ಜೂನ್ 4ರಂದು ಬೆಂಗಳೂರಲ್ಲಿ ಮತ ಎಣಿಕೆ ಎಲ್ಲಿ?, ಮಾಹಿತಿ
ಬೆಂಗಳೂರು, ಮೇ 28: ಲೋಕಸಭೆ ಚುನಾವಣೆ 2024ರ ಮತ ಎಣಿಕೆ ಜೂನ್ 4ರ ಮಂಗಳವಾರ ನಡೆಯಲಿದೆ. ಬೆಂಗಳೂರು ನಗರದಲ್ಲಿ ಮತ ಎಣಿಕೆ ಹಿನ್ನಲೆಯಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಮತ ಎಣಿಕೆ ಕೇಂದ್ರದ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಗೆ ಒಳಪಡುವ ಲೋಕಸಭಾ ಕ್ಷೇತ್ರಗಳು ಮೂರು. ಏಪ್ರಿಲ್ 26ರಂದು ಬೆಂಗಳೂರು ಸೆಂಟ್ರಲ್‌ನಲ್ಲಿ ಶೇ 54.06, ಬೆಂಗಳೂರು ಉತ್ತರದಲ್ಲಿ ಶೇ 54.45 ಮತ್ತು ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಶೇ 53.17ರಷ್ಟು ಮತದಾನವಾಗಿತ್ತು.

ಮಂಗಳವಾರ ಬೆಳಗ್ಗೆ ಮತಯಂತ್ರಗಳು ಇರುವ ಸ್ಟ್ರಾಂಗ್ ರೂಂ ಬಾಗಿಲು ತೆರೆಯಲಾಗುತ್ತದೆ. 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ. ಚುನಾವಣಾ ಆಯೋಗ, ಬೆಂಗಳೂರು ನಗರ ಪೊಲೀಸರು ಮತ ಎಣಿಕೆಗೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ.
ಎಲ್ಲೆಲ್ಲಿ ಮತ ಎಣಿಕೆ?; ಬೆಂಗಳೂರು ನಗರದ ಮೌಂಟ್ ಕಾರ್ಮೆಲ್ ಕಾಲೇಜು, ಸೆಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮತ್ತು ಎಸ್‌ಎಂಆರ್‌ವಿ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ. ಮತ ಎಣಿಕೆ ಕೇಂದ್ರದ ಸುತ್ತ ಈಗಾಗಲೇ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಲೋಕಸಭೆ ಚುನಾವಣೆ ಮತ ಎಣಿಕೆ ನಡೆಯುವ ದಿನದಂದು ಮತ ಎಣಿಕೆ ಕೇಂದ್ರದ ಸುತ್ತಲೂ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ. ಆದೇಶದ ಅನ್ವಯ 5 ಮಂದಿಗಿಂತ ಹೆಚ್ಚು ಜನರು ಒಂದೆಡೆ ಸೇರುವಂತಿಲ್ಲ. ಸಮಾರಂಭ ಮಾಡುವಂತಿಲ್ಲ.
ಮಾರಕಾಸ್ತ್ರ, ಕಲ್ಲು ಸಂಗ್ರಹ, ಅಣಕು ಶವಯಾತ್ರೆ ಮಾಡುವಂತಿಲ್ಲ. ಪ್ರಚೋದನಾಕಾರಿ ಭಾಷಣವನ್ನು ಮಾಡುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ನಿಷೇಧಾಜ್ಞೆ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಅಭ್ಯರ್ಥಿಗಳ ಪಟ್ಟಿ: ಸದ್ಯ ಬೆಂಗಳೂರು ನಗರದ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿಯ ಸಂಸದರು ಇದ್ದಾರೆ. 2024ರ ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರ ಯಾರ ವಶವಾಗಲಿದೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿ ಸೂರ್ಯ (ಬಿಜೆಪಿ), ಸೌಮ್ಯಾ ರೆಡ್ಡಿ (ಕಾಂಗ್ರೆಸ್) ಎದುರಾಳಿಗಳು. ಕ್ಷೇತ್ರದಲ್ಲಿ ಶೇ 53.17ರಷ್ಟು ಮತದಾನವಾಗಿತ್ತು.
ಬೆಂಗಳೂರು ಕೇಂದ್ರದಲ್ಲಿ ಪಿ. ಸಿ. ಮೋಹನ್(ಬಿಜೆಪಿ), ಮನ್ಸೂಲ್ ಅಲಿ ಖಾನ್ (ಕಾಂಗ್ರೆಸ್) ಎದುರಾಳಿಗಳು. ಕ್ಷೇತ್ರದಲ್ಲಿ ಶೇ 54.06ರಷ್ಟು ಮತದಾನವಾಗಿತ್ತು.
ಬೆಂಗಳೂರು ಉತ್ತರ ಎಂ. ವಿ. ರಾಜೀವ್ ಗೌಡ (ಕಾಂಗ್ರೆಸ್), ಶೋಭಾ ಕರಂದ್ಲಾಜೆ (ಬಿಜೆಪಿ) ಅಭ್ಯರ್ಥಿಗಳು. ಕ್ಷೇತ್ರದಲ್ಲಿ ಶೇ 54.45 ಮತದಾನವಾಗಿತ್ತು.
ಬೆಂಗಳೂರು ನಗರದಲ್ಲಿ ಗೆಲುವು ಸಾಧಿಸುವುದು ರಾಜ್ಯದ ಆಡಳಿತ ಪಕ್ಷ ಕಾಂಗ್ರೆಸ್, ಪ್ರತಿಪಪಕ್ಷಗಳಾದ ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಜೂನ್ 4ರಂದು ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದ್ದು, ಮಧ್ಯಾಹ್ನದ ವೇಳೆಗೆ ಗೆಲುವು ಯಾರಿಗೆ? ಎಂಬ ಚಿತ್ರಣ ಸಿಗುವ ನಿರೀಕ್ಷೆ ಇದೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಈ ಬಾರಿಯ ಚುನಾವಣೆ ಬಿಜೆಪಿಯ ಡಾ. ಸಿ. ಎನ್. ಮಂಜುನಾಥ್, ಕಾಂಗ್ರೆಸ್‌ನ ಡಿ. ಕೆ. ಸುರೇಶ್ ಹೋರಾಟದ ಕಾರಣಕ್ಕೆ ಕುತೂಹಲ ಮೂಡಿಸಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮತ ಎಣಿಕೆ ರಾಮನಗರದಲ್ಲಿ ನಡೆಯುತ್ತದೆ.
2019ರ ಚುನಾವಣೆಯಲ್ಲಿ ಬಿಜೆಪಿ ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ ಮತ್ತು ಬೆಂಗಳೂರು ಕೇಂದ್ರದಲ್ಲಿ ಗೆಲುವು ಸಾಧಿಸಿತ್ತು. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಡಿ. ಕೆ. ಸುರೇಶ್ ಗೆಲುವು ಕಂಡಿದ್ದರು. ಚುನಾವಣೆಯಲ್ಲಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಗೆದ್ದ ಏಕೈಕ ಕ್ಷೇತ್ರ ಬೆಂಗಳೂರು ಗ್ರಾಮಾಂತರವಾಗಿತ್ತು.












Click it and Unblock the Notifications