ಮತದಾನದ ದಿನ ಸುಲಿಗೆಗಿಳಿದ ಕೆಎಸ್ಸಾರ್ಟಿಸಿ !
ಬೆಂಗಳೂರು, ಏ.16: ಎಸ್ಮಾ ಸೇವಾ ಕಾಯಿದೆಗೊಳಪಡುವ ಕೆಎಸ್ಸಾರ್ಟಿಸಿ ಮತ್ತು ಬಿಎಂಟಿಸಿ ಎಂಬ ಸರಕಾರಿ ಸಂಸ್ಥೆಗಳು, ಸೇವೆಯನ್ನು ನಡುದಾರಿಯಲ್ಲೇ ಬಿಟ್ಟು ಲಾಭಕೋರ ಸಂಸ್ಥೆಯಾಗಿ ಪರಿವರ್ತನೆಗೊಂಡು ಯಾವುದೋ ಕಾಲವಾಗಿದೆ. ಲಾಭ ಮಾಡುವ ಭರದಲ್ಲಿ ಖಾಸಗಿ ಬಸ್ ಸಂಸ್ಥೆಗಳನ್ನೂ ಹಿಂದಿಕ್ಕಿವೆ.
ಹಬ್ಬ ಹರಿದಿನಗಳು, ರಜಾ ದಿನಗಳು ಬಂದರೆ ಸಾಕು ಈ ಎರಡೂ ಸರಕಾರಿ ಸಂಸ್ಥೆಗಳು ರೊಕ್ಕ ಮಾಡುವ ಏಜೆಂಟುಗಳಾಗಿ ಬಿಡುತ್ತವೆ. ಆದರೆ ಇದೇನಿದು, ಮತದಾನದ ದಿನವೂ ಕೆಎಸ್ಸಾರ್ಟಿಸಿ ದುಡ್ಡು ಮಾಡಲು ಮುಂದಾಗಿದೆ.
ಈ ವಿಷಯದಲ್ಲಿ ಕೆಎಸ್ಸಾರ್ಟಿಸಿ ಎಷ್ಟು ಪ್ಲಾನ್ ಮಾಡಿದೆ ಅಂದರೆ 'ಮತದಾನಕ್ಕೆಂದು ಬೇರೆ ಬೇರೆ ಊರುಗಳಲ್ಲಿರುವ ಜನ ತಮ್ಮ ಸ್ವಂತ ಸ್ಥಳಗಳಿಗೆ ತೆರಳುತ್ತಾರೆ. ಅದೇ ಸುಸಮಯವೆಂದು ಬಸ್ ಪ್ರಯಾಣದ ದರ ಹೆಚ್ಚಿಸಿದರೆ ಸಂಸ್ಥೆಯ ಲಾಭ ಏರುತ್ತದೆ' ಎಂದು ಊರಿಗೆ ಮುಂಚೆ ಲೆಕ್ಕ ಹಾಕಿದ ಸಂಸ್ಥೆ ಅದರಂತೆ ದುಡ್ಡು ಮಾಡಿಕೊಳ್ಳುತ್ತಿದೆ.

ಇದರಿಂದ ಮತ ಚಲಾಯಿಸಲು ತಮ್ಮೂರಿಗೆ ಹೋಗುವ ಮತದಾರರ ಉತ್ಸಾಹವನ್ನು ಕುಗ್ಗಿಸಿದಂತಾಗುವುದಿಲ್ಲವೇ? ಆಕ್ಚುಯಲಿ, ಮತ ಚಲಾಯಿಸುವವರನ್ನು ಪ್ರೋತ್ಸಾಹಿಸಬೇಕು. ಆದರೆ ಇಲ್ಲಿ ದುಡ್ಡು ಮಾಡುವುದೇ ದಂಧೆಯಾಗಿ ಸೇವೆ ಗೌಣವಾಗಿದೆ ಎಂದು ಯುವ ಮತದಾರರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತೊಂದು ಸಂಕಷ್ಟವೆಂದರೆ ದುಡ್ಡು ಕೊಟ್ಟರೂ ಕೆಎಸ್ಸಾರ್ಟಿಸಿ ಬಸ್ಸುಗಳು ಸಕಾಲಕ್ಕೆ ಸಿಗುವ ಗ್ಯಾರಂಟಿಯೂ ಇಲ್ಲ. ಏಕೆಂದರೆ ಸಂಸ್ಥೆಯು 3,169 ಬಸ್ಸುಗಳನ್ನು ಚುನಾವಣೆ ಕಾರ್ಯಕ್ಕೆ ನೀಡಿ, ಧನ್ಯೋಸ್ಮಿ ಎಂದಿದೆ. ಮುಂಗಡ ಬುಕ್ಕಿಂಗ್ ಮಾಡಿಸಲು ನಿನ್ನೆ ಮೆಜಿಸ್ಟಿಕ್ ನಲ್ಲಿ ಸಂಸ್ಥೆಯ ಬುಕ್ಕಿಂಗ್ ಕೌಂಟರಿಗೆ ಎಡತಾಕಿದಾಗ ಪ್ರಯಾಣಿಕರಿಗೆ ಈ ದಿಢೀರ್ ಬಸ್ ದರ ಏರಿಕೆ ಬಿಸಿ ತಾಕಿದೆ.












Click it and Unblock the Notifications