ಬೆಂಗಳೂರಲ್ಲಿ ಅತ್ಯಾಧುನಿಕ ಬಿಎಂಟಿಸಿ ಸ್ಮಾರ್ಟ್ ಎಲೆಕ್ಟ್ರಿಕ್ ಬಸ್ ಸಂಚಾರ ಆರಂಭ, ಇದರ ವೈಶಿಷ್ಯಗಳೇನು?
ಬೆಂಗಳೂರು, ಜುಲೈ 28: ಬೆಂಗಳೂರಿನ ನಾಗರಿಕರು ಈಗ ಸ್ಮಾರ್ಟ್, ಸುರಕ್ಷಿತ ಮತ್ತು ಹಸಿರು ಸಾರ್ವಜನಿಕ ಸಾರಿಗೆ ಬಳಸಲಿದ್ದಾರೆ. ಪರಿಸರಕ್ಕೆ ಪೂರಕವಾದ ಟಾಟಾ ಮೋಟಾರ್ಸ್‌ನ ಸ್ಮಾರ್ಟ್ ಎಲೆಕ್ಟ್ರಿಕ್ ಬಸ್‌ಗಳ ಸಂಚಾರವನ್ನು ಬಿಎಂಟಿಸಿ ಆರಂಭಿಸಿದೆ. ಈ ಬಸ್‌ಗಳಿಗೆ ಶುಕ್ರವಾರ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಚಾಲನೆ ನೀಡಿದರು.
ಬೆಂಗಳೂರಿನ ಶಾಂತಿನಗರ ಟಿಟಿಎಂಸಿ ಕಚೇರಿ ಆವರಣದಲ್ಲಿ ನಡೆದ ಸಮಾರಂಭದಲ್ಲಿ ನೂತನ ಅತ್ಯಾಧುನಿಕ 921 ಇವಿ ಬಸ್‌ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್ ತೋರಿಸಿ ಸಚಿವರು ಮಾತನಾಡಿದರು.

ಟಾಟಾ ಮೋಟಾರ್ಸ್ ಮತ್ತು ಬಿಎಂಟಿಸಿಯ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಟಿಎಂಎಲ್ ಸ್ಮಾರ್ಟ್ ಸಿಟಿ ಮೊಬಿಲಿಟಿ ಸೊಲ್ಯೂಷನ್ಸ್ ಲಿಮಿಟೆಡ್ ನಡುವೆ ಇವಿ ಬಸ್‌ಗಳ ಖರೀದಿ-ಪೂರೈಕೆ ಒಪ್ಪಂದವಾಗಿದೆ. ಅದರ ಭಾಗವಾಗಿಯೇ ಕಂಪನಿಯು 12 ವರ್ಷಗಳ ಅವಧಿಗೆ 921 ಅತ್ಯಾಧುನಿಕ 12-ಮೀಟರ್ ಲೋ-ಫ್ಲೋರ್ ಎಲೆಕ್ಟ್ರಿಕ್ ಬಸ್ ಗಳನ್ನು ಪೂರೈಸುತ್ತದೆ.
ಅವುಗಳನ್ನು ಬೆಂಗಳೂರಿನಲ್ಲಿ ಬಿಎಂಟಿಸಿ ನಿರ್ವಹಿಸಲಿದೆ. ಟಾಟಾ ಸ್ಟಾರ್‌ಬಸ್ ಇವಿ ಬಸ್‌ಗಳು ಸುಸ್ಥಿರ ಮತ್ತು ಆರಾಮದಾಯಕ ಪ್ರಯಾಣ ಅನುಭವ ನೀಡುವ ಹಾಗೂ ಉನ್ನತ ವಿನ್ಯಾಸ ಮತ್ತು ಅತ್ಯುತ್ತಮ ದರ್ಜೆಯ ವೈಶಿಷ್ಟ್ಯಗಳೊಂದಿಗೆ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಬಸ್ ಆಗಿವೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಜಿ. ಸತ್ಯವತಿ ಮಾಹಿತಿ ನೀಡಿದರು.

ಸುಧಾರಿತ ವೈಶಿಷ್ಯ, ಉತ್ತಮ ಕಾರ್ಯಕ್ಷಮತೆ, ಪರಿಸರ ಸ್ನೇಹಿ ಬಸ್
ಉತ್ತಮ-ಗುಣಮಟ್ಟದ ಮಾನದಂಡವನ್ನು ಪೂರೈಸುವ ಮೂಲಕ, ಟಾಟಾ ಮೋಟಾರ್ಸ್‌ನ ಎಲೆಕ್ಟ್ರಿಕ್ ಬಸ್ ಮಾದರಿಗೆ ಚಾಲನೆ ನೀಡಲು ನಾವು ಉತ್ಸುಕರಾಗಿದ್ದೇವೆ. ಎಲೆಕ್ಟ್ರಿಕ್ ಬಸ್‌ನ ಸುಧಾರಿತ ವೈಶಿಷ್ಟ್ಯಗಳು ಮತ್ತು ಪ್ರಭಾವಶಾಲಿ ಕಾರ್ಯಕ್ಷಮತೆ ಹೊಂದಿದ್ದು, ಇಂಗಾಲದ ಸೂಸುವಿಕೆಯನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಇದು ಪರಿಸರಕ್ಕೆ ಪೂರಕವಾಗಿರುವುದರಿಂದ ಜನರ ಜೀವನದ ಗುಣಮಟ್ಟವನ್ನು ಸುಧಾರಣೆಗೆ ಸಹಕಾರಿಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ, ಟಿಎಂಎಲ್ ಸ್ಮಾರ್ಟ್ ಸಿಟಿ ಮೊಬಿಲಿಟಿ ಸೊಲ್ಯೂಷನ್ಸ್ ಲಿಮಿಟೆಡ್‌ನ ಸಿಇಒ ಮತ್ತು ಎಂಡಿ ಅಸೀಮ್ ಕುಮಾರ್ ಮುಖೋಪಾಧ್ಯಾಯ ಅವರು, ನಮ್ಮ ಮೊದಲ ಸ್ಮಾರ್ಟ್ ಎಲೆಕ್ಟ್ರಿಕ್ ಬಸ್ ಬೆಂಗಳೂರಿನಲ್ಲಿ ಆರಂಭವಾಗಿರುವುದಕ್ಕೆ ಸಂತಸವಾಗಿದೆ. ದಶಕಗಳಿಂದ ಟಾಟಾ ಮೋಟಾರ್ಸ್‌ನ ಆಧುನಿಕ ಸಂಶೋಧನೆ ಮತ್ತು ಅಭಿವೃದ್ಧಿ ಸೌಲಭ್ಯಗಳು ಅತ್ಯಾಧುನಿಕ ಮತ್ತು ಪರಿಸರ ಸ್ನೇಹಿ ಕೊಡುಗೆಗಳನ್ನು ಸೂಕ್ತವಾಗಿ ರಚಿಸಿದ್ದೇವೆ.
ಸುರಕ್ಷತೆ-ಆರಾಮದಾಯಕ ಅನುಭವ
ಇಂದು ಚಾಲನೆ ನೀಡಲಾದ ಬಸ್ ಅತ್ಯಾಧುನಿಕ ವೈಶಿಷ್ಟ್ಯಗಳು ಮತ್ತು ಅದ್ಭುತವಾದ ವಿನ್ಯಾಸವನ್ನು ಹೊಂದಿವೆ. ಪ್ರಯಾಣಿಕರಿಗೆ ಸಮಸ್ಯಾರಹಿತ ಪ್ರಯಾಣದ ಅನುಭವವನ್ನು ನೀಡುತ್ತದೆ. ಬಸ್ಸುಗಳು ಸಾರ್ವಜನಿಕ ಸಾರಿಗೆಯನ್ನು ಸುರಕ್ಷಿತ, ಆರಾಮದಾಯಕ ಮತ್ತು ವಿದ್ಯುತ್ ಮಿತವ್ಯಯಕಾರಿ ಆಗಿಸಿದೆ ಎಂದು ಹೇಳಿದರು.
ಸ್ಟಾರ್ ಬಸ್ ಇವಿ ಸರಣಿಯ ಅತ್ಯುತ್ತಮ ವಿನ್ಯಾಸ, ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳು ಮತ್ತು ಶಕ್ತಿಯುತ, ಮಿತವ್ಯಯಕಾರಿ ವಿದ್ಯುತ್ ಬಳಕೆ, ಎಲೆಕ್ಟ್ರಿಕ್ ಡ್ರೈವ್‌ಟ್ರೇನ್ ಅನ್ನು ಹೊಂದಿದೆ. ಶೂನ್ಯ ಟೈಲ್‌ಪೈಪ್ ಹೊರಸೂಸುವಿಕೆಯೊಂದಿಗೆ, ಇ-ಬಸ್ ವಾಯು ಮಾಲಿನ್ಯವನ್ನು ಕಡಿಮೆ ಮಾಡಲು ಮತ್ತು ಹವಾಮಾನ ಬದಲಾವಣೆಯ ಪರಿಣಾಮ ತಗ್ಗಿಸಲು ಗಣನೀಯವಾಗಿ ಕೊಡುಗೆ ನೀಡುತ್ತದೆ ಎಂದು ಹೇಳಿದರು.
35 ಆಸನ ಹೊಂದಿದ ಇವಿ ಸ್ಮಾರ್ಟ್ ಬಸ್
ಈ ಬಸ್‌ಗಳು ಹೊಸ-ಪೀಳಿಗೆಯ ಎಲೆಕ್ಟ್ರಿಕ್ ಪವರ್‌ಟ್ರೇನ್, ಸುಧಾರಿತ ಇಂಟಿಗ್ರೇಟೆಡ್ ಟ್ರಾನ್ಸ್‌ಪೋರ್ಟ್ ಸಿಸ್ಟಮ್, ಎಲೆಕ್ಟ್ರಿಕ್ ಸ್ಟೆಬಿಲಿಟಿ ಕಂಟ್ರೋಲ್, ಎಲೆಕ್ಟ್ರಿಕ್ ಬ್ರೇಕ್ ಡಿಸ್ಟ್ರಿಬ್ಯೂಷನ್, ಸುಧಾರಿತ ಟೆಲಿಮ್ಯಾಟಿಕ್ಸ್ ಸಿಸ್ಟಮ್ ಜೊತೆಗೆ 35 ಪ್ರಯಾಣಿಕರಿಗೆ ಆರಾಮದಾಯಕ ಆಸನ, ಲೋ-ಫ್ಲೋರ್ ಸಂರಚನೆಯಿಂದಾಗಿ ಮತ್ತು ಅದರ ವೈಶಿಷ್ಟ್ಯಗಳಿಂದ ಗಮನ ಸೆಳೆಯುತ್ತದೆ.
ಇಲ್ಲಿಯವರೆಗೆ ಟಾಟಾ ಮೋಟಾರ್ಸ್ ಭಾರತದ ಅನೇಕ ನಗರಗಳಲ್ಲಿ 900ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್‌ಗಳನ್ನು ಪೂರೈಸಿದೆ. ಇದು ಒಟ್ಟು 8 ಕೋಟಿ ಕಿಲೋ ಮೀಟರ್‌ಗಳಿಗಿಂತ ಹೆಚ್ಚು ಪ್ರಯಾಣಿಸಿದೆ ಮತ್ತು ಶೇಕಡಾ 95 ಕ್ಕಿಂತ ಹೆಚ್ಚಿನ ಸಮಯದಿಂದ ಚಾಲನೆಯಲ್ಲಿದೆ ಎಂದು ಅವರು ವಿವರಿಸಿದರು.
ಕಾರ್ಯಕ್ರಮದಲ್ಲಿ ಸರ್ಕಾರದ ಕಾರ್ಯದರ್ಶಿ ಡಾ. ಎನ್.ವಿ ಪ್ರಸಾದ್, ಸಾರಿಗೆ ಇಲಾಖೆ, ಬಿಎಂಟಿಸಿ ಅಧಿಕಾರಿಗಳು, ಟಾಟಾ ಮೋಟಾರ್ಸ್ ಪ್ರತಿನಿಧಿಗಳು, ಮತ್ತಿತರರು ಪಾಲ್ಗೊಂಡಿದ್ದರು.












Click it and Unblock the Notifications