KSDL: ಕರ್ನಾಟಕದ ಸಾಬೂನು, ಮಾರ್ಜಕಗಳಿಗೆ ಭಾರೀ ಬೇಡಿಕೆ, ಒಂದೇ ತಿಂಗಳಲ್ಲಿ ದಾಖಲೆಯ ಮಾರಾಟ
ಬೆಂಗಳೂರು, ಜೂನ್ 03: ಕರ್ನಾಟಕ ಸರ್ಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತವು (KSDL) ಮೇ ತಿಂಗಳಲ್ಲಿ ₹186 ಕೋಟಿ ಮೌಲ್ಯದ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಸಾರ್ವಕಾಲಿಕ ದಾಖಲೆ ಸ್ಥಾಪಿಸಿದೆ. ಉದ್ಯಮದ 108 ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಕೇವಲ ಒಂದು ತಿಂಗಳಲ್ಲಿ ಇಂಥದ್ದೊಂದು ಸಾಧನೆ ಮಾಡಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ ಮಂಗಳವಾರ ಹೇಳಿದ್ದಾರೆ.
KSDL ಸಂಸ್ಥೆಗೆ ಮೇ ನಲ್ಲಿ 151.50 ಕೋಟಿ ರೂ. ವಹಿವಾಟಿನ ಗುರಿ ಸೂಚಿಸಲಾಗಿತ್ತು. ಆದರೆ, ಈಗ ಇದಕ್ಕಿಂತ ₹35 ಕೋಟಿ ಹೆಚ್ಚಿನ ವಹಿವಾಟು ನಡೆಸಿದ್ದು, ಶೇಕಡ 125ರಷ್ಟು ಸಾಧನೆ ಮತ್ತು ಶೇಕಡ 15ರಷ್ಟು ಪ್ರಗತಿ ಸಾಧಿಸಿದೆ. ಈ ವಹೀವಾಟಿನಿಂದ ಪೈಕಿ ರಫ್ತಿನ ಮೂಲಕ 1.81 ಕೋಟಿ ರೂಪಾಯಿ ಗಳಿಕೆ ಆಗಿದೆ. ಮುಂದಿನ ದಿನಗಳಲ್ಲಿ ಈ ರಫ್ತು ವಹೀವಾಟನ್ನು ವರ್ಷಕ್ಕೆ 150 ಕೋಟಿ ರೂ.ಗೆ ತಲುಪಿಸುವ ಉದ್ದೇಶ ಹೊಂದಿದ್ದೇವೆ.

KSDL ತಯಾರಿಸುವ ಮೈಸೂರು ಸ್ಯಾಂಡಲ್ ಸೋಪ್ ಸೇರಿದಂತೆ ಇತರ ಎಲ್ಲ ವಿವಿಧ 45 ಉತ್ಪನ್ನಗಳು ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬಯಿ, ಕೋಲ್ಕತ್ತ, ನವದೆಹಲಿ ಶಾಖೆಗಳಲ್ಲಿ ಮತ್ತು ಬೆಂಗಳೂರಿನ ನೇರ ಮಾರುಕಟ್ಟೆ ವಿಭಾಗದ ಮೂಲಕ ನಿರೀಕ್ಷೆಗೂ ಮೀರಿ ಮಾರಾಟ ಆಗುತ್ತಿದೆ. ಸಾಬೂನು, ಶವರ್ ಜೆಲ್, ಅಗರಬತ್ತಿ ಮುಂತಾದ KSDL ಉತ್ಪದನ್ನಗಳಿಗೆ ಇನ್ನಿಲ್ಲದಂತೆ ಬೇಡಿಕೆ ಸೃಷ್ಟಿಯಾಗಿದೆ. ಸಂಸ್ಥೆಯಲ್ಲಿ ಗುಣಮಟ್ಟದ ಉತ್ಪಾದನೆ, ಬ್ರ್ಯಾಂಡಿಂಗ್ ಮತ್ತು ಮಾರುಕಟ್ಟೆ ವಿಸ್ತರಣೆಗೆ ಕೈಗೊಂಡಿರುವ ಪ್ರಯತ್ನಗಳ ಫಲವಾಗಿ ಇಷ್ಟೆಲ್ಲ ಬೇಡಿಕೆ ಸೃಷ್ಟಿಯಾಗುತ್ತಿದೆ. ದಾಖಲೆ ಬರೆಯಲಾಗಿದೆ.
ಹೊರ ರಾಜ್ಯಗಳಲ್ಲಿ KSDL ಉತ್ಪನ್ನಗಳಿಗೆ ಭಾರೀ ಬೇಡಿಕೆ
ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲೇ ಅತಿ ಹೆಚ್ಚು ₹85 ಕೋಟಿ ವಹಿವಾಟು ನಡೆದಿದೆ. ಉಳಿದ ₹100 ಕೋಟಿ ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಲ್ಲಿ ಎಂದು ಸಚಿವರು ವಿವರಿಸಿದರು. ಈ ಹಿಂದೆ 2024ರ ಸೆಪ್ಟೆಂಬರ್ ತಿಂಗಳೊಂದರಲ್ಲೇ 178 ಕೋಟಿ ರೂ. ಮೌಲ್ಯದ ಉತ್ಪನ್ನಗಳನ್ನು ಮಾರಾಟ ಮಾಡಲಾಗಿತ್ತು. ಅದೇ ಈವರೆಗಿನ ದಾಖಲೆ ಆಗಿತ್ತು. ಈಗ ಇದನ್ನು ದಾಟಲಾಗಿದೆ. ಸಾಮಾನ್ಯವಾಗಿ ಕೆಎಸ್ಡಿಎಲ್ ಪ್ರತೀ ತಿಂಗಳೂ ಸರಾಸರಿ ₹135 ಕೋಟಿಗಳಿಂದ ₹140 ಕೋಟಿವರೆಗೂ ಉತ್ಪನ್ನಗಳ ಮಾರಾಟದ ವಹಿವಾಟು ದಾಖಲಿಸಿದೆ ಎಂದರು.
ಶೀಘ್ರವೇ ಸುಗಂಧದ್ರವ್ಯ ಮಾರುಕಟ್ಟೆಗೆ
ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತದ (KSDL) ಕಾರ್ಯವಿಧಾನವನ್ನು ಕಳೆದ ಎರಡು ವರ್ಷಗಳಲ್ಲಿ ಹೆಚ್ಚು ದಕ್ಷಗೊಳಿಸಲಾಗಿದೆ. ಈ ಅವಧಿಯಲ್ಲಿ ಯಾವೊಂದು ಹೊಸ ಉಪಕರಣಗಳನ್ನು ಖರೀದಿ ಮಾಡಿಲ್ಲ. ಶೀಘ್ರವೇ ಸಂಸ್ಥೆಯ ವತಿಯಿಂದ ಸುಗಂಧದ್ರವ್ಯಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಕೆಎಸ್ ಡಿಎಲ್ ಅಧ್ಯಕ್ಷ ಸಿ.ಎಸ್.ನಾಡಗೌಡ ಮಾಹಿತಿ ನೀಡಿದರು.












Click it and Unblock the Notifications