ಬೆಂಗಳೂರಿಗೆ 'ಗುಂಡಿ ನಗರ' ಎಂಬ ಹೆಸರಿಡಬೇಕೆ?
ಬೆಂಗಳೂರು, ಸೆ. 27 : ಐಟಿ ನಗರ, ಪಿಂಚಣಿದಾರರ ಸ್ವರ್ಗ, ಗಾರ್ಡನ್ ಸಿಟಿ ಎಂಬಿತ್ಯಾದಿ ಗರಿಗಳನ್ನು ತನ್ನ ಮುಡಿಗೆ ಸಿಕ್ಕಿಸಿಕೊಂಡಿದ್ದ ಬೆಂಗಳೂರು ನಗರ ಕೆಲ ತಿಂಗಳ ಹಿಂದೆ 'ಗಾರ್ಬೇಜ್ ನಗರ' ಎಂಬ ಬಿರುದನ್ನೂ ಗಳಿಸಿಕೊಂಡು ನಕ್ಕಿತ್ತು. ಈಗ, ನಗರ ಮತ್ತೊಂದು ನಾಮಕರಣಕ್ಕೆ ಸಜ್ಜಾಗಿದೆ. ಅದು 'ಗುಂಡಿ ನಗರ'.
ನಗರದಾದ್ಯಂತ ರಸ್ತೆಗಳಲ್ಲಿ ತೆರೆದುಕೊಂಡಿರುವ ಗುಂಡಿಗಳನ್ನು ನೋಡಿದರೆ, ಅಲ್ಲಲ್ಲಿ ದ್ವಿಚಕ್ರವಾಹನದ ಮೇಲಿಂದ ಬಿದ್ದು ಆಸ್ಪತ್ರೆ ಸೇರಿಕೊಂಡಿರುವವರನ್ನು ನೋಡಿದರೆ, ಇವುಗಳನ್ನು ಮುಚ್ಚಲು ಕಾರ್ಪೊರೇಟರುಗಳು ತೋರುತ್ತಿರುವ ದಿವ್ಯ ಅಸಡ್ಡೆಯನ್ನು ಗಮನಿಸಿದರೆ ಈ ಹೆಸರೇ ಬೆಂಗಳೂರಿಗೆ ಸೂಕ್ತವಾಗಲಿದೆ.
ಅಲ್ಲಲ್ಲಿ ಇರಲಿ, ಮೇಯರ್ ಕಟ್ಟೆ ಸತ್ಯನಾರಾಯಣ ಅವರ ಏರಿಯಾ ಬಸವನಗುಡಿಯಲ್ಲಿಯೇ ತೆರೆದುಕೊಂಡಿರುವ ಖತರ್ನಾಕ್ ಗುಂಡಿಗಳನ್ನು ಮುಚ್ಚಲು ಅವರಿಂದ ಸಾಧ್ಯವಾಗಿಲ್ಲ. ಇಲ್ಲೇ ಈ ಪರಿಸ್ಥಿತಿಯಾದರೆ ಉಳಿದ ಬಡಾವಣೆಗಳಲ್ಲಿನ ರಸ್ತೆಗಳ ಸ್ಥಿತಿ ಹೇಗಿರಬೇಡ? ನೀವೇ ಊಹಿಸಿಕೊಳ್ಳಿರಿ.

ಲೋಕಸತ್ತಾದಿಂದ ವಿನೂತನ ಪ್ರತಿಭಟನೆ
ಬಿಬಿಎಂಪಿಯ ನಿರ್ಲಕ್ಷ್ಯವನ್ನು ವಿನೂತನವಾಗಿ ಮತ್ತು ವಿಡಂಬನಾತ್ಮಕವಾಗಿ ಪ್ರತಿಭಟಿಸಲು ಲೋಕಸತ್ತಾ ಪಕ್ಷದ ಯುವಪಡೆ ಸಜ್ಜಾಗಿದೆ. ಇದೇ ಸೆ.28ರ ಶನಿವಾರ ಬಸವನಗುಡಿ ಫ್ಲೈ ಓವರ್ ಕೆಳಗಡೆ ಇರುವ ವೃತ್ತದಲ್ಲಿ ಸುಮಾರು 250ಕ್ಕೂ ಹೆಚ್ಚು ಯುವಕ, ಯುವತಿಯರು, ಬೆಂಗಳೂರಿಗೆ 'ಗುಂಡಿ ನಗರ' ಎಂದು ಹೆಸರಿಡುವ ಮೂಲಕ ಪ್ರತಿಭಟನೆ ನಡೆಸುತ್ತಿದ್ದಾರೆ.

ಕಟ್ಟೆ ಸತ್ಯ ಹೇಳಿದ್ದೇನು ಗೊತ್ತೆ?
ಕೆಲ ದಿನಗಳ ಹಿಂದೆ ಮೇಯರ್ ಆದ ಹೊಸದರಲ್ಲಿ ಕಟ್ಟೆ ಸತ್ಯ ಅವರನ್ನು ಸಂಪರ್ಕಿಸಿ ಈ ಬಗ್ಗೆ ಪ್ರಸ್ತಾಪಿಸಿದಾಗ ಅವರು ನೀಡಿದ್ದ ಉತ್ತರವೇನು ಗೊತ್ತೆ? "ಮಳೆಗಾಲ ಮುಗಿಯಲಿ ನಂತರ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳುತ್ತೇವೆ" ಎಂಬುದು. ಅಲ್ಲೀತನಕ ರಸ್ತೆ ಗುಂಡಿಗಳು ಅನಾಹುತ ಮಾಡದೆ ಇರುತ್ತವೆಯೆ?

ಆಸ್ಪತ್ರೆ ಸೇರಿದವರು ಎಷ್ಟು ಮಂದಿಯೋ?
ಮುರು ದಿನಗಳ ಹಿಂದೆ ಹಳೆ ಮದ್ರಾಸ್ ರಸ್ತೆಯಲ್ಲಿ ಹಳೆ ಮದ್ರಾಸ್ ರಸ್ತೆಯಲ್ಲಿ ಪುಣೆ ಮೂಲದ ಅರ್ಣಿತಾ ಸೈನಿ ಎಂಬುವವರು ತಮ್ಮ ದ್ವಿಚಕ್ರವಾಹನದಿಂದ ಬಿದ್ದು ಆಸ್ಪತ್ರೆ ಸೇರಿಕೊಂಡಿದ್ದಾರೆ. ಸೆ.14ರಂದು ಹೆಬ್ಬಾಳದ ಚಿಟ್ಟಿಬಾಬು ಎಂಬುವವರು ಮಾರತ್ ಹಳ್ಳಿಯಲ್ಲಿ ದೊಡ್ಡ ರಸ್ತೆಗುಂಡಿಯನ್ನು ಗಮನಿಸದೆ ಬಿದ್ದು ಆಸ್ಪತ್ರೆ ಸೇರಿದ್ದಾರೆ. ಅವರಿಗೆ ಇನ್ನೂ ಪ್ರಜ್ಞೆ ಮರಳಿಬಂದಿಲ್ಲ.

ಎಲ್ಲಿ ಪ್ರತಿಭಟನೆ?
ಸ್ಥಳ : ಸುಬ್ಬರಾಮ ಚೆಟ್ಟಿ ರಸ್ತೆ, ಬಸವನಗುಡಿ ಮೇಲ್ಸೇತುವೆ ಕೆಳಗೆ, ನ್ಯಾಷನಲ್ ಕಾಲೇಜ್ ಬಳಿ. ವಾಣಿವಿಲಾಸ್ ರಸ್ತೆ ಮತ್ತು ಕೆ. ಆರ್ ರಸ್ತೆ ಜಂಕ್ಷನ್. ಸಮಯ : ಬೆಳಿಗ್ಗೆ 10.30ಕ್ಕೆ.

ತಡವಾಗಿಯಾದರೂ ಎಚ್ಚೆತ್ತುಕೊಂಡ ಬಿಬಿಎಂಪಿ
ತಡವಾಗಿಯಾದರೂ ದಡಬಡನೆ ಎಚ್ಚತ್ತುಕೊಂಡಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತೆರೆದಿರುವ ರಸ್ತೆಗುಂಡಿಗಳನ್ನು ಮುಚ್ಚಲು ಪ್ರತಿ ವಾರ್ಡ್‌ಗೆ 5 ಲಕ್ಷ ರು. ಬಿಡುಗಡೆ ಮಾಡಲು ಒಪ್ಪಿಕೊಂಡಿದೆ. ಈ ಮೂಲಕವಾದರೂ ರಸ್ತೆ ಗುಂಡಿಗಳು ಮುಚ್ಚಿಕೊಂಡು ಅನಾಹುತ ತಪ್ಪಿಸುತ್ತವೆ ಎಂಬುದು ಸಾರ್ವಜನಿಕರ ಆಗ್ರಹ.

ಎನ್‌ಜಿಓದಿಂದ ಅಭಿಪ್ರಾಯ ಸಂಗ್ರಹ
jhatakaa.org ಎಂಬ ಸರಕಾರೇತರ ಸಂಸ್ಥೆ ಬಿಬಿಎಂಪಿ ವಿರುದ್ಧ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸುವ ಅಭಿಯಾನ ಶುರುಮಾಡಿದೆ. ಸಾರ್ವಜನಿಕರಿಗೆ 92435 11888 ಮಿಸ್ಡ್ ಕಾಲ್ ನೀಡಲು ಹೇಳಿ ಅಭಿಪ್ರಾಯ ಸಂಗ್ರಹಿಸಿ ಅದನ್ನು ಬಿಬಿಎಂಪಿಗೆ ತಲುಪಿಸುವ ಕಾಯಕದಲ್ಲಿ ತೊಡಗಿದೆ.
ಲೋಕಸತ್ತಾದ ಬೇಡಿಕೆಗಳು ಮುಂದಿನಂತಿವೆ
1. ಅಕ್ರಮ ಕಾಮಗಾರಿ ನಡೆದಿರುವ ಬಗ್ಗೆ ಸೂಕ್ತ ತನಿಖೆ ಮಾಡಿ, ತಪ್ಪಿತಸ್ಥರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಬೇಕು.
2. ಟೆಂಡರ್ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಬದಲಾಯಿಸಿ, ಪಾರದರ್ಶಕತೆ ತರಬೇಕು.
3. ಕಾಮಗಾರಿಗಳ ಬಗ್ಗೆ ತಮ್ಮ ವೆಬ್ಸೈಟಿನಲ್ಲಿ ಸಂಪೂರ್ಣ ಮಾಹಿತಿ ನೀಡಬೇಕು.
4. ಕಳಪೆ ರಸ್ತೆ ನಿರ್ಮಾಣಮಾಡುವ ಕಂಟ್ರಾಕ್ಟರ್ಗಳ ಹೆಸರುಗಳನ್ನು ಕಪ್ಪು ಪಟ್ಟಿಗೆ ಸೇರಿಸುವದು.
5. ಸ್ಥಳೀಯ ಶಾಸಕರು, ನಗರ ಪಾಲಿಕೆ ಸದಸ್ಯರು - ಕಳಪೆ ಕಾಮಾಗಾರಿಗೆ ಹೊಣೆ ಹೊರುವಂತೆ ಮಾಡುವುದು.
6. ದುಂದು ವೆಚ್ಚ, ಕಳಪೆ ಕಾಮಗಾರಿ ಮತ್ತು ಇತರೆ ಅನಗತ್ಯ ಖರ್ಚನ್ನು ತಡೆಯಬೇಕು. [ಸೊಂಟ ಮುರಿಯುವ ರಸ್ತೆ ಗುಂಡಿಗಳು!]












Click it and Unblock the Notifications