KSRTC: ಸಿಹಿ ಸುದ್ದಿ! ಅವಳಿ ಜಿಲ್ಲೆಗಳ ಮಧ್ಯೆ 10 ನಾನ್ ಸ್ಟಾಪ್ ಬಸ್ ಸೇವೆ
ಮೈಸೂರು, ಫೆಬ್ರವರಿ 23: ಹೊಸ ಹೊಸ ಬಸ್ ಪರಿಚಯಿಸುತ್ತಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC)ಯು ಹಳೇಯ ಮಾರ್ಗಗಳಲ್ಲಿ ತಡೆರಹಿತ ಬಸ್ ಗಳ ಪ್ರಮಾಣವನ್ನು ಹೆಚ್ಚಿಸಲು ಮುಂದಾಗಿದೆ. ಅವಳ ಜಿಲ್ಲೆಗಳ ಮಧ್ಯೆ 10ಕ್ಕೂ ಹೆಚ್ಚು ನಾನ್ ಸ್ಟಾಪ್ ಬಸ್ ಸೇವೆ ಆರಂಭಿಸುವುದಾಗಿ ತಿಳಿಸಿದೆ. ಶಕ್ತಿ ಯೋಜನೆ ಬಳಿಕ ತಡೆರಹಿತ ಬಸ್‌ಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ.
ಮೈಸೂರು ಸುತ್ತಮುತ್ತ ತಡೆರಹಿತ ಬಸ್ ಸೇವೆಗಳ ಯಶಸ್ಸು ಕಂಡಿದೆ. ಇದನ್ನು ಮತ್ತಷ್ಟು ಪ್ರೋತ್ಸಾಹಿಸಲು ಮುಂದಾಗಿರುವ ನಿಗಮವು ಹೊಸದಾಗಿ 10ಕ್ಕೂ ಹೆಚ್ಚು ತಡೆರಹಿತ ಬಸ್ ಓಡಿಸಲು ಮುಂದಾಗಿದೆ. ಇದರಿಂದ ಈಗಾಗಲೇ ಇರುವ ಬಸ್‌ಗಳ ಸಂಖ್ಯೆ ಹೆಚ್ಚಾಗಿದೆ. ಚಾಮರಾಜನಗರವು ನಿಯಮಿತ ಅಶ್ವಮೇಧ ಸೇವೆ ನೀಡುತ್ತಿದೆ. ಇದರೊಂದಿಗೆ ಹತ್ತು ಹೆಚ್ಚುವರಿ ಬಸ್‌ಗಳನ್ನು ಮೈಸೂರು ಮಧ್ಯೆ ಪರಿಚಯಿಸಿದೆ ಎಂದು TOI ವರದಿ ಮಾಡಿದೆ.

ಈ ಭಾಗದಲ್ಲಿ ರೈಲು ಸಾರಿಗೆಯು ಲಭ್ಯವಿದೆ. ಅದರ ಅನಾನುಕೂಲ ಹಿನ್ನೆಲೆಯಲ್ಲಿ ಪ್ರಯಾಣಿಕರು ಹೆಚ್ಚಾಗಿ ಬಸ್‌ಗಳನ್ನು ಅವಲಂಬಿಸಿದ್ದಾರೆ. ಸುಮಾರು 27 ವರ್ಷಗಳ ಹಿಂದೆ ಮೈಸೂರು ಜಿಲ್ಲೆಯಿಂದ ಚಾಮರಾಜನಗರ ವಿಭಜಿಸಿ ಹೊಸ ಜಿಲ್ಲೆಯಾಗಿ ಮಾಡಲಾಯಿತು. ಗಡಿ ಜಿಲ್ಲೆಯ ಜನರು ಅರಮನೆ ನಗರಿ, ಬೆಳೆಯುತ್ತಿರುವ ಮೈಸೂರಿನೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ.
KSRTC ಮೂಲಗಳು ಹೇಳುವಂತೆ ಈ ಅವಳಿ ಜಿಲ್ಲೆಗಳಾದ ಮೈಸೂರು ಮತ್ತು ಚಾಮರಾಜನಗರ ಮಧ್ಯೆ ನಿತ್ಯ 7,000 ಜನರು ಸಾರ್ವಜನಿಕ ಸಾರಿಗೆಯಲ್ಲಿ ಓಡಾಡುತ್ತಾರೆ. ಇದು ನಿಗಮಕ್ಕೆ ಲಾಭ ತಂದುಕೊಂಡುತ್ತಿದೆ. ಉದ್ಯೋಗಕ್ಕಾಗಿ ಮೈಸೂರು ನಗರ ವ್ಯಾಪ್ತಿಯಲ್ಲಿನ ಕೈಗಾರಿಕೆಗಳು, ವಿದ್ಯಾಭ್ಯಾಸಕ್ಕಾಗಿ ಶೈಕ್ಷಣಿಕ ಸಂಸ್ಥೆಗಳನ್ನು ಜಿಲ್ಲೆಗಳ ಜನರು ಅವಲಂಬಿಸಿದ್ದಾರೆ. ಹೀಗಾಗಿ ಮೈಸೂರು-ಚಾಮರಾಜನಗರ ಮಧ್ಯ ನಿತ್ಯವು ಜನ ಸಂಚಾರ ಕಂಡು ಬರುತ್ತದೆ.
ಮೈಸೂರು ಪ್ರವಾಸಿ ತಾಣವಾಗಿ ಮಾತ್ರವಲ್ಲದೇ ಶಿಕ್ಷಣ ಕೇಂದ್ರವಾಗಿ ಹೊರಹೊಮ್ಮಿದೆ. ಮೈಸೂರು ಸುತ್ತಮುತ್ತ ರಿಯಲ್ ಎಸ್ಟೇಟ್, ರೆಸಾರ್ಟ್, ಪ್ರವಾಸೋದ್ಯಮ ಮತ್ತು ಇತರ ಹಲವಾರು ಉದಯೋನ್ಮುಖ ವಲಯಗಳು ಬೆಳವಣಿಗೆ ಕಂಡವು. ಅಲ್ಲದೇ, ಚಾಮರಾಜನಗರ ವ್ಯಾಪ್ತಿಯ ಮಲೆ ಮಹಾದೇಶ್ವರ ಬೆಟ್ಟ, ಹಿಮವದ್ ಗೋಪಾಲಯ್ಯಸ್ವಾಮಿ ದೇವಸ್ಥಾನ, ಬಿಳಿಗಿರಿ ರಂಗನಬೆಟ್ಟದಂತಹ ಯಾತ್ರಾ ಸ್ಥಳಗಳಿಗೆ ನಿತ್ಯ ಬೇರೆ ಬೇರೆ ಕಡೆಯಿಂದ ಸಾಕಷ್ಟು ಪ್ರಮಾಣದಲ್ಲಿ ಜನರು ಆಗಮಿಸುತ್ತಾರೆ.
ಈ ಯಾತ್ರಾ ಸ್ಥಳಗಳಲ್ಲಿ ಶಕ್ತಿ ಯೋಜನೆ ಜಾರಿ ಬಳಿಕ ಬರುವ ಮಹಿಳೆಯರು, ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಈ ಮೇಲಿನ ಎಲ್ಲ ಕಾರಣಗಳಿಂದ ಅವಳಿ ಜಿಲ್ಲೆಗಳ ಜನರಿಗೆ ಅನುಕೂಲವಾಗಲು, ಹತ್ತಕ್ಕೂ ಹೆಚ್ಚು ತಡೆರಹಿತ ಬಸ್‌ಗಳಲ್ಲಿ ಓಡಿಸಲಾಗುತ್ತಿದೆ ಎಂದು ವರದಿ ಆಗಿದೆ.
ಜನರಿಗೆ ತಡೆರಹಿತ ಬಸ್‌ಗಳನ್ನು ಓಡಿಸುವುದಕ್ಕೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿತ್ತು. ಅವರ ಬೇಡಿಕೆಯಂತೆ ಚಾಮರಾಜನಗರದಿಂದ ಮೈಸೂರಿಗೆ ಹೆಚ್ಚುವರಿಯಾಗಿ 10 ತಡೆರಹಿತ ಬಸ್‌ಗಳನ್ನು ಓಡಿಸಲಾಗುತ್ತಿದೆ. ಆದಾಯವು ಹೆಚ್ಚಾಗುವ ನಿರೀಕ್ಷೆ ಇದೆ. ಉತ್ತಮ ಸೇವೆ ಪ್ರಯಾಣಿಕರಿಗೆ ಲಭ್ಯವಾಗುತ್ತದೆ ಎಂದು KSRTC ವಿಭಾಗೀಯ ನಿಯಂತ್ರಕ ಅಶೋಕ್ ಮಾಹಿತಿ ಹಂಚಿಕೊಂಡಿದ್ದಾರೆ.












Click it and Unblock the Notifications