ಬೆಂಗಳೂರಿನ ವೈಟ್‌ಫೀಲ್ಡ್ KTPOಗೆ ವಿಶ್ವದರ್ಜೆ ರೂಪ; ಮತ್ತೊಂದೆಡೆ ಕರ್ನಾಟಕಕ್ಕೆ ₹3,600 ಕೋಟಿ ಹೂಡಿಕೆ

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರದ ಬಂಡವಾಳ ಸೆಳೆಯುವ ಪ್ರಯತ್ನದ ಭಾಗವಾಗಿ ಸಾವಿರಾರು ಕೋಟಿ ರೂಪಾಯಿ ಹರಿದು ಬರುತ್ತಿದೆ. ಇನ್ನೊಂದೆಡೆ ಬೆಂಗಳೂರಿನ ಪ್ರತಿಷ್ಠಿತ ಕೈಗಾರಿಕಾ ನಗರಗಳಲ್ಲಿ ಒಂದಾದ ವೈಟ್ ಫೀಲ್ಡ್ ನಲ್ಲಿ ಕರ್ನಾಟಕ ವ್ಯಾಪಾರ ಉತ್ತೇಜನಾ ಸಂಸ್ಥೆ (ಕೆಟಿಪಿಒ) ಪ್ರದೇಶವನ್ನು ಬಹುಹಂತಗಳಲ್ಲಿ ವಿಶ್ವದರ್ಜೆಯಲ್ಲಿ ಅಭಿವೃದ್ಧಿಯಾಗಲಿದೆ. ಇಲ್ಲಿನ 48.35 ಎಕರೆ ಸಂಪೂರ್ಣ ಬಳಕೆ ಆಗಲಿದೆ.

ಫ್ರಾನ್ಸ್ ಪ್ರವಾಸದಿಂದ ಮರಳಿದ ಬಳಿಕ ವಿವಿಧ ಕಂಪನಿಗಳ ಜೊತೆ ಒಡಂಬಡಿಕೆ, ಹೂಡಿಕೆ, ಅಭಿವೃದ್ಧಿ ಪ್ರಕ್ರಿಯೆಲ್ಲಿ ತೊಡಗಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ ಅವರು ಈ ಬಗ್ಗೆ ಅಧಿಕೃತವಾಗಿ ಮಂಗಳವಾರ ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ಭಾರತೀಯ ವ್ಯಾಪಾರ ಉತ್ತೇಜನಾ ಸಂಸ್ಥೆ (ಐಟಿಪಿಒ) ಅಧ್ಯಕ್ಷ ಜಾವೆದ್ ಅಶ್ರಫ್ ಅವರ ಜತೆ ವೈಟ್ ಫೀಲ್ಡ್ ಕೆಟಿಪಿಒ ಪ್ರದೇಶಕ್ಕೆ ಭೇಟಿ ನೀಡಿದರು. ಈ ಬೃಹತ್ ಪ್ರದೇಶದಲ್ಲಿ ವಿಶ್ವ ದರ್ಜೆಯ ಕನ್ವೆನ್ಷನ್ ಸೆಂಟರ್, ಸಭಾಂಗಣ, ಪ್ರದರ್ಶನಾಂಗಣ ಇತ್ಯಾದಿಗಳಿರುವ ವ್ಯವಸ್ಥೆಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲು ತೀರ್ಮಾನಿಸಲಾಗಿದೆ. ಇದರಿಂದ ನಗರದಲ್ಲಿ ವಾಣಿಜ್ಯ ಮತ್ತು ವ್ಯಾಪಾರ ವಹಿವಾಟುಗಳಿಗೆ ಮತ್ತಷ್ಟು ಉತ್ತೇಜನ ಸಿಗಲಿದೆ ಎಂದರು.

KTPO Whitefield

ಕೆಟಿಪಿಒ ದಲ್ಲಿ ಶೇಕಡಾ‌ 51ರಷ್ಟು ಷೇರು ಐಟಿಪಿಒ ಹೊಂದಿದೆ. ರಾಜ್ಯ ಸರ್ಕಾರ ಶೇಕಡಾ 49ರಷ್ಟು ಷೇರು ಹೊಂದಿದೆ. ಇಲ್ಲಿ ಕೆಟಿಪಿಒ 50 ಎಕರೆ ಭೂಮಿ ಹೊಂದಿತ್ತು. ಮೆಟ್ರೋ ರೈಲು ನಿಗಮದಿಂದ 1.65 ಎಕರೆ ಬಳಕೆ ಆದ ಬಳಿಕ 48.35 ಎಕರೆ ಉಳಿದಿದೆ. ಇಲ್ಲಿ ಖಾಲಿ ಇರುವ ಜಾಗದಲ್ಲಿ ವಿವಿಧ ಉದ್ದೇಶಗಳಿಗೆ ಬಳಸಬಹುದಾದ ಭವಿಷ್ಯದ ಆಧುನಿಕ ಪ್ರದರ್ಶನ ಸಭಾಂಗಣಗಳು, ಮೆಗಾ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೆ ಅನುಕೂಲ ಆಗುವ ಸಭಾಂಗಣಗಳು, ವಾಹನ‌ ನಿಲುಗಡೆ ಸೇರಿದಂತೆ ಇತರ ಅಗತ್ಯ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು.

ವಿಶ್ವ ವ್ಯಾಪಾರ, ಪ್ರದರ್ಶನ ಕೇಂದ್ರ

ಖಾಲಿ ಜಾಗದ ಪೈಕಿ 5 ಎಕರೆ ವಿಸ್ತೀರ್ಣದಲ್ಲಿ ಉದ್ದೇಶಿತ ಜಾಗತಿಕ ಮಟ್ಟದ ವ್ಯಾಪಾರ, ಪ್ರದರ್ಶನ ಮತ್ತು ಸಮಾವೇಶ ತಾಣ ಅಭಿವೃದ್ಧಿಪಡಿಸಲಾಗುವುದು.‌ ಇದಕ್ಕಾಗಿ ಆರ್.ಎಸ್.ಪಿ.‌ ಕಂಪನಿ ವಿನ್ಯಾಸ ಸಿದ್ಧಪಡಿಸಿದೆ. ನಮ್ಮ ಯೋಜನೆಯು ಮುಂಬೈನಲ್ಲಿರುವ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ಗಿಂತ ಚೆನ್ನಾಗಿರಬೇಕು.‌ ಹೀಗಾಗಿ ಆರ್.ಎಸ್.ಪಿ.‌ ಕಂಪನಿಗೆ ಮುಂಬೈಗೆ ಭೇಟಿ ನೀಡಿ, ಇಡೀ ಯೋಜನೆಯನ್ನು ಮರುವಿನ್ಯಾಸ ಮಾಡುವಂತೆ ಸೂಚಿಸಲಾಗಿದೆ. ಜತೆಗೆ ದೆಹಲಿಯ ಭಾರತ ಮಂಟಪಂ ಮತ್ತು ಯಶೋಭೂಮಿ ಯೋಜನೆಗಳಲ್ಲಿ ಇರುವ ದೋಷಗಳ‌ ಕಡೆಗೆ ಗಮನ‌ಹರಿಸಿ, ಅದು ಇಲ್ಲಿ ಉಂಟಾಗದಂತೆ ಎಚ್ಚರ ವಹಿಸಲಾಗುವುದು ಎಂದು ಸಚಿವರು ಹೇಳಿದರು.

500 ಕಾರ್ ಪಾರ್ಕಿಂಗ್, ಏನೆಲ್ಲ ನಿರ್ಮಾಣವಾಗಲಿವೆ?

ಈ ಜಾಗದಲ್ಲಿ 2002ರಲ್ಲಿ ಕಟ್ಟಿರುವ ಒಂದು ವಸ್ತು ಪ್ರದರ್ಶನ ಸಭಾಂಗಣ ಮತ್ತು 2024ರಲ್ಲಿ ನಿರ್ಮಿಸಿರುವ ಇನ್ನೊಂದು ವಸ್ತು ಪ್ರದರ್ಶನ ಸಭಾಂಗಣವಿದೆ. ಆದರೆ ಇವು ಇಂದಿನ ಅಗತ್ಯಗಳಿಗೆ ಸಾಲುತ್ತಿಲ್ಲ. ಆದ್ದರಿಂದ ನೆಲಮಹಡಿ ಮತ್ತು ಮೇಲ್ಮಹಡಿಯಲ್ಲಿ ತಲಾ 10 ಸಾವಿರ ಚದರ ಮೀಟರ್ ವಿಸ್ತೀರ್ಣದ (ಒಟ್ಟು 20 ಸಾವಿರ ಚದರ ಮೀಟರ್) ಅತ್ಯಾಧುನಿಕ ವಸ್ತು ಪ್ರದರ್ಶನಾಲಯ ಮತ್ತು ಕನ್ವೆನ್ಷನ್ ಸೆಂಟರ್ ಹಾಗೂ ಸಭಾಂಗಣಗಳನ್ನು ನಿರ್ಮಿಸಲು ಯೋಜಿಸಲಾಗಿದೆ. ಇಲ್ಲಿ 500 ಕಾರುಗಳ ನಿಲುಗಡೆಗೆ ವ್ಯವಸ್ಥೆ ಇರಲಿದೆ.

ಐದು ಎಕರೆ ಜಾಗದಲ್ಲಿ ಮೈದಾಳಲಿರುವ ಉದ್ದೇಶಿತ ಸಭಾಂಗಣದಲ್ಲಿ ಸಮಾವೇಶ, ಉತ್ಪನ್ನಗಳ ಬಿಡುಗಡೆ, ಸಭಾಂಗಣಗಳು, ವಾಣಿಜ್ಯ ಪ್ರದರ್ಶನ, ವ್ಯಾಪಾರ ಸಂಬಂಧಿ ಕಾರ್ಯಕ್ರಮಗಳು, ಮೆಗಾ ಸಂಗೀತ ಕಛೇರಿಗಳಿಗೆ ಅವಕಾಶ ಕೊಡಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

ಸಮಗ್ರ ಅಭಿವೃದ್ಧಿಗೆ ಅಗತ್ಯವಿರುವ ಮಾಸ್ಟರ್ ಪ್ಲ್ಯಾನ್ ಕುರಿತೂ‌ ಚರ್ಚಿಸಲಾಯಿತು. ಜತೆಗೆ ಹಾಲಿ ಇರುವ ಎರಡು ಸಭಾಂಗಣಗಳಲ್ಲಿ ಒಂದು ಹಳೆಯದಾಗಿದೆ. ಇದನ್ನು ಹಾಗೆಯೇ ಉಳಿಸಿಕೊಳ್ಳಬೇಕೇ ಅಥವಾ ಬೇರೇನು ಮಾಡಬೇಕು ಎನ್ನುವ ಚಿಂತನೆಯೂ ಇದೆ. ಒಟ್ಟಿನಲ್ಲಿ ಈ ಸ್ಥಳದಲ್ಲಿ ಜಿಯೋಗಿಂತ ಒಳ್ಳೆಯ ಸೌಕರ್ಯ ಬರಬೇಕು ಎನ್ನುವುದು ಸರಕಾರದ ಬಯಕೆಯಾಗಿದೆ ಎಂದು ಅವರು ನುಡಿದಿದ್ದಾರೆ.

ಇದಲ್ಲದೆ ಕುಂದಲಹಳ್ಳಿ ಮೆಟ್ರೋ ನಿಲ್ದಾಣ ಹಾಗೂ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಇರುವ 14 ಎಕರೆ ಖಾಲಿ ಜಾಗವನ್ನು ಮಾನಿಟೈಸ್ ಮಾಡುವ ಬಗ್ಗೆಯೂ ಚರ್ಚಿಸಲಾಯಿತು. ಈ ಸಂಬಂಧ ಸೂಕ್ತ ಸಲಹೆ ನೀಡಲು ವಹಿವಾಟು ಸಲಹೆಗಾರರನ್ನು ನೇಮಿಸಲು ತೀರ್ಮಾನಿಸಲಾಯಿತು.

ರಾಜ್ಯದಲ್ಲಿ 3600 ಕೋಟಿ ರೂ. ಹೂಡಿಕೆ

ಅಮೆರಿಕಾ ಮೂಲದ ಸೆಮಿಕಂಡಕ್ಟರ್ ಚಿಪ್ ತಯಾರಿಕಾ ಕಂಪನಿ 'ಅಪ್ಲೈಡ್ ಮೆಟೀರಿಯಲ್ಸ್ ಜೊತೆಗೆ ಸರ್ಕಾರ ಒಪ್ಪಂದ ಮಾಡಿಕೊಂಡಿದೆ. ಅದರ ಪ್ರಕಾರ, ಕರ್ನಾಟಕದಲ್ಲಿ ಮುಂದಿನ 10 ವರ್ಷಗಳಲ್ಲಿಈ ಕಂಪನಿಯು 3,600 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲಾಗಿದೆ. ಬೆಂಗಳೂರು ಸಿಗ್ನೇಚರ್ ಬಿಝಿನೆಸ್ ಪಾರ್ಕ್ ಪ್ರದೇಶದಲ್ಲಿ ಅಸ್ತಿತ್ವಕ್ಕೆ ಬರಲಿರುವ ಈ ಯೋಜನೆಯಿಂದ 1,000 ಉದ್ಯೋಗಗಳು ಸೃಷ್ಟಿ ಆಗಲಿವೆ ಎಂದು ಸಚಿವರು ತಿಳಿಸಿದರು.

ಅಪ್ಲೈಡ್ ಮೆಟೀರಿಯಲ್ಸ್ ಕಂಪನಿಯು ಈ ಹೂಡಿಕೆಯ ಮೂಲಕ ಸಂಶೋಧನೆ ಮತ್ತು ಅಭಿವೃದ್ಧಿ, ಅಗತ್ಯ ಸಾಧನಗಳ ತಯಾರಿಕೆ, ಸೆಮಿಕಂಡಕ್ಟರ್ ಚಿಪ್ ಉತ್ಪಾದನೆಗೆ ಬೇಕಾದ ಸಾಫ್ಟ್ ವೇರ್ ತಂತ್ರಜ್ಞಾನ ಅಭಿವೃದ್ಧಿಯತ್ತ ಗಮನ ಕೇಂದ್ರೀಕರಿಸಲಿದೆ. ಕೆಂಪೇಗೌಡ ವಿಮಾನ‌ ನಿಲ್ದಾಣ ಸಮೀಪದ ಬೆಂಗಳೂರು ಸಿಗ್ನೇಚರ್ ಬಿಝಿನೆಸ್ ಪಾರ್ಕ್ ಪ್ರದೇಶದಲ್ಲಿ ಜಾರಿಗೊಳ್ಳುತ್ತಿರುವ ಇಂತಹ ಪ್ರಪ್ರಥಮ ಕೈಗಾರಿಕಾ ಯೋಜನೆ ಇದಾಗಿದೆ. ಮೆಟೀರಿಯಲ್ಸ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿರುವ ಕಂಪನಿಯ ಈ ಹೂಡಿಕೆಯಿಂದ ಈ ವಲಯಕ್ಕೆ ಬೇಕಾದ ಕಾರ್ಯಪರಿಸರ ಸಶಕ್ತವಾಗಲಿದೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+