'ಬಿಜೆಪಿ ಅಧಿಕಾರಕ್ಕೆ ಬಂದರೆ ಟಿಪ್ಪು ಜಯಂತಿ ರದ್ದು'
ಬೆಂಗಳೂರು, ನವೆಂಬರ್ 13 : ಮಡಿಕೇರಿಯಲ್ಲಿ ನಡೆದ ಕುಟ್ಟಪ್ಪ ಹತ್ಯೆ ಮತ್ತು ಸರ್ಕಾರ ಟಿಪ್ಪು ಜಯಂತಿ ಆಚರಣೆ ಮಾಡುವುದನ್ನು ಖಂಡಿಸಿ ಬೆಂಗಳೂರಿನಲ್ಲಿ ವಿಶ್ವಹಿಂದೂ ಪರಿಷತ್ ಹಾಗೂ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಿತು. 'ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಟಿಪ್ಪು ಜಯಂತಿ ಆಚರಣೆಯನ್ನು ರದ್ದುಗೊಳಿಸುವುದಾಗಿ' ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹೇಳಿದರು.
ಶುಕ್ರವಾರ ಬೆಳಗ್ಗೆ ಟೌನ್ ಹಾಲ್ ಮುಂಭಾಗ ಕೆಲವು ಹೊತ್ತು ರಸ್ತೆ ತಡೆ ಮಾಡಿದ ಬಿಜೆಪಿ ಹಾಗೂ ವಿಶ್ವಹಿಂದೂ ಪರಿಷತ್‌ನ ನೂರಾರು ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಸರ್ಕಾರದ ಹಿಂದೂ ವಿರೋಧಿ ನೀತಿಯನ್ನು ಖಂಡಿಸಿದರು. [ಮಡಿಕೇರಿ ಘರ್ಷಣೆ: ಮೈಸೂರು ಡಿಸಿಯಿಂದ ತನಿಖೆ]

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ವಿಎಚ್‌ಪಿ ನಾಯಕರು 'ಸರ್ಕಾರ ಕುಟ್ಟಪ್ಪ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಬೇಕು ಮತ್ತು ಮಡಿಕೇರಿ ಗಲಭೆಯ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು' ಎಂದು ಸರ್ಕಾರವನ್ನು ಒತ್ತಾಯಿಸಿದರು. [ಮಂಗಳೂರು ಬಂದ್ ಚಿತ್ರಗಳು]
ಟಿಪ್ಪು ಜಯಂತಿ ರದ್ದು : 'ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಟಿಪ್ಪು ಜಯಂತಿ ಆಚರಣೆಯನ್ನು ರದ್ದುಗೊಳಿಸಲಾಗುತ್ತದೆ' ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹೇಳಿದರು. ಶುಕ್ರವಾರ ಬೆಂಗಳೂರಿನಲ್ಲಿ ಮಾತನಾಡಿದ ಅವರು 'ಮಡಿಕೇರಿ ಗಲಭೆಗೆ ಕರ್ನಾಟಕ ಸರ್ಕಾರವೇ ನೇರ ಹೊಣೆ' ಎಂದು ಆರೋಪಿಸಿದರು. ['ನವೆಂಬರ್ 10ರಂದು ಟಿಪ್ಪು ಜಯಂತಿ ಏಕೆ?']
ನೋ ಕಮೆಂಟ್ಸ್ : 'ಟಿಪ್ಪು ಸುಲ್ತಾನ್ ಅವರನ್ನು ಹೊಗಳುವವರು ಇದ್ದಾರೆ, ತೆಗಳುವವರು ಇದ್ದಾರೆ. ಕರ್ನಾಟಕ ಸರ್ಕಾರ ಟಿಪ್ಪು ಜಯಂತಿ ಆಚರಣೆ ಮಾಡುವ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ' ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಹೇಳಿದರು. ಶುಕ್ರವಾರ ಬೆಂಗಳೂರಿನಲ್ಲಿ ಮಾತನಾಡಿದ ಅವರು, 'ಟಿಪ್ಪು ಸುಲ್ತಾನ್ ಬಗ್ಗೆ ಆರೋಗ್ಯಕರ ಚರ್ಚೆ ನಡೆಯಲಿ. ಆದರೆ ಇಂತಹ ಗೊಂದಲಗಳು ನಿಜಕ್ಕೂ ದುರದೃಷ್ಟಕರವಾದದ್ದು' ಎಂದು ಅಭಿಪ್ರಾಯಪಟ್ಟರು.












Click it and Unblock the Notifications