Namma Metro: 'ಹಳದಿ ಮಾರ್ಗ'ಕ್ಕೆ ಮೆಟ್ರೋ ಪೂರೈಕೆಗೆ ಕೇಂದ್ರ ಸಚಿವರಿಂದ ಗ್ರೀನ್ ಸಿಗ್ನಲ್
ಬೆಂಗಳೂರು, ಜನವರಿ 06: ಬೆಂಗಳೂರು ' ನಮ್ಮ ಮೆಟ್ರೋ' ಹಳದಿ ಮಾರ್ಗದ ಉದ್ಘಾಟನೆಗೆ ಕಾತರದಿಂದ ಕಾಯುತ್ತಿರುವ ಜನರಿಗೆ ಇಂದು ಜನವರಿ 06ಕ್ಕೆ ಸಿಹಿ ಸುದ್ದಿ ಸಿಕ್ಕಿದೆ. ಕೊಲ್ಕತ್ತಾದಲ್ಲಿ ಬೆಂಗಳೂರು ಹಳದಿ ಮಾರ್ಗಕ್ಕೆ ರೈಲು ಸೆಟ್ ಪೂರೈಕೆಗೆ ಕರ್ನಾಟಕ ನಾಯಕರು, ಬಿಎಂಆರ್‌ಸಿಎಲ್ ಅಧಿಕಾರಿಗಳ ಸಮ್ಮುಖದಲ್ಲಿ ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಅವರು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇಂದು ಕೊಲ್ಕತ್ತಾದ ಘಟಕದಿಂದ ರೈಲು ಸೆಟ್ ಬೆಂಗಳೂರಿಗೆ ಪ್ರಯಾಣ ಬೆಳೆಸಲಿವೆ.
ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮತ್ತು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಈ ಬಗ್ಗೆ ಸೋಮವಾರ ಅಧಿಕೃತ ಮಾಹಿತಿ ನೀಡಿದ್ದಾರೆ. ಟಿಟಾಗರ್ ಆತ್ಮ ನಿರ್ಭರ ಭಾರತದ ಮತ್ತೊಂದು ಕೊಡುಗೆ ನೀಡುತ್ತಿದೆ ಎಂದು ಬಣ್ಣಿಸಿರುವ ಬಿಎಂಆರ್‌ಸಿಎಲ್ ಅಧಿಕಾರಿಗಳು ರೈಲು ಪೂರೈಕೆಗೆ ಸಾಕ್ಷಿಯಾದರು. ಇದೇ ವೇಳೆ ಕೇಂದ್ರ ಸಚಿವರು ಟಿಟಾಗರ್ ರೈಲು ಸಿಸ್ಟಮ್ ಘಟಕವನ್ನು ಪರಿಶೀಲಿಸಿದರು.

ನಮ್ಮ ಮೆಟ್ರೋ ಮೈಲಿಗಲ್ಲು: ತೇಜಸ್ವಿ ಸೂರ್ಯ
ಇಂದು ಅದ್ಭುತ ಕಾರ್ಯಕ್ರಮದ ಮೂಲಕ ಬೆಂಗಳೂರಿಗೆ ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿರುವ ಟಿಟಾಘರ್ ಘಟಕದಿಂದ ಬೆಂಗಳೂರಿಗೆ ರೈಲು ಸೆಟ್‌ವೊಂದು ತಲುಪಿಸುವ ಕಾರ್ಯ ಆರಂಭವಾಗಿದೆ. ರೈಲು ಸೆಟ್ ಪೂರೈಕೆಗೆ ವಿದ್ಯುಕ್ತವಾಗಿ ಚಾಲನೆ ದೊರೆತಿದೆ. ಈ ಮೂಲಕ ಬೆಂಗಳೂರು ನಮ್ಮ ಮೆಟ್ರೋ ಮತ್ತೊಂದು ಮೈಲುಗಲ್ಲು ಸಾಧಿಸಿದೆ ಎಂದು ಸಂಸದ ತೇಜಸ್ವಿ ಸೂರ್ಯ ಅವರು ಮಾಹಿತಿ ನೀಡಿದ್ದಾರೆ.
ಕೊಲ್ಕತ್ತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿರುವ ಸಂಸದರು, ನಮ್ಮ ಮೆಟ್ರೋ ಹಳದಿ ಮಾರ್ಗಕ್ಕಾಗಿ ಮೂರು ಮೆಟ್ರೋ ರೈಲನ್ನು ಟಿಟಾಘರ್ ನಲ್ಲಿ ತಯಾರಿಸಲಾಗಿದೆ. ಇಲ್ಲಿಂದ ಮೆಟ್ರೋ ಪೂರೈಕೆಗೆ ಕೇಂದ್ರ ಸಚಿವರು ಹಸಿರು ನಿಶಾನೆ ತೋರಿಸಿದ್ದಾರೆ. ಮುಂದಿನ ದಿನಗಳಲ್ಲಿ ಇಲ್ಲಿಂದಲೇ ತಿಂಗಳಿಗೆ 1 ಮೆಟ್ರೋ ರೈಲು ವಿತರಿಸಲು ತಯಾರಿ ನಡೆಸಲಾಗಿದೆ. ನಂತರ ಸೆಪ್ಟಂಬರ್ ತಿಂಗಳಿನಿಂದ 2 ರೈಲು ಸೆಟ್‌ಗಳನ್ನು ಪೂರೈಸಲು ಟಿಟಾಘರ್ ಬದ್ಧವಾಗಿದೆ ಎಂದು ಹೇಳಿದರು.
ಬೆಂಗಳೂರಿನ ಪ್ರಮುಖ ಮೆಟ್ರೋ ಹಳದಿ ಮಾರ್ಗವನ್ನು ಶೀಘ್ರವೇ ತೆರೆಯಲು ಸರ್ಕಾರ ಬದ್ಧವಾಗಬೇಕು. ಜಯನಗರದ ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರದವರೆಗೆ ನಿರ್ಮಿಸಲಾಗಿರುವ 18.8 ಕಿಮೀ ಉದ್ದದ ಮೆಟ್ರೋ ಹಳದಿ ಮಾರ್ಗವು ಬೆಂಗಳೂರು ದಕ್ಷಿಣದ ಐಟಿಬಿಟಿ ಕಾರಿಡಾರ್‌ಗಳನ್ನು ಸಂಪರ್ಕಿಸುತ್ತದೆ.
ಈ ಮಾರ್ಗದಲ್ಲಿ ಒಮ್ಮೆ ಮೆಟ್ರೋ ಸಂಚಾರ ಕಾರ್ಯಾರಂಭಗೊಂಡರೆ, ಬೆಂಗಳೂರಿನ ಐಟಿ ಹಬ್‌ಗಳು ಮತ್ತು ಕೈಗಾರಿಕಾ ವಲಯಗಳಿಗೆ ಪ್ರಯಾಣಿಸುವ ಸಾವಿರಾರು ಜನರ ಪ್ರಯಾಣವನ್ನು ಸುಲಭಗೊಳಿಸುತ್ತದೆ.
ಜನವರಿ ಅಂತ್ಯಕ್ಕೆ ಬೆಂಗಳೂರಿಗೆ ಟಿಟಾಘರ್ ರೈಲು
ಜನವರಿ 6ರಂದು ಹಳದಿ ಮಾರ್ಗವು ವಾಣಿಜ್ಯ ಕಾರ್ಯಾಚರಣೆಗೆ ತೆರೆದುಕೊಳ್ಳಲಿದೆ ಎಂದೆಲ್ಲ ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿ ಹರಿಡಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ನಮ್ಮ ಮೆಟ್ರೋ ಅಧಿಕಾರಿಗಳು, ಇಂದು ಹಳದಿ ಮಾರ್ಗ ಆರಂಭಿಸುತ್ತಿಲ್ಲ. ಬದಲಾಗಿ ಹೊಸದಾಗಿ ತಯಾರಿಸಿದ ಮೆಟ್ರೋ ರೈಲುಗಳ ಪೂರೈಕೆಗೆ ಚಾಲನೆ ನೀಡಲಾಗುತ್ತದೆ. ಈ ರೈಲು ಜನವರಿ ಅಂತ್ಯಕ್ಕೆ ಬೆಂಗಳೂರಿಗೆ ಬರುತ್ತವೆ ಎಂದು ಬಿಎಂಆರ್‌ಸಿಎಲ್ ಸ್ಪಷ್ಟಪಡಿಸಿದೆ.












Click it and Unblock the Notifications