ಬೆಂಗಳೂರು-ಧಾರವಾಡ ಸೂಪರ್ ಫಾಸ್ಟ್ ಇಂಟರ್ ಸಿಟಿ ರೈಲು ರದ್ದು
ಬೆಂಗಳೂರು, ಜನವರಿ 04; ಭಾರತೀಯ ರೈಲ್ವೆ ಕೆಎಸ್‌ಆರ್ ಬೆಂಗಳೂರು - ಧಾರವಾಡ ಸೂಪರ್ ಫಾಸ್ಟ್ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲಿನ ಸಂಚಾರವನ್ನು ರದ್ದುಗೊಳಿಸಿದೆ. ಕೆಲವು ದಿನಗಳು ಮಾತ್ರ ರೈಲು ಸಂಚಾರ ರದ್ದಾಗಿದೆ.
ನೈಋತ್ಯ ರೈಲ್ವೆ ಈ ಕುರಿತು ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ಬೆಂಗಳೂರಿನಿಂದ ಜನವರಿ 3, 8, 11,17 ಮತ್ತು 22ರಂದು ರೈಲು ಸಂಚಾರ ನಡೆಸುವುದಿಲ್ಲ. ಧಾರವಾಡದಿಂದ ಜನವರಿ 4, 9, 12, 18, ಮತ್ತು 23ರಂದು ರೈಲು ಸಂಚಾರ ನಡೆಸುವುದಿಲ್ಲ.
ಹೊಸಪೇಟೆ-ಕೆಎಸ್ಆರ್ ಬೆಂಗಳೂರು ಪ್ಯಾಸೆಂಜರ್ ವಿಶೇಷ ಎಕ್ಸ್‌ಪ್ರೆಸ್ ರೈಲಿನ ಸಂಚಾರವನ್ನು ಜನವರಿ 3 ಮತ್ತು 11ರಂದು ರದ್ದುಗೊಳಿಸಲಾಗಿದೆ. ಕೆಎಸ್‌ಆರ್ ಬೆಂಗಳೂರು-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿನ ಸಂಚಾರವನ್ನು ಜನವರಿ 3 ಹಾಗೂ 11ರಂದು ರದ್ದುಗೊಳಿಸಲಾಗಿದೆ.

ನೈಋತ್ಯ ರೈಲ್ವೆ ಸ್ಪಷ್ಟನೆ; ಜನವರಿ 4ರಿಂದ ಸೇವೆಯ ರದ್ದತಿ ಎಂದು ಸೂಚಿಸಲಾಗಿದ್ದ ರೈಲು ಸಂಖ್ಯೆ 12726 ಧಾರವಾಡ-ಕೆಎಸ್ಆರ್ ಬೆಂಗಳೂರು ಸೂಪರ್ ಫಾಸ್ಟ್ ಇಂಟರ್ ಸಿಟಿ ರೈಲು ಎಂದಿನಂತೆ ಸಂಚಾರ ನಡೆಸಲಿದೆ ಎಂದು ನೈಋತ್ಯ ರೈಲ್ವೆ ಹೇಳಿದೆ.
ವೇಳಾಪಟ್ಟಿ ಬದಲಾವಣೆಗೆ ಆಗ್ರಹ; ವಿಜಯಪುರ-ಮಂಗಳೂರು ರೈಲಿನ ವೇಳಾಪಟ್ಟಿಯನ್ನು ಬದಲಾವಣೆ ಮಾಡಬೇಕು ಎಂಬ ಆಗ್ರಹ ಹೆಚ್ಚಾಗಿದೆ. 2019ರಲ್ಲಿ ಈ ರೈಲು ಸೇವೆ ಆರಂಭಗೊಂಡಿದೆ.
ಉತ್ತರ ಕರ್ನಾಟಕ-ಕರಾವಳಿ ಸಂಪರ್ಕಿಸುವ ಪ್ರಮುಖ ರೈಲು ಇದಾಗಿದ್ದು, ರೈಲಿನ ವೇಳಾಪಟ್ಟಿ ಬದಲಾಯಿಸಬೇಕು ಎಂಬ ಆಗ್ರಹ ಮೊದಲಿನಿಂದಲೂ ಕೇಳಿ ಬಂದಿತ್ತು. ರೈಲ್ವೆ ಇಲಾಖೆಗೆ ಈ ಕುರಿತು ಮನವಿ ಸಹ ಸಲ್ಲಿಕೆಯಾಗಿತ್ತು.
ಪ್ರತಿದಿನ ಸಂಜೆ 6.30ಕ್ಕೆ ವಿಜಯಪುರದಿಂದ ಹೊರಡುವ ರೈಲು ಮಂಗಳೂರು ಜಂಕ್ಷನ್‌ಗೆ ಮರುದಿನ ಬೆಳಗ್ಗೆ 12.40ಕ್ಕೆ ತಲುಪುತ್ತದೆ. ಈ ವೇಳಾಪಟ್ಟಿ ಪ್ರಯಾಣಿಕ ಸ್ನೇಹಿಯಾಗಿಲ್ಲ ಎಂಬುದು ಪ್ರಯಾಣಿಕರ ಆರೋಪ.
ವಿಜಯಪುರದಿಂದ ಹೊರಡುವ ರೈಲು ಬಸವನಬಾಗೇವಾಡಿ, ಆಲಮಟ್ಟಿ, ಬಾಗಲಕೋಟೆ, ಬಾದಾಮಿ, ಹೊಳೆ ಆಲೂರು, ಗದಗ, ಹುಬ್ಬಳ್ಳಿ, ಹಾವೇರಿ, ರಾಣೆಬೆನ್ನೂರು, ಹರಿಹರ, ದಾವಣಗೆರೆ, ಕಡೂರು, ಅರಸೀಕೆರೆ, ಹಾಸನ, ಸಕಲೇಶಪುರ, ಸುಬ್ರಮಣ್ಯ, ಪುತ್ತೂರು, ಬಂಟ್ವಾಳ ಮೂಲಕ ಮಂಗಳೂರು ಜಂಕ್ಷನ್ ತಲುಪಲಿದೆ.
Recommended Video
ಬದಲಾವಣೆಗೆ ಏಕೆ?; ರೈಲು ಮಂಗಳೂರು ಜಂಕ್ಷನ್‌ಗೆ ಬೆಳಗ್ಗೆ ತಪುಪಬೇಕು. ಮಧ್ಯಾಹ್ನ ತಲುಪಿದರೆ ಜನರಿಗೆ ಉಪಯೋಗವಾಗುವುದಿಲ್ಲ. ಬೆಳಗ್ಗೆ 7 ಅಥವ 8 ಗಂಟೆಗೆ ರೈಲು ಮಂಗಳೂರು ತಲುಪುವಂತೆ ಮಾಡಬೇಕು ಎಂಬುದು ಪ್ರಯಾಣಿಕರ ಆಗ್ರಹವಾಗಿದೆ.
ಉತ್ತರ ಕರ್ನಾಟಕ-ಕರಾವಳಿ ಸಂಪರ್ಕಿಸುವ ರೈಲಿನಲ್ಲಿ ಅನೇಕ ಜನರು ದೇವಾಲಯ, ವಿದ್ಯಾಸಂಸ್ಥೆಗಳಿಗಾಗಿ ಕರಾವಳಿಗೆ ಭೇಟಿ ನೀಡುತ್ತಾರೆ. ದಾವಣಗೆರೆಯಿಂದ ಕರಾವಳಿಗೆ ಸಂಚಾರ ನಡೆಸುವ ಜನರಿಗೆ ಉಪಯೋಗವಾಗುವಂತೆ ಮಧ್ಯಾಹ್ನ ವಿಜಯಪುರದಿಂದ ರೈಲು ಹೊರಟು ಮಂಗಳೂರಿಗೆ ಬೆಳಗ್ಗೆ ತಲುಪುವಂತೆ ಮಾಡಬೇಕು ಎಂದು ಒತ್ತಾಯಿಸಲಾಗಿದೆ.
ಈ ರೈಲು ಸೇವೆಯನ್ನು ಉಡುಪಿ ತನಕ ವಿಸ್ತರಣೆ ಮಾಡಿದರೆ ಮಣಿಪಾಲದಲ್ಲಿ ವ್ಯಾಸಂಗ ಮಾಡುವ, ಆಸ್ಪತ್ರೆಗೆ ಹೋಗುವ ಜನರಿಗೆ ಸಹ ಅನುಕೂಲವಾಗಲಿದೆ ಎಂಬ ಬೇಡಿಕೆಯೂ ಇದೆ. ರೈಲು ಮಂಗಳೂರಿನಿಂದ ಹೊರಡುವ ಸಮಯವನ್ನು ಸಹ ಪರಿಷ್ಕರಣೆ ಮಾಡಬೇಕು ಎಂಬ ಒತ್ತಾಯವಿದೆ. ಆದರೆ ಇಲಾಖೆ ಇನ್ನೂ ಈ ಕುರಿತು ಯಾವುದೇ ತೀರ್ಮಾನ ಕೈಗೊಂಡಿಲ್ಲ.
ಈ ರೈಲು 5 ಜನರಲ್ ಸೆಕೆಂಡ್ ಕ್ಲಾಸ್, 6 ಸೆಕೆಂಡ್ ಕ್ಲಾಸ್ ಸ್ಲಿಪರ್, 1 ಎಸಿ 3 ಟೈರ್ ಮತ್ತು 1 ಲಗೇಜ್ ಕಮ್ ಬ್ರೇಕ್ ವ್ಯಾನ್ ಸೇರಿದಂತೆ 14 ಬೋಗಿಗಳನ್ನು ಒಳಗೊಂಡಿದೆ. ಪ್ರತಿದಿನ ಈ ರೈಲು ವಿಜಯಪುರ ಮತ್ತು ಮಂಗಳೂರು ಜಂಕ್ಷನ್ ನಡುವೆ ಸಂಚಾರ ನಡೆಸುತ್ತದೆ.
ರೈಲ್ವೆ ಇಲಾಖೆ ಪ್ರಯಾಣಿಕರ ಒತ್ತಾಯಕ್ಕೆ ಮಣಿದು ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಲಿದೆಯೇ? ಎಂದು ಕಾದು ನೋಡಬೇಕು. ಇನ್ನು ರೈಲನ್ನು ಉಡುಪಿ ತನಕ ವಿಸ್ತರಣೆ ಮಾಡುವ ಬೇಡಿಕೆ ಸದ್ಯಕ್ಕೆ ಈಡೇರುವ ಸಾಧ್ಯತೆ ಕಡಿಮೆ ಇದೆ.












Click it and Unblock the Notifications