ಶಾಕಿಂಗ್.. ಹುಣಸಮಾರನಹಳ್ಳಿ ಬಳಿ ಚಿರತೆ ಪ್ರತ್ಯಕ್ಷ!
ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಯಲ್ಲಿರುವ ಹುಣಸಮಾರನಹಳ್ಳಿ ಬಳಿ ಚಿರತೆ ಪ್ರತ್ಯಕ್ಷವಾಗಿದೆ ಎಂದು ವರದಿಯಾಗಿದೆ. ಹುಣಸಮಾರನಹಳ್ಳಿ ಬಳಿ ಇರುವ ಯಲಹಂಕ ವಾಯುನೆಲೆ ಸಮೀಪದ ಕೆರೆ ಸಮೀಪ ಚಿರತೆ ಓಡಾಡಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಕೆಲವರು ಚಿರತೆ ಓಡಾಡುತ್ತಿದ್ದ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ ಎನ್ನಲಾಗಿದೆ. ಈ ವಿಡಿಯೋ ಕೂಡ ವೈರಲ್ ಆಗಿದೆ. ಮತ್ತೊಂದೆಡೆ ಹುಣಸಮಾರನಹಳ್ಳಿ ಜನರು ಈ ವಿಚಾರದಿಂದ ಬಹಳ ಆತಂಕಗೊಂಡಿದ್ದಾರೆ. ಎರಡು ದಿನಗಳ ಹಿಂದೆಯೂ ಇದೇ ಭಾಗದಲ್ಲಿ ಚಿರತೆ ಕಾಣಿಸಿಕೊಂಡಿತ್ತು ಎನ್ನಲಾಗಿದೆ.

ಚಿರತೆ ಕಾಣಿಸಿಕೊಂಡಿರುವ ಬಗ್ಗೆ ಇಲ್ಲಿನ ಸ್ಥಳೀಯರು ಯಲಹಂಕ ವಲಯ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಗಂಡಿಗೆಹಳ್ಳಿ, ನೆಲ್ಲುಕುಂಟೆ ಭಾಗದಲ್ಲಿ ಚಿರತೆ ಓಡಾಡುತ್ತಿದೆ ಎಂದು ಹೇಳಲಾಗಿದೆ. ಇನ್ನು ಪದೇ ಪದೇ ಚಿರತೆ ಕಾಣಿಸಿಕೊಂಡಿರುವ ವಿಚಾರದಿಂದ ಈ ಭಾಗದಲ್ಲಿ ಜನ ಹೊರಗೆ ಓಡಾಡಲು ಕೂಡ ಹೆದರುವಂತಾಗಿದೆ.
ಹುಣಸಮಾರನಹಳ್ಳಿ ಬಳಿ ಚಿರತೆ ಪ್ರತ್ಯಕ್ಷವಾಗಿರುವ ವಿಡಿಯೋ ಅನ್ನು ಅಲ್ಲಿನ ಸ್ಥಳೀಯರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಅದನ್ನು ಅರಣ್ಯಾಧಿಕಾರಿಗಳಿಗೆ ನೀಡಿದ್ದಾರಂತೆ. ಹಾಗಾಗಿ ಇಂದಿನಿಂದ ಚಿರತೆ ಸೆರೆ ಕಾರ್ಯಾಚರಣೆ ಶುರುವಾಗಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಹುಣಸಮಾರನಹಳ್ಳಿಯಲ್ಲಿ ಬೆಳ್ಳಂಬೆಳಿಗ್ಗೆ ಹೆಚ್ಚು ಜನರು ವಾಕಿಂಗ್ ಮಾಡಲು ಈ ಪ್ರದೇಶಗಳತ್ತ ಬರುತ್ತಾರೆ. ಈಗ ಪದೇ ಪದೇ ಚಿರತೆ ಕಾಣಿಸಿಕೊಳ್ಳುತ್ತಿರುವುದರಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ. ಮಕ್ಕಳು, ಮಹಿಳೆಯರು ಹೆಚ್ಚಾಗಿ ಓಡಾಡುವುದರಿಂದ ಆದಷ್ಟು ಬೇಗನೆ ಅರಣ್ಯಾಧಿಕಾರಿಗಳು ಚಿರತೆ ಸೆರೆಹಿಡಿಯಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಇನ್ನು ಇತ್ತೀಚೆಗೆ ಬೆಂಗಳೂರಿನ ವಿವಿಧೆಡೆ ಚಿರತೆ ಪ್ರತ್ಯಕ್ಷವಾಗಿತ್ತು. ಮೊದಲಿಗೆ ಬೆಂಗಳೂರಿನ ಜಿಗಣಿ ಪ್ರದೇಶದಲ್ಲಿ ಚಿರತೆ ಪತ್ತೆಯಾಗಿತ್ತು. ಇದಾದ ಎರಡು ವಾರಗಳ ನಂತರ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಬಳಿ ಚಿರತೆ ಫ್ಲೈಓವರ್ ದಾಟುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಘಟನೆ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದರು.
ಜಿಗಣಿ ಪ್ರದೇಶದ ಬಿಆರ್‌ಎಸ್ ಬಡಾವಣೆಯಲ್ಲೂ ಮತ್ತೊಂದು ಚಿರತೆ ಕಾಣಿಸಿಕೊಂಡಿದ್ದು, ಆತಂಕ ಸೃಷ್ಟಿಸಿತ್ತು. ಇವೆರಡೂ ಒಂದೇ ಚಿರತೆ ಆಗಿರಬಹುದು ಎಂದು ಅಂದಾಜಿಸಲಾಗಿತ್ತು. ಇನ್ನು ಜಿಗಣಿ ಬನ್ನೇರುಘಟ್ಟ ಅರಣ್ಯದ ಸಮೀಪವೇ ಇರುವುದರಿಂದ ಕಾಡಿನಿಂದ ಚಿರತೆ ಹೊರಬಂದಿರಬಹುದು ಎಂದು ಎಂದು ಹೇಳಲಾಗಿತ್ತು. ಅಲ್ಲಿಂದಲೇ ಚಿರತೆ ಎಲೆಕ್ಟ್ರಾನಿಕ್ ಸಿಟಿ ಕಡೆಗೂ ಬಂದಿತ್ತು ಎಂದು ಶಂಕಿಸಲಾಗಿತ್ತು.
ಕೆಲ ತಿಂಗಳ ಹಿಂದೆ ನೈಸ್ ರಸ್ತೆಯ ಚಿಕ್ಕ ತೋಗೂರು ಪ್ರದೇಶದಲ್ಲಿಯೂ ಚಿರತೆಯೊಂದು ಎಂಟ್ರಿ ನೀಡಿತ್ತು. ಅದನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಲೆ ಹಾಕಿ ಸೆರೆಹಿಡಿದಿದ್ದರು. ಕಳೆದ ವರ್ಷ ಎಲೆಕ್ಟ್ರಾನಿಕ್ ಸಿಟಿ ಬಳಿಯ ಕೂಡ್ಲು ಗೇಟ್ ಬಳಿಯೂ ಪ್ರತ್ಯಕ್ಷವಾಗಿದ್ದ ಚಿರತೆ ಸೆರೆ ಹಿಡಿಯಲು ಮುಂದಾಗಿದ್ದರು. ಆದರೆ ಅದು ಸಾಧ್ಯವಾಗದ ಕಾರಣ ಗುಂಡಿಕ್ಕಿ ಕೊಲ್ಲಲಾಗಿತ್ತು. ಇದೀಗ ಏರ್‌ಪೋರ್ಟ್ ರಸ್ತೆಯಲ್ಲಿ ಚಿರತೆ ಕಾಣಿಸಿಕೊಂಡಿರುವ ಎಲ್ಲರನ್ನೂ ಭಯಭೀತಗೊಳಿಸಿದೆ. ಈ ಭಾಗದಲ್ಲಿ ದಿನವಿಡೀ ಜನಸಂಚಾರ ಹೆಚ್ಚಾಗಿರುವುದರಿಂದ ಆತಂಕ ಮನೆಮಾಡಿದೆ.












Click it and Unblock the Notifications