Voters Beware!: ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸುವ ಮತದಾರರೇ ಎಚ್ಚರ! ಒಂದೇ ಹೆಸರಿನ ಹಲವಾರು ಅಭ್ಯರ್ಥಿಗಳಿದ್ದಾರೆ..
ಬೆಂಗಳೂರು ಏಪ್ರಿಲ್ 6: ಲೋಕಸಭಾ ಚುನಾವಣೆಗೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಪ್ರಬಲ ಪಕ್ಷಗಳು ಪ್ರಚಾರ ಆರಂಭಿಸಿವೆ. ಪಕ್ಷಗಳ ಹಿರಿಯ ಹಾಗೂ ಜನಪ್ರಿಯ ನಾಯಕರು ತಮ್ಮ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಆರಂಭಿಸಿದ್ದಾರೆ. ಆದರೆ ಮತದಾರರು ತಮ್ಮ ನೆಚ್ಚಿನ ಅಭ್ಯರ್ಥಿಗೆ ಮತ ಚಲಾಯಿಸುವಾಗ ತುಂಬಾ ಜಾಗರೂಕರಾಗಿರಬೇಕು. ಯಾಕೆಂದರೆ ನಿಮ್ಮ ನೆಚ್ಚಿನ ಅಭ್ಯರ್ಥಿಯ ಹೆಸರೇ ಇನ್ನೊಬ್ಬ ಅಭ್ಯರ್ಥಿಯದ್ದಾಗಿದ್ದರೆ ಕೊಂಚ ಯಾಮಾರಿದರೂ ನಿಮ್ಮ ಮತ ಬೇರೆ ಅಭ್ಯರ್ಥಿಗೆ ಹೋಗುವ ಸಾಧ್ಯತೆ ಇದೆ.
ಹೌದು... ಜಿದ್ದಾಜಿದ್ದಿನ ಕಣವಾಗಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಸುರೇಶ್ ಹೆಸರಿನ ಮೂವರು ಹಾಗೂ ಮಂಜುನಾಥ್ ಹೆಸರಿನ ಐವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿಯ ಡಾ. ಮಂಜುನಾಥ್ ಮತ್ತು ಕಾಂಗ್ರೆಸ್‌ನ ಡಿ.ಕೆ.ಸುರೇಶ್ ಅವರ ಹೆಸರಿನ ಕುರಿತು ಮತದಾರರಲ್ಲಿ ಗೊಂದಲ ಮೂಡಿಸಿ, ಎದುರಾಳಿಗಳ ವಿರುದ್ಧ ಲಾಭ ಪಡೆಯುವುದಕ್ಕಾಗಿ ಒಂದೇ ರೀತಿಯ ಹೆಸರಿನವರನ್ನು ಕರೆದಂದು ನಾಮಪತ್ರ ಸಲ್ಲಿಸಲಾಗಿದೆ ಎಂಬ ಆರೋಪ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

ಈ ಸುರೇಶ್ ಮತ್ತು ಮಂಜುನಾಥ್ ಹೆಸರಿನ ಅಭ್ಯರ್ಥಿಗಳ ಪದನಾಮದಲ್ಲಿ ಅಲ್ಪಸ್ವಲ್ಪ ಬದಲಾವಣೆ ಇರುವುದನ್ನು ಹೊರತುಪಡಸಿದರೆ ಉಳಿದಂತೆ ಹೆಸರು ಒಂದೇ ರೀತಿಯಲ್ಲಿ ಇದೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ.ಕೆ.ಸುರೇಶ್ ನಾಮಪತ್ರ ಸಲ್ಲಿಸಿದ್ದರೆ, ಅದೇ ಹೆಸರಿನಲ್ಲಿ ಕರುನಾಡು ಪಾರ್ಟಿಯಿಂದ ಅನೇಕಲ್ ತಾಲೂಕಿನ ಮುತ್ತಾನಲ್ಲೂರಿನ ಎಸ್.ಸುರೇಶ್, ಪಕ್ಷೇತರರಾಗಿ ಕನಕಪುರ ತಾಲೂಕಿನ ಮರಳೆ ಗ್ರಾಮದ ಎಂ.ಎನ್.ಸುರೇಶ್ ಉಮೇದುವಾರಿಕೆ ಸಲ್ಲಿಸಿದ್ದಾರೆ.
ಬಿಜೆಪಿ-ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿಯಾಗಿ ಡಾ. ಸಿ.ಎನ್. ಮಂಜುನಾಥ್ ನಾಮಪತ್ರ ಸಲ್ಲಿಸಿದರೆ, ಅದೇ ಹೆಸರಿನ ಇತರ ನಾಲ್ವರು ಉಮೇದುವಾರಿಕೆ ಸಲ್ಲಿಸಿರುವುದು ವಿಶೇಷವಾಗಿದೆ. ಬಹುಜನ್ ಭಾರತ್ ಪಾರ್ಟಿ ಅಭ್ಯರ್ಥಿಯಾಗಿ ಸಿ.ಎನ್.ಮಂಜುನಾಥ್, ಪಕ್ಷೇತರರಾಗಿ ಸಿ.ಮಂಜುನಾಥ್, ಎನ್.ಮಂಜುನಾಥ್ ಹಾಗೂ ಕೆ.ಮಂಜುನಾಥ್ ಎಂಬುವರು ನಾಮಪತ್ರ ಸಲ್ಲಿಸುವ ಮೂಲಕ ಗಮನ ಸೆಳೆದಿದ್ದಾರೆ.
ಈ ಪೈಕಿ ಸಿ.ಎನ್.ಮಂಜುನಾಥ್ ಅವರು ಡಾ.ಮಂಜುನಾಥ್ ಅವರ ಸ್ವಂತ ಊರು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನವರು. ಪಕ್ಷೇತರರಾದ ಸಿ.ಮಂಜುನಾಥ್ ಬೆಂಗಳೂರಿನ ಮೂಡಲ ಪಾಳ್ಯದವರಾದರೆ, ಎನ್.ಮಂಜುನಾಥ್ ರಾಜಾಜಿನಗರ ಹಾಗೂ ಕೆ.ಮಂಜುನಾಥ್ ಪಾಪರೆಡ್ಡಿಪಾಳ್ಯದವರಾಗಿದ್ದಾರೆ.
ಹೀಗಾಗಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ನೆಚ್ಚಿನ ಅಭ್ಯರ್ಥಿಗೆ ಮತ ಚಲಾಯಿಸಲು ಮತದಾರರಲ್ಲಿ ಗೊಂದಲ ಉಂಟು ಮಾಡಲಾಗಿದೆ. ಒಂದೇ ಹೆಸರಿನ ಅಭ್ಯರ್ಥಿಗಳು ಮತದಾರರಲ್ಲಿ ಗೊಂದಲ ಸೃಷ್ಟಿಸಲಿದ್ದಾರೆನ್ನುವ ಲಾಜಿಕ್‌ನಲ್ಲಿ ವಿರುದ್ಧ ಪಕ್ಷದವರೇ ಒಂದೇ ಹೆಸರಿನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದಾರೆನ್ನುವ ಆರೋಪ ಕೇಳಿ ಬಂದಿದೆ.
ಆದರೆ ಮತದಾರರು ತುಂಬಾ ಬುದ್ಧಿವಂತರು. ಅವರು ಅಳೆದು ತೂಗಿ ಮತ ಚಲಾಯಿಸುತ್ತಾರೆ. ಯಾರೇ ಎಷ್ಟೇ ಅಭ್ಯರ್ಥಿಗಳನ್ನು ಕಣದಲ್ಲಿ ನಿಲ್ಲಿಸಿದರೂ ಮತದಾರರು ಮಾತ್ರ ಮೋಸ ಹೋಗುವುದಿಲ್ಲ ಅನ್ನೋದು ಮೈತ್ರಿ ಅಭ್ಯರ್ಥಿ ಸಿ.ಎನ್. ಮಂಜುನಾಥ್ ನಂಬಿಕೆಯಾಗಿದೆ. ಇತ್ತ ಡಿಕೆ ಸುರೇಶ್ ಕೂಡ ಇದೇ ಮಾತನ್ನ್ನು ಹೇಳಿದ್ದಾರೆ. ಹಾಗಾದರೆ ಮತದಾರರು ಮತ ಬದಲಾಗುತ್ತಾ? ಅಥವಾ ತಾವಂದುಕೊಂಡ ಅಭ್ಯರ್ಥಿಗಳಿಗೇ ಮತ ಚಲಾಯಿಸುತ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ.












Click it and Unblock the Notifications