ನಟ ದರ್ಶನ್‌ಗೆ ಜಾಮೀನು; ವಿಚಾರಣೆ ಬಳಿಕ ವಕೀಲರು ಹೇಳಿದ್ದೇನು?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ತೂಗುದೀಪ ಅವರ ಜಾಮಿನು ಅರ್ಜಿ ವಿಚಾರಣೆಯನ್ನು ಅಕ್ಟೋಬರ್ 8ಕ್ಕೆ ಮುಂದೂಡಿಕೆ ಮಾಡಲಾಗಿದೆ. ಶನಿವಾರ ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದ ನಟ ದರ್ಶನ್‌ಗೆ ನಿರಾಸೆಯಾದರೂ, ಜಾಮೀನು ಸಿಕ್ಕೇ ಸಿಗುತ್ತದೆ ಎನ್ನುವ ವಿಶ್ವಾಸ ಹೆಚ್ಚಾಗಿದೆ.
57ನೇ ಸಿಸಿಎಚ್ ನ್ಯಾಯಾಲಯದಲ್ಲಿ ಶುಕ್ರವಾರ ದರ್ಶನ್ ಪರ ವಕೀಲ ಸಿ.ವಿ. ನಾಗೇಶ್ ಸುದೀರ್ಘ ವಾದ ಮಂಡಿಸಿದ್ದ ಬಳಿಕ, ವಿಚಾರಣೆಯನ್ನು ಶನಿವಾರಕ್ಕೆ (ಇಂದಿಗೆ) ಮುಂದೂಡಲಾಗಿತ್ತು. ಇಂದು ಕೂಡ ತಮ್ಮ ವಾದ ಮುಂದುವರೆಸಿದ ದರ್ಶನ್ ಪರ ವಕೀಲರು, ದರ್ಶನ್ ವಿರುದ್ಧ ಪೊಲೀಸರು ಸಾಕ್ಷಿಗಳನ್ನು ತಿರುಚಿದ್ದಾರೆ ಎಂದು ವಾದಿಸಿದರು.

ಬೇಲ್ ಈಸ ಎ ರೂಲ್, ಜೈಲ್ ಈಸ ಎಕ್ಸೆಪ್ಷೆನ್, ಸೆಷನ್ಸ್ ಕೋರ್ಟ್, ಹೈಕೋರ್ಟ್ ಜಾಮೀನು ಕೊಡಲು ಹಿಂಜರಿಯಬಾರದು, ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳೇ ಇದನ್ನು ಹೇಳಿದ್ದಾರೆ ಎಂದು ಸುಪ್ರೀಂ ಕೋರ್ಟ್ ಆದೇಶಗಳ ಪ್ರತಿಯನ್ನು ಸಲ್ಲಿಸಿದರು.
ಬಲವಾಗಿ ವಾದ ಮಂಡನೆ
ಘಟನೆಗೆ ಸಂಬಂಧಪಟ್ಟಂತೆ ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆ ದಾಖಲಿಸಲು ತಡ ಮಾಡುವಂತಿಲ್ಲ, ಮೂರು ದಿನ ತಡ ಮಾಡಿದ್ದಕ್ಕೆ ಕೊಲೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಜಾಮೀನು ನೀಡಿದೆ ಎಂದು ಸಿ.ವಿ. ನಾಗೇಶ್ ವಾದಿಸಿದರು. ದರ್ಶನ್ ವಿರುದ್ಧ ಸಾಕ್ಷಿಗಳನ್ನು ತಿರುಚಲಾಗಿದೆ, ತನಿಖೆ ವೇಳೆ ಪೊಲೀಸರು ನಿಯಮ ಪಾಲಿಸಿಲ್ಲ, ಈ ಪ್ರಕರಣದಲ್ಲಿ ದರ್ಶನ್‌ರನ್ನು ಸಿಲುಕಿಸಲು ಸಂಚು ಮಾಡಲಾಗಿದೆ ಎಂದು ವಾದಿಸಿದರು. ಚಾರ್ಜ್‌ಶೀಟ್‌ನಲ್ಲಿರುವ ಲೋಪದೋಷಗಳನ್ನು ನ್ಯಾಯಾಲಯದ ಗಮನಕ್ಕೆ ತಂದ ಅವರು, ತಮ್ಮ ಕಕ್ಷಿದಾರರಿಗೆ ಜಾಮೀನು ಕೊಡಬೇಕು ಎಂದು ಮನವಿ ಮಾಡಿದರು.
ಸಿವಿ ನಾಗೇಶ್ ವಾದದ ಬಳಿಕ, ಎಸ್‌ಪಿಪಿ ಪ್ರಸನ್ನ ಕುಮಾರ್ ಆಕ್ಷೇಪಣೆ ಸಲ್ಲಿಸಲು ಅಕ್ಟೋಬರ್ 8ಕ್ಕೆ ಸಮಯಾವಕಾಶ ಕೇಳಿದರು. ಎಸ್‌ಪಿಪಿ ಅವರು ವಾದ ಮಂಡಿಸಿದ ಬಳಿಕ ನ್ಯಾಯಾಧೀಶರು ದರ್ಶನ್ ಜಾಮೀನು ಅರ್ಜಿ ಕುರಿತಂತೆ ಆದೇಶ ಕೊಡಲಿದ್ದಾರೆ.
ದಸರಾ ಹಬ್ಬಕ್ಕೆ ಜಾಮೀನು?
ದರ್ಶನ್ ಪರ ವಕೀಲರು ಮಂಡಿಸಿರುವ ವಾದವನ್ನು ನೋಡಿದಾಗ ಅಭಿಮಾನಿಗಳು ಮತ್ತು ಕುಟುಂಬಸ್ಥರಲ್ಲಿ ಜಾಮೀನು ಸಿಗುವ ವಿಶ್ವಾಸ ಹೆಚ್ಚಾಗಿದೆ. ದರ್ಶನ್‌ಗೆ ಬೆನ್ನುನೋವು ಕೂಡ ಹೆಚ್ಚಾಗಿದ್ದು, ಜಾಮೀನು ಸಿಕ್ಕ ತಕ್ಷಣ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುವ ಸಾಧ್ಯತೆ ಇದೆ. ದಸರಾ ಹಬ್ಬದ ವೇಳೆಗೆ ದರ್ಶನ್‌ಗೆ ಜಾಮೀನು ಸಿಗಲಿ ಎಂದು ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಜಾಮೀನು ಅರ್ಜಿ ವಿಚಾರಣೆ ಬಳಿಕ ಮಾತನಾಡಿದ ದರ್ಶನ್ ಪರ ಕಿರಿಯ ವಕೀಲರು, ದರ್ಶನ್‌ಗೆ ಸೆಷನ್ಸ್ ಕೋರ್ಟ್‌ನಲ್ಲೇ ಜಾಮೀನು ಸಿಗುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.












Click it and Unblock the Notifications