ನಟ ಶಿವರಾಜ್‌ಕುಮಾರ್‌ಗೆ ಎಂಪಿ ಟಿಕೆಟ್ ಆಫರ್ ನೀಡಿದ ಡಿಸಿಎಂ ಡಿಕೆಶಿ
ಬೆಂಗಳೂರು, ಡಿಸೆಂಬರ್, 10: ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮೂರು ಪಕ್ಷಗಳಿಂದಲೂ ಈಗಿನಿಂದಲೇ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಇನ್ನು ಕಾಂಗ್ರೆಸ್‌ನಿಂದ ಡಿಸಿಎಂ ಡಿ.ಕೆ.ಶಿವಕುಮಾರ್ ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು (ಡಿಸೆಂಬರ್ 10) ಹಮ್ಮಿಕೊಂಡಿದ್ದ ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ನಟ ಶಿವರಾಜ್‌ಕುಮಾರ್‌ಗೆ ಎಂಪಿ ಟಿಕೆಟ್ ಕೊಡುವ ಆಫರ್ ನೀಡಿದರು.

ಅರಮನೆ ಮೈದಾನದಲ್ಲಿ ಇಂದು ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಮೃತ ಮಹೋತ್ಸವ ಹಾಗೂ ಈಡಿಗ ಮತ್ತು 25 ಪಂಗಡಗಳ ಬೃಹತ್ ಜಾಗೃತ ಸಮಾವೇಶದಲ್ಲಿ ಡಿ.ಕೆ.ಶಿವಕುಮಾರ್ ಅವರು ಮಾತನಾಡಿ, ನೀನು ರೆಡಿಯಾಗಪ್ಪ ಪಾರ್ಲಿಮೆಂಟ್‌ಗೆ ನಿಂತುಕೊಳ್ಳೋಕೆ, ಎಲ್ಲಿ ಬೇಕೋ ಅಲ್ಲಿ ಸೀಟ್ ಕೋಡಿಸುತ್ತೇನೆ ಎಂದು ನಟ ಶಿವರಾಜ್‌ಕುಮಾರ್‌ಗೆ ಆಫರ್ ನೀಡಿದ್ದಾರೆ.
ಆದರೆ ಅವರು 5, 6 ಸಿನಿಮಾ ಒಪ್ಪಿಕೊಂಡಿದ್ದೇನೆ ಅಂದ್ರು. ಸಿನಿಮಾ ಯಾವತ್ತು ಬೇಕಾದ ಮಾಡಬಹುದು. ಆದ್ರೆ ಪಾರ್ಲಿಮೆಂಟ್‌ಗೆ ಹೋಗೋದು ಯಾರ್ಗೂ ಯೋಗ ಬರೋದಿಲ್ಲ. ಆ ಯೋಗ ಮನೆಗೆ ಬಂದಿಗೆ, ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ. ನಮ್ಮ ಸರ್ಕಾರ ನಿಮ್ಮ ಜೊತೆ ಇದೆ ನೀವು ಯಾವಾಗ್ಲೂ ನಮ್ಮ ಜೊತೆ ಇರಬೇಕು ಎಂದು ಹೇಳಿದರು.
ಸರ್ಕಾರದ ವಿರುದ್ಧ ಎಚ್‌ಡಿಕೆ ಆಕ್ರೋಶ
ರಾಜ್ಯ ಸರ್ಕಾರವು ನೀಡುತ್ತಿರುವ ವಿವಿಧ ಗ್ಯಾರಂಟಿಗಳ ಪೈಕಿ ಶೇಕಡಾ 50ರಷ್ಟು ಕೂಡ ಜನತೆಗೆ ಸರಿಯಾಗಿ ತಲುಪುತ್ತಿಲ್ಲ, ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ಜನವಿರೋಧಿ ಆಡಳಿತದಿಂದ ರಾಜ್ಯದ ಜನತೆ ಭ್ರಮನಿರಸನಗೊಂಡಿದ್ದಾರೆ ಎಂದು ಜೆಡಿಎಸ್ ವರಿಷ್ಠ ರಾಜ್ಯದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಅವರು ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಬೆಳತೂರು ಗ್ರಾಮದಲ್ಲಿ ಶ್ರೀಕೋಟೆ ರಂಗನಾಥಸ್ವಾಮಿ ದೇವಾಲಯದ ಜೀರ್ಣೋದ್ಧಾರ, ವಿಗ್ರಹದ ಪುನರ್ ಪ್ರತಿಷ್ಠಾಪನೆ, ವಿಮಾನ ಗೋಪುರ ಮತ್ತು ಗರುಡಗಂಭದ ಪ್ರತಿಷ್ಠಾಪನೆ, ಮಹಾಕುಂಭಾಬಿಷೇಕ ಮಹೋತ್ಸವದಲ್ಲಿ ಭಾಗವಹಿಸಿ ನೂತನ ದೇವಾಲಯವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ರಾಜ್ಯದ ಜನತೆ ಕಾಂಗ್ರೇಸ್ ಪಕ್ಷವು ಘೋಷಿಸಿದ ಗ್ಯಾರಂಟಿಗಳಿಗೆ ಮಾರುಹೋಗಿ 136 ಸ್ಥಾನಗಳನ್ನು ನೀಡಿದ್ದಾರೆ. ಆದರೆ ಜನತೆಯ ವಿಶ್ವಾಸವನ್ನು ಉಳಿಸಿಕೊಳ್ಳಲು ವಿಫಲವಾಗಿರುವ ಸರ್ಕಾರವು ರಾಜ್ಯದ ಅಭಿವೃದ್ಧಿಯನ್ನು ಕಡೆಗಣಿಸಿ ಬೇಜವಾಬ್ಧಾರಿತನದಿಂದ ವರ್ತಿಸುತ್ತಿದೆ. ಗೃಹಲಕ್ಷ್ಮೀ ಹಾಗೂ ಬಡವರ ಪಡಿತರದ ಅಕ್ಕಿಯ ಹಣವು ಶೇ.50ರಷ್ಟು ಫಲಾನುಭವಿಗಳಿಗೆ ಕೂಡಾ ತಲುಪುತ್ತಿಲ್ಲ. 200ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಿದ್ದ ಕಾಂಗ್ರೇಸ್ ಈಗ ಪ್ರಸ್ತುತ ಎಷ್ಟು ಯೂನಿಟ್ ವಿದ್ಯುತ್ತನ್ನು ಉಚಿತವಾಗಿ ನೀಡುತ್ತಿದೆ ಎಂಬುದು ಬಹಿರಂಗ ಸತ್ಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದ ರೈತರು ತೀವ್ರವಾದ ಬರವನ್ನು ಎದುರಿಸುತ್ತಿರುವುದರಿಂದ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುದ ಘೋಷಣೆ ಮಾಡಿ ಎದೆಗಾರಿಕೆಯನ್ನು ಪ್ರದರ್ಶಿಸಬೇಕು ಎಂದು ಸವಾಲು ಹಾಕಿದ ಮಾಜಿ ಸಿಎಂ, ಪಂಚರಾಜ್ಯಗಳ ಚುನಾವಣಾ ಫಲಿತಾಂಶದಿಂದ ಕಂಗಾಲಾಗಿರುವ ಕಾಂಗ್ರೇಸ್ ಪಕ್ಷವು ಹಣದ ಹೊಳೆ ಹರಿಸಿ ಆಶ್ವಾಸನೆಗಳು ಮತ್ತು ಭರವಸೆಯನ್ನು ನೀಡಿ ತೆಲಂಗಾಣ ರಾಜ್ಯದಲ್ಲಿ ಮಾತ್ರ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ ಎಂದು ಲೇವಡಿ ಮಾಡಿದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಜೊತೆ ಸ್ಥಾನ ಹೊಂದಾಣಿಕೆ ಮಾಡಿಕೊಂಡಿರುವ ಜೆಡಿಎಸ್ ಜೊತೆಯಾಗಿ ಒಂದಾಗಿ ಪ್ರಚಾರ ನಡೆಸಿ ಕಾಂಗ್ರೆಸ್‌ಗೆ ತಕ್ಕ ಉತ್ತರವನ್ನು ನೀಡುವ ಜೊತೆಗೆ ರಾಜ್ಯದ ಎಲ್ಲಾ 28 ಸ್ಥಾನಗಳನ್ನು ಗೆಲ್ಲುವ ಮೂಲಕ ಹೊಸ ಇತಿಹಾಸವನ್ನು ನಿರ್ಮಿಸಲಿದೆ ಎಂದು ಕುಮಾರಸ್ವಾಮಿ ಭವಿಷ್ಯ ನುಡಿದರು.
ಇಂದಿನ ಒತ್ತಡದ ಜೀವನದಲ್ಲಿ ದೇವರು ಮತ್ತು ಧರ್ಮದ ಮೊರೆ ಹೋಗುವುದು ಅನಿವಾರ್ಯವಾಗಿದೆ. ಭಗವಂತನ ನಾಮಸ್ಮರಣೆ ಮಾಡಿ ಪೂಜಿಸಿದರೆ ಸಾಕು ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುತ್ತದೆ. ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿರುವ, ನಮ್ಮ ನೆಲದ ಇತಿಹಾಸದ ಮೇಲೆ ಬೆಳಕು ಚೆಲ್ಲುವ ದೇವಾಲಯಗಳ ಸಂರಕ್ಷಣೆಯು ಅತ್ಯಗತ್ಯವಾಗಿ ಆಗಬೇಕಾಗಿದೆ ಎಂದರು.
ಈ ದಿಕ್ಕಿನಲ್ಲಿ ಬೆಳತೂರು ಗ್ರಾಮಸ್ಥರು ಶ್ರೀ ಕೋಟೆ ರಂಗನಾಥಸ್ವಾಮಿ ದೇವಾಲಯವನ್ನು ಜೀರ್ಣೋದ್ಧಾರ ಮಾಡಿಸಿ, ಹೊಸದಾಗಿ ವಿಮಾನಗೋಪುರ ಮತ್ತು ಗರುಡಗಂಭವನ್ನು ನಿರ್ಮಿಸಿ ಮಾದರಿಯಾಗಿದ್ದಾರೆ. ನಮ್ಮ ಮುಂದಿನ ತಲೆಮಾರಿಗೆ ನಮ್ಮ ನೆಲದ ಇತಿಹಾಸ ಮತ್ತು ಪರಂಪರೆಯ ಬಗ್ಗೆ ಬೆಳಕು ಚೆಲ್ಲುವ ದೇವಾಲಯಗಳನ್ನು ಉಳಿಸಿ ಸಂರಕ್ಷಣೆ ಮಾಡುವುದು ಅಗತ್ಯವಾಗಿರುವುದರಿಂದ ಬೆಳತೂರು ಗ್ರಾಮಸ್ಥರನ್ನು ತಾವು ಅಭಿನಂದಿಸುವುದಾಗಿ ತಿಳಿಸಿದರು.












Click it and Unblock the Notifications