ಬೆಂಗಳೂರು ಸುತ್ತ ಅಕ್ರಮ ಭೂ ಒತ್ತುವರಿ; ಆಡಿಟ್‌ಗೆ ಸೂಚನೆ
ಬೆಂಗಳೂರು, ಸೆಪ್ಟೆಂಬರ್ 20; ಉದ್ಯಾನ ನಗರಿ ಬೆಂಗಳೂರು ಮತ್ತು ಬೆಂಗಳೂರು ನಗರದ ಸುತ್ತಮುತ್ತಲಿನ ಭೂಮಿಗೆ ಚಿನ್ನದ ಬೆಲೆ ಇದೆ. ಹಲವು ಕಡೆ ಸರ್ಕಾರಿ ಭೂಮಿ ಒತ್ತಯವರಿಯಾಗಿದೆ. ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳು ಲ್ಯಾಂಡ್ ಆಡಿಟಿಂಗ್‌ಗೆ ಸೂಚನೆ ನೀಡಿದ್ದಾರೆ.
ಈ ಕುರಿತು ಕಂದಾಯ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಟಿಪ್ಪಣಿಯೊಂದನ್ನು ಕಳಿಸಿದ್ದಾರೆ. ಲ್ಯಾಂಡ್ ಆಡಿಟಿಂಗ್ ಮಾಡಲು ಕ್ರಮ ಕೈಗೊಳ್ಳಬೇಕಿದ್ದು, ಈ ಬಗ್ಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.

ಟಿಪ್ಪಣಿಯಲ್ಲಿ ಸಿದ್ದರಾಮಯ್ಯ ರಮೇಶ್ ಬಾಬು, ಮಾಜಿ ವಿಧಾನ ಪರಿಷತ್ ಸದಸ್ಯರು ಹಾಗೂ ಕೆಪಿಸಿಸಿ ವಕ್ತಾರರು ಲ್ಯಾಂಡ್ ಆಡಿಟಿಂಗ್ ಮಾಡಲು ಕೋರಿದ್ದಾರೆ. ಆದ್ದರಿಂದ ಕ್ರಮಗಳನ್ನು ಕೈಗೊಳ್ಳಿ ಎಂದು ಉಲ್ಲೇಖ ಮಾಡಿದ್ದಾರೆ.
ಟಿಪ್ಪಣಿಯ ವಿವರಗಳು; ಬೆಂಗಳೂರು ಮತ್ತು ಸುತ್ತಮುತ್ತ ಭೂಮಿಯ ಬೆಲೆ ಬಹಳಷ್ಟು ಏರಿಕೆಯಾಗಿದ್ದು, ವಾಣಿಜ್ಯ ಉದ್ದೇಶಗಳಿಗಾಗಿ ಹಾಗೂ ವೈಯಕ್ತಿಕ ಲಾಭಕ್ಕಾಗಿ ಅಕ್ರಮ ದಾಖಲೆ ಸೃಷ್ಟಿಸಿ ಒತ್ತುವರಿ ಮಾಡಲಾಗುತ್ತಿದೆ. ನಗರದ ಸುತ್ತಮುತ್ತ 100 ಕಿ. ಮೀ. ವ್ಯಾಪ್ತಿಯಲ್ಲಿ ನಿರ್ಮಿತವಾಗಿರುವ ರೆಸಾರ್ಟ್ ಮತ್ತು ಅತಿಥಿ ತಂಗುದಾಣಗಳು ಸಹ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿರುವ ಬಗ್ಗೆ ದೂರುಗಳು ದಾಖಲಾಗಿರುತ್ತವೆ.
ನಗರದ ಸುತ್ತಮುತ್ತ ಸುಮಾರು 75000 ಎಕರೆ ಭೂಮಿ ಒತ್ತುವರಿ ಹಾಗೂ ತಂಗುದಾಣಗಳು 5-6 ಸಾವಿರ ಎಕರೆ ಭೂಮಿ ಕಾನೂನುಬಾಹಿರವಾಗಿ ಸ್ವಾಧೀನ ಪಡೆದಿರುವ ಮಾಹಿತಿ ಅಂಕಿಅಂಶಗಳ ಮೂಲಕ ಬಹಿರಂಗವಾಗಿರುವುದಾಗಿ ತಿಳಿಸಿದ್ದಾರೆ ಎಂದು ಟಿಪ್ಪಣಿಯಲ್ಲಿ ಉಲ್ಲೇಖಿಸಿದ್ದಾರೆ.
ಸಾರ್ವಜನಿಕ ಹಿತದೃಷ್ಟಿ ಹಾಗೂ ಸರ್ಕಾರದ ಸಂಪನ್ಮೂಲ ಕ್ರೋಢೀಕರಣ ದೃಷ್ಟಿಯಿಂದ ತಂಗುದಾಣಗಳ ಅಕ್ರಮ ಭೂಮಿ ಸ್ವಾಧೀನ ಕುರಿತು ಲ್ಯಾಂಡ್ ಆಡಿಟಿಂಗ್ ಮಾಡಲು ಕ್ರಮ ಕೈಗೊಳ್ಳಬೇಕಾಗಿ ರಮೇಶ್ ಬಾಬು ಕೋರಿದ್ದು, ಈ ಬಗ್ಗೆ ಅಗತ್ಯ ಕ್ರಮವಹಿಸಲು ಸೂಚಿಸಿದ್ದಾರೆ.
ರಮೇಶ್ ಬಾಬು ಪತ್ರ; ರಮೇಶ್ ಬಾಬು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರವೊಂದನ್ನು ಬರೆದಿದ್ದರು. ಎ. ಟಿ. ರಾಮಸ್ವಾಮಿ ನೇತೃತ್ವದ ಸಮಿತಿ, ವಿ. ಬಾಲಸುಬ್ರಮಣ್ಯನ್ ಸಮಿತಿ ನೀಡಿರುವ ವರದಿಗಳಲ್ಲಿ ದಾಖಲೆಯ ಸಮೇತ ಭೂ ಕಬಳಿಕೆ ಪ್ರಕರಣಗಳನ್ನು ಉಲ್ಲೇಖಿಸಲಾಗಿದೆ ಎಂದು ಪತ್ರದಲ್ಲಿ ವಿವರಿಸಿದ್ದರು.
ದಾಖಲೆಗಳಲ್ಲಿ ಇರುವ ವಿಸ್ತೀರ್ಣಕ್ಕೂ ಇವರ ಸ್ವಾಧೀನದಲ್ಲಿರುವ ವಿಸ್ತೀರ್ಣಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಕಂದಾಯ ದಾಖಲೆಗಳನ್ನು ತಿದ್ದುವ ಮೂಲಕ ಸರ್ಕಾರಿ ಭೂಮಿಯಲ್ಲಿ ವಿಲಾಸಿ ತಂಗುದಾಣಗಳನ್ನು ಹೊಂದಿರುವ ಮತ್ತು ನಡೆಸುತ್ತಿರುವ ಅನೇಕ ದೂರುಗಳು ದಾಖಲಾಗಿವೆ ಎಂದು ಪ್ರದಲ್ಲಿ ಉಲ್ಲೇಖಿಸಿದ್ದರು.
ರಾಜ್ಯ ಸರ್ಕಾರ ಇಂತಹ ಅನುಮಾನಿತ ಮತ್ತು ಆರೋಪಿತ ರೆಸಾರ್ಟ್‌ಗಳ/ ತಂಗುದಾಣಗಳ ಭೂಮಿ ಲೆಕ್ಕ ಪರಿಶೋಧನೆ (ಆಡಿಟಿಂಗ್) ಮಾಡಬೇಕು ಎಂದು ರಮೇಶ್ ಬಾಬು ಪತ್ರದಲ್ಲಿ ಮನವಿ ಮಾಡಿದ್ದರು. ಈ ಪತ್ರದ ಹಿನ್ನಲೆಯಲ್ಲಿ ಕಂದಾಯ ಇಲಾಖೆಗೆ ಸಿದ್ದರಾಮಯ್ಯ ಟಿಪ್ಪಣಿಯನ್ನು ಕಳಿಸಿಕೊಟ್ಟಿದ್ದಾರೆ.
ಬೆಂಗಳೂರು ನಗರದಲ್ಲಿ ಸರ್ಕಾರಿ ಭೂಮಿ ಒತ್ತುವರಿ ತೆರವು ಸಂಬಂಧದ ಕರ್ನಾಟಕ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೂ ಸಲ್ಲಿಕೆಯಾಗಿದೆ. ಕಳೆದ ವಾರ ಅರ್ಜಿ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಪಿ. ಬಿ. ವರಲೆ ಹಾಗೂ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರಿದ್ದ ವಿಭಾಗೀಯಪೀಠ ಸರ್ಕಾರ ಮತ್ತು ಬೆಂಗಳೂರು ಜಿಲ್ಲಾಧಿಕಾರಿಗೆ ಒತ್ತುವರಿ ತೆರವು ಕುರಿತು ಕ್ರಮ ಕೈಗೊಂಡಿರುವ ಬಗ್ಗೆ 4 ವಾರಗಳಲ್ಲಿ ಸಮಗ್ರ ವರದಿಯನ್ನು ಸಲ್ಲಿಸುವಂತೆ ಸೂಚನೆ ನೀಡಿತ್ತು.
ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡು ಆ ಜಾಗದಲ್ಲಿ ದೊಡ್ಡ ಕಟ್ಟಡಗಳನ್ನು ನಿರ್ಮಿಸಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತೆರವಿಗೆ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು. ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಬೇಕು, ಇಲ್ಲವಾದರೆ ಏನೂ ಪ್ರಯೋಜನವಿಲ್ಲ ಎಂದು ಹೈಕೋರ್ಟ್ ನಿರ್ದೇಶನ ನೀಡಿತ್ತು.












Click it and Unblock the Notifications