ಬೆಂಗಳೂರು ಈಗ ಲಾಜಿಸ್ಟಿಕ್ ಹಬ್: ಸರಕು ಸಾಗಣೆ ಆರಂಭಿಸಿದ ರೈಲು ನಿಲ್ದಾಣ
ಬೆಂಗಳೂರು, ಡಿಸೆಂಬರ್ 28: ಉದ್ಯಾನ ನಗರಿ ಬೆಂಗಳೂರು ಪ್ರಯಾಣಿಕ ರೈಲು ಸೇವೆಗೆ ಮಾತ್ರವಲ್ಲ ಸರಕು ಸಾಗಣೆಗೆ ಸಹ ಅನುಕೂಲ ಕಲ್ಪಿಸುತ್ತಿದೆ. ನಗರದ ಪ್ರಮುಖ ರೈಲು ನಿಲ್ದಾಣದಲ್ಲಿ ಸರಕು ಸಾಗಣೆ ಸೇವೆ ಆರಂಭವಾಗಿದೆ. ಬೇಡಿಕೆಯನ್ನು ಪರಿಗಣಿಸಿ ಬೆಂಗಳೂರು ನಗರದ ಹೊರವಲಯದಲ್ಲಿ ನಿರ್ಮಾಣ ಮಾಡಿದ್ದ ಹೀಲಲಿಗೆ ಗೂಡ್ಸ್ ಟರ್ಮಿನಲ್ ಶುಕ್ರವಾರದಿಂದ ಕಾರ್ಯಾಚರಣೆ ಆರಂಭಿಸಿದೆ. ಮೊದಲ ದಿನ 22,235 ಬ್ಯಾಗ್ ಸಿಮೆಂಟ್ ಅನ್ನು ಈ ನಿಲ್ದಾಣದಲ್ಲಿ ಇಳಿಸಿಕೊಳ್ಳಲಾಗಿದೆ.
ಬೆಂಗಳೂರು-ಹೊಸೂರು ನಗರದ ಹೊರವಲಯದಲ್ಲಿ ಹೀಲಲಿಗೆ ಗೂಡ್ಸ್ ಟರ್ಮಿನಲ್ ಅಭಿವೃದ್ಧಿಗೊಳಿಸಲಾಗಿದೆ. ಈ ನಿಲ್ದಾಣ ಈಗ ಸರಕು ಸಾಗಣೆಯನ್ನು ಆರಂಭಿಸಿದ್ದು, ನಗರದ ವಾಣಿಜ್ಯ ವ್ಯವಹಾರಕ್ಕೆ ಅನುಕೂಲವಾಗಿದೆ. 17 ಬಿಸಿಎಎನ್ ವ್ಯಾಗನ್‌ಗಳಲ್ಲಿ ಬಂದಿದ್ದ 1,119.4 ಟನ್ ತೂಕದ ಸರಕುಗಳನ್ನು ನಿಲ್ದಾಣದಲ್ಲಿ ಯಶಸ್ವಿಯಾಗಿ ಇಳಿಸಿ ಲಾರಿಗಳಿಗೆ ತುಂಬಿ ಕಳಿಸಲಾಗಿದೆ.

ಎರಡು ಭಾಗಕ್ಕೂ ಅನುಕೂಲ: ಬೆಂಗಳೂರು, ಹೊಸೂರು ಎರಡೂ ಕಡೆಯ ವಾಣಿಜ್ಯ ವ್ಯವಹಾರವನ್ನು ಗಮನದಲ್ಲಿಟ್ಟುಕೊಂಡು ಹೀಲಲಿಗೆ ಗೂಡ್ಸ್ ಟರ್ಮಿನಲ್ ಅನ್ನು ರೈಲ್ವೆ ಇಲಾಖೆ ಅಭಿವೃದ್ಧಿಗೊಳಿಸಿತ್ತು. ದೊಮ್ಮಸಂದ್ರ-ವೈಟ್‌ಫೀಲ್ಡ್ ಮುಖ್ಯ ರಸ್ತೆ ಮೂಲಕ ಈ ನಿಲ್ದಾಣಕ್ಕೆ ಅಗತ್ಯವಾದ ಉತ್ತಮವಾದ ರಸ್ತೆ ಸಂಪರ್ಕವಿದೆ.
ಲಾರಿಗಳು, ಸರಕು ಸಾಗಣೆಯ ಇತರ ವಾಹನಗಳು ಸುಲಭವಾಗಿ ಈ ಟರ್ಮಿನಲ್‌ಗೆ ಹೋಗಿ ಬರುವಂತೆ ಟರ್ಮಿನಲ್ ಅಭಿವೃದ್ಧಿಗೊಳಿಸಲಾಗಿದೆ. ಬೆಂಗಳೂರು-ಹೊಸೂರು ನಡುವಿನ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದೊಂದಿಗೆ ಈ ಟರ್ಮಿನಲ್ ನಿರ್ಮಾಣ ಮಾಡಲಾಗಿದ್ದು, ಈಗ ಇದು ಕಾರ್ಯಾರಂಭವನ್ನು ಮಾಡಿದೆ.
ಬೆಂಗಳೂರು-ಹೊಸೂರು ಭಾಗದ ಸರಕು ಸಾಗಣೆಯನ್ನು ಪ್ರಮುಖವಾಗಿ ದೃಷ್ಟಿಯಲ್ಲಿಟ್ಟುಕೊಂಡು ಹೀಲಲಿಗೆ ಗೂಡ್ಸ್ ಟರ್ಮಿನಲ್ ನಿರ್ಮಾಣ ಮಾಡಲಾಗಿದೆ. 59 ವ್ಯಾಗನ್ ನಿರ್ವಹಣೆ ಮಾಡುವಷ್ಟು ದೊಡ್ಡಮಟ್ಟದ ನಿಲ್ದಾಣ ಇದಾಗಿದೆ. ಪೆಟ್ರೋಲಿಯಂ, ಕಬ್ಬಿಣದ ಅದಿರು ಹೊರತುಪಡಿಸಿ ಇತರ ಎಲ್ಲಾ ಸರಕುಗಳನ್ನು ಇಲ್ಲಿಂದ ಸಾಗಣೆ, ಇಳಿಸಿಕೊಳ್ಳಬಹುದಾಗಿದೆ.
ಈ ಟರ್ಮಿನಲ್ ಗೂಡ್ಸ್ ರೈಲುಗಳಿಗೆ ಸರಕು ತುಂಬಲು, ಇಳಿಸಿಕೊಳ್ಳಲು ಸಹಾಯಕವಾಗುವ ಹೈಮಾಸ್ಕ್ ವಿದ್ಯುತ್ ದೀಪದ ವ್ಯವಸ್ಥೆ, ಲಾರಿಗಳ ನಿಲುಗಡೆಗೆ ವಿಶಾಲವಾದ ಸ್ಥಳ, ಚಾಲಕರಿಗೆ ಅಗತ್ಯವಿರುವ ಮೂಲ ಸೌಲಭ್ಯಗಳನ್ನು ಒಳಗೊಂಡಿದೆ. ಈಗಿರುವ ವೈಟ್‌ಫೀಲ್ಡ್ ಸ್ಯಾಟಲೈಟ್ ಗೂಡ್ಸ್ ಟರ್ಮಿನಲ್ ಮೇಲಿನ ದಟ್ಟಣೆ ಕಡಿಮೆ ಮಾಡಲು ಈ ಟರ್ಮಿನಲ್ ನಿರ್ಮಾಣ ಮಾಡಲಾಗಿದೆ.
ಈ ಟರ್ಮಿನಲ್ ಬೆಂಗಳೂರು-ಹೊಸೂರು ಭಾಗದಲ್ಲಿ ಸರಕು ಸಾಗಣೆಗೆ ಅಗತ್ಯ ಅನುಕೂಲ ಕಲ್ಪಿಸಲಿದೆ. ಗೂಡ್ಸ್ ರೈಲಿನಲ್ಲಿ ಸರಕು ಸಾಗಣೆ ಮಾಡುವುದರಿಂದ ವೆಚ್ಚ ಉಳಿತಾಯವಾಗಲಿದೆ. ಅಲ್ಲದೇ ರಸ್ತೆ ಮೇಲಿನ ವಾಹನ ಸಂಚಾರದ ಒತ್ತಡವೂ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಈ ಟರ್ಮಿನಲ್ ಕಾರ್ಯಾರಂಭದ ಕುರಿತು ನೈಋತ್ಯ ರೈಲ್ವೆ ವಲಯದ ಅಧಿಕಾರಿಗಳು ಮಾತನಾಡಿದ್ದು, ಹೀಲಲಿಗೆ ಟರ್ಮಿನಲ್ ಸರಕು ಸಾಗಣೆಗೆ ಪ್ರಮುಖ ಕೇಂದ್ರವಾಗಲು ಸಿದ್ಧವಾಗಿದೆ. ಇದು ಈ ಪ್ರದೇಶದ ಸರಕು ನಿರ್ವಹಣೆ ಸಾಮರ್ಥ್ಯಕ್ಕೆ ಗಣನೀಯ ಕೊಡುಗೆಯನ್ನು ನೀಡುತ್ತದೆ ಎಂದು ಹೇಳಿದ್ದಾರೆ.
ಹೊಸೂರು ಭಾಗದಲ್ಲಿಯೂ ಅನೇಕ ಕೈಗಾರಿಕೆಗಳಿವೆ. ಆ ಪ್ರದೇಶವನ್ನು ಕೈಗಾರಿಕಾ ಹಬ್ ಆಗಿ ತಮಿಳುನಾಡು ಸರ್ಕಾರ ಅಭಿವೃದ್ಧಿಗೊಳಿಸುತ್ತಿದೆ. ಆದ್ದರಿಂದ ಈ ಗೂಡ್ಸ್ ಟರ್ಮಿನಲ್ ಬೆಂಗಳೂರು-ಹೊಸೂರು ಕೈಗಾರಿಕೆಗಳ ಬೆಳವಣಿಗೆಗೆ ಕೊಡುಗೆಯನ್ನು ನೀಡಲಿದೆ.












Click it and Unblock the Notifications