Election: ಈ ಮತದಾರರಿಗೆ ಅಂಚೆ ಮತದಾನ ಸೌಲಭ್ಯ: ಯಾರೆಲ್ಲ ಅರ್ಹರು?
ಬೆಂಗಳೂರು, ಮಾರ್ಚ್ 19: ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಅಗತ್ಯ ಸಿದ್ಧತೆಗಳು ಆರಂಭವಾಗಿದೆ. ಈ ಸಂಬಂಧ ಬಿಬಿಎಂಪಿ ವ್ಯಾಪ್ತಿಯಲ್ಲಿ ಅಂಚೆ ಮತದಾನ (ಪೋಸ್ಟಲ್ ಬ್ಯಾಲೆಟ್) ದ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಅಂಚೆ ಮತದಾನಕ್ಕೆ ಸಂಬಂಧಿಸಿದಂತೆ ಪಾಲಿಕೆ ಕೇಂದ್ರ ಕಛೇರಿಯಲ್ಲಿ ಮಂಗಳವಾರ ಸಭೆ ನಡೆಯಿತು. ಈ ವೇಳೆ ಬಿಬಿಎಂಪಿ ಚುನಾವಣಾ ವಿಭಾಗದ ವಿಶೇಷ ಆಯುಕ್ತರಾದ ಸೆಲ್ವಮಣಿ ಮಾತನಾಡಿದರು. ಲೋಕಸಭಾ ಚುನಾವಣೆಯಲ್ಲಿ 12 ವಿವಿಧ ಇಲಾಖೆಗಳ ಅಗತ್ಯ ಸೇವೆಗಳ ಗೈರು ಮತದಾರರಿಗೆ(AVES) ಅಂಚೆ ಮತದಾನ(ಪೋಸ್ಟಲ್ ಬ್ಯಾಲೆಟ್)ದ ವ್ಯವಸ್ಥೆ ಕಲ್ಪಿಸುವ ಸಲುವಾಗಿ ಆಯಾ ಇಲಾಖೆಗಳಿಂದ ಪಟ್ಟಿ ನೀಡುವಂತೆ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

12 ಇಲಾಖೆಗಳ ಸಿಬ್ಬಂದಿ ಅರ್ಹರು
ಚುನಾವಣಾ ಆಯೋಗವು 12 ವಿವಿಧ ಇಲಾಖೆಗಳನ್ನು ಅಗತ್ಯ ಸೇವೆಗಳೆಂದು ಪರಿಗಣಿಸಲಾಗಿದೆ. ಆಯಾ ಇಲಾಖಾವಾರು ನೀಡುವ ಪಟ್ಟಿಯ ಅನುಸಾರ ಅಂಚೆ ಮತದಾನದ ಮೂಲಕ ಮತಚಾಯಿಸಲು ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಇಲಾಖಾವಾರು ಅಗತ್ಯ ಸೇವೆಗಳ ಗೈರು ಮತದಾರರ ಅರ್ಹ ಮತದಾರರ ಪಟ್ಟಿ ನೀಡಿದ ನಂತರ 12ಡಿ ನಮೂನೆಗಳಲ್ಲಿ ಭರ್ತಿ ಮಾಡಿ, ದಿನಾಂಕ 22/03/2024ರ ಶುಕ್ರವಾರದೊಳಗಾಗಿ ಸಲ್ಲಿಸಲು ಸೂಚನೆ ನೀಡಲಾಗಿದೆ.
ಅಂಚೆ ಮತದಾನದ ನಿಯಮ ಏನಿದೆ?
ಅರ್ಹ ಮತದಾರರು ನೋಂದಣಿಯಾಗಿರುವ ಲೋಕಸಭಾ ಕ್ಷೇತ್ರದಲ್ಲಿ ಸ್ಥಾಪಿಸಲಾದ ಪೋಸ್ಟಲ್ ವೋಟಿಂಗ್ ಸೆಂಟರ್(ಪಿವಿಸಿ) ನಲ್ಲಿ ಮಾತ್ರ ಈ ಬಾರಿ ಅಂಚೆ ಮತದಾನ ಮಾಡಲು ಅವಕಾಶವಿದೆ. ಅಂಚೆ ಮೂಲಕ ಅಂಚೆ ಮತದಾನ ಪತ್ರವನ್ನು ನೀಡುವ/ತಲುಪಿಸುವ ವ್ಯವಸ್ಥೆ ಈ ಬಾರಿ ಇರುವುದಿಲ್ಲ ಎಂದು ಅವರು ತಿಳಿಸಿದರು.

ಯಾವ 12 ಇಲಾಖೆಗಳ ಮತದಾರರು ಅರ್ಹರು?
1. ವಿದ್ಯುತ್ ಇಲಾಖೆ
2. ಬಿ.ಎಸ್.ಎನ್.ಎಲ್ ಇಲಾಖೆ
3. ರೈಲ್ವೆ ಇಲಾಖೆ
4. ದೂರದರ್ಶನ ಇಲಾಖೆ
5. ಆಲ್ ಇಂಡಿಯಾ ರೇಡಿಯೋ ಇಲಾಖೆ
6. ಆರೋಗ್ಯ ಇಲಾಖೆ
7. ವಾಯುಯಾನ ಇಲಾಖೆ
8. ಬಸ್ ಸೇವೆಗಳು(ಕೆ.ಎಸ್.ಆರ್.ಟಿ.ಸಿ/ಬಿ.ಎಂ.ಟಿ.ಸಿ)
9. ಅಗ್ನಿಶಾಮಕ ಸೇವೆಗಳ ಇಲಾಖೆ
10. ಭಾರತ ಚುನಾವಣಾ ಆಯೋಗದಿಂದ ಮತದಾನದ ದಿನಂದಂದು ಚುನಾವಣಾ ಕವರೇಜ್‌ಗಾಗಿ ಅಧಿಕೃತಗೊಂಡ ಮಾಧ್ಯಮ ವ್ಯಕ್ತಿಗಳು.
11. ಸಂಚಾರ ಪೊಲೀಸ್ ಇಲಾಖೆ.
12. ಆಂಬ್ಯುಲೆನ್ಸ್ ಸೇವೆಗಳು.
ಸಭೆಯಲ್ಲಿ ಆರೋಗ್ಯ ಇಲಾಖೆಯ ಆಯುಕ್ತರಾದ ಶ್ರೀ ಡಿ. ರಂದೀಪ್, ಪೋಸ್ಟಲ್ ಬ್ಯಾಲೆಟ್ ನೋಡಲ್ ಅಧಿಕಾರಿಯಾದ ಪಲ್ಲವಿ, ಚುನಾವಣಾ ವಿಭಾಗದ ಸಹಾಯಕ ಆಯುಕ್ತರಾದ ರವಿ ಚಂದ್ರ ನಾಯ್ಕ್, 12 ವಿವಿಧ ಇಲಾಖೆಗಳ ನೋಡಲ್ ಅಧಿಕಾರಿಗಳು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications