ಶಾಸಕರ ವಿದೇಶ ಪ್ರವಾಸ ಖಚಿತ : ಗುತ್ತೇದಾರ್
ಬೆಂಗಳೂರು, ಡಿ. 26 : ಶಾಸಕರ ವಿದೇಶ ಪ್ರವಾಸದ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲೇ ಕಾಂಗ್ರೆಸ್ ಶಾಸಕ ಮಾಲೀಕಯ್ಯ ಗುತ್ತೇದಾರ್, ಶಾಸಕರು ವಿದೇಶ ಪ್ರವಾಸಕ್ಕೆ ತೆರಳುವುದು ಖಚಿತ, ಇದೇನು ಅಪರಾಧವಲ್ಲ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಮಾತನಾಡಿದ ಅಫ್ಜಲ್ ಪುರ ಕ್ಷೇತ್ರದ ಶಾಸಕ ಮಾಲೀಕಯ್ಯ ಗುತ್ತೇದಾರ್, ಅಧ್ಯಯನದ ಹೆಸರಲ್ಲಿ ಶಾಸಕರು ಪ್ರವಾಸ ಕೈಗೊಳ್ಳುವುದು ಅಪರಾಧವಲ್ಲ, ಶಾಸಕರು ವಿದೇಶ ಪ್ರವಾಸಕ್ಕೆ ತೆರಳುವುದು ಖಚಿತ ಎಂದು ಹೇಳಿದರು. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷ ರಾಜ್ಯದಲ್ಲಿ ಹೆಚ್ಚು ಬರಗಾಲವಿಲ್ಲ. ಹೀಗಾಗಿ ನಾವು ಪ್ರವಾಸ ಕೈಗೊಳ್ಳುವುದು ಖಚಿತ ಎಂದರು. [ಅಧ್ಯಯನಕ್ಕಾಗಿ ವಿದೇಶಕ್ಕೆ ಹೊರಟ ಶಾಸಕರು]

ಜಂಟಿ ಅಧಿವೇಶನದ ಹಿನ್ನೆಲೆಯಲ್ಲಿ ಶಾಸಕರ ಪ್ರವಾಸದ ದಿನಾಂಕ ಬದಲಾಗುವ ಸಾಧ್ಯತೆ ಇದೆ. ಆದರೆ, ಪ್ರವಾಸ ರದ್ದು ಮಾಡುವುದಿಲ್ಲ ಎಂದು ಮಾಲೀಕಯ್ಯ ಗುತ್ತೇದಾರ್ ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರ ಶಾಸಕರ ವಿದೇಶ ಪ್ರವಾಸದ ಯೋಜನೆಯನ್ನು ಆರಂಭಿಸಿಲ್ಲ. ಹಿಂದೆ ಬಿಜೆಪಿ ಸರ್ಕಾರವಿದ್ದಾಗಲೂ ಎರಡು ಬಾರಿ ಶಾಸಕರು ವಿದೇಶ ಪ್ರವಾಸ ಮಾಡಿದ್ದಾರೆ ಎಂದು ಮಾಲೀಕಯ್ಯ ತಿಳಿಸಿದರು.
ಸಿಎಂ ಸಮರ್ಥನೆ : ಶಾಸಕರ ವಿದೇಶ ಪ್ರವಾಸದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕರು ವಿದೇಶ ಪ್ರವಾಸಕ್ಕೆ ತೆರಳುವುದು ಹೊಸತಲ್ಲ. ಪ್ರವಾಸದ ಬಗ್ಗೆ ವಿಧಾನಸಭೆ ಸಮಿತಿ ತೀರ್ಮಾನ ಕೈಗೊಳ್ಳುತ್ತದೆ ಮತ್ತು ಅದರಲ್ಲಿ ವಿಶೇಷ ಏನು ಇಲ್ಲ ಎಂದಿದ್ದಾರೆ. ಇದು ಜನಪ್ರತಿನಿಧಿಗಳ 'ವಾಡಿಕೆಯ ಪ್ರವಾಸ, ಈ ಬಗ್ಗೆ ಸಮಿತಿ ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.












Click it and Unblock the Notifications