಡೆದಿರುಬಹದು ಎಂದು ಶಂಕಿಸಲಾಗಿದೆ. ತನಿಖೆ ಬಳಿಕ ಸತ್ಯಾಸತ್ಯತೆ ತಿಳಿದು ಬರಲಿದೆ.
ಟೆರೆಸ್‌ಗೆ ಓಡಿ ಹೋದ ಸಿಬ್ಬಂದಿ
IDS next business solutions pvt ltd ಮತ್ತು ಮಿರಾಕಲ್ ಡ್ರಿಂಕ್ಸ್ ಎಂಬ ಎರಡು ಕಂಪನಿಗಳು ಒಂದೇ ಕಟ್ಟಡದಲ್ಲಿದ್ದವು. ವೆಡ್ ಎಲಿಕ್ಸಿರ್ ಗ್ಲೋಬಲ್ ಪ್ರೈ.ಲಿ. ಹೆಸರಿನ ಕಟ್ಟಡ ಇದಾಗಿತ್ತು. ಈ ಕಟ್ಟಡದ ನೆಲಮಹಡಿಯಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕಂಪನಿಯ ಸಿಬ್ಬಂದಿಗಳು ಟೆರೆಸ್‌ಗೆ ಓಡಿ ಹೋಗಿದ್ದಾರೆ. ಘಟನೆಗೂ ಮೊದಲು ಸುಮಾರು 60ಕ್ಕೂ ಹೆಚ್ಚು ಸಿಬ್ಬಂದಿ ಇದ್ದರು. ಘಟನೆಯಲ್ಲಿ ಸದ್ಯ ಯಾರಿಗೂ ಪ್ರಾಣಾಪಾಯ ಆಗಿಲ್ಲ ಎಂದು ತಿಳಿದು ಬಂದಿದೆ.
ಕಾಡುಗೋಡಿ ಅರಣ್ಯದಲ್ಲಿ ಇತ್ತೀಚೆಗೆ ಬೆಂಕಿ ಜ್ವಾಲೆ
ಇತ್ತೀಚೆಗೆ ಬೆಂಗಳೂರಿನಲ್ಲಿ ವೈಟ್‌ಫಿಲ್ಡ್ ರಸ್ತೆಯ ಐಟಿಪಿಎಲ್ ಮುಂಭಾಗದಲ್ಲಿರುವ ಕಾಡುಗೋಡಿಯ ನೂರಾರು ಎಕರೆ ಅರಣ್ಯ ಪ್ರದೇಶದಲ್ಲಿ ದಿಢೀರನೇ ಬೆಂಕಿ ಕಾಣಿಸಿಕೊಂಡಿತ್ತು. ನೋಡ ನೋಡುತ್ತಿದ್ದಂತೆ ಬೆಂಕಿ ದಟ್ಟ ಹೋಗೆ ಆವರಿಸಿಕೊಂಡು ಸ್ಥಳೀಯರನ್ನು ಚಿಂತೇಗಿಡು ಮಾಡಿತ್ತು. ಕೂಡಲೇ ಸ್ಥಳಕ್ಕೆ ಬಂದ ಎರಡು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕೆಲಸ ಮಾಡಿದ್ದವು. ಬೇಸಿಗೆಯ ಕಾರಣ ಬಿಸಿಲು ಹೆಚ್ಚಿದ್ದು, ಈ ವೇಳೆ ಬೆಂಕಿ ಒಂದು ಕಡೆ ಹತ್ತಿದರೆ ಅಷ್ಟು ಬೇಗ ನಂದಿಸಲು ಸಾಧ್ಯವಾಗುವುದಿಲ್ಲ. ಈ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕಿದೆ.












Click it and Unblock the Notifications