ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಿಂದಿ ಭಾಷೆ ಹೇರಿಕೆ ಸಾಮಾಜಿಕ ಪಿಡುಗು ಆಗುತ್ತಿದೆ: ಕರವೇ ನಾರಾಯಣ ಗೌಡ ಕಿಡಿ

|
Google Oneindia Kannada News

ಬೆಂಗಳೂರು, ಏಪ್ರಿಲ್ 28 : ಹಿಂದಿ ರಾಷ್ಟ್ರೀಯ ಭಾಷೆ ಎಂದು ಹೇಳಿಕೆ ನೀಡಿದ್ದ ಬಾಲಿವುಡ್ ನಟ ಅಜಯ್ ದೇವಗನ್ ವಿರುದ್ದ ವ್ಯಾಪಕ ಟೀಕೆ, ಖಂಡನೆ ವ್ಯಕ್ತವಾಗುತ್ತಿದೆ. ರಾಜಕೀಯ ನಾಯಕರು, ಸಿನಿಮಾ ನಟರು ಹಾಗೂ ಸಾಮಾನ್ಯ ಜನರು ಸಹ ಈ ಹೇಳಿಕೆ ವಿರುದ್ದ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಈಗ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ ನಾರಯಣಗೌಡ ಸಹ ಟ್ವೀಟರ್‌ನಲ್ಲಿ ಸರಣಿ ಟ್ವೀಟ್‌ ಮಾಡುವ ಮೂಲಕ ಹಿಂದಿ ಭಾಷೆ ಹೇರಿಕೆ ವಿರುದ್ದ ಕಿಡಿಕಾರಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, " ಸಂವಿಧಾನದಲ್ಲಿ ಹಿಂದಿ ಭಾಷೆಗೆ ನೀಡಿರುವ ಹೆಚ್ಚುಗಾರಿಕೆಯಿಂದಲೇ ಕೆಲವು ಹಿಂದಿ ಭಾಷಿಕರು ಹಿಂದಿಯೇತರ ಭಾಷಿಕರ ಮೇಲೆ ಯಜಮಾನಿಕೆ ತೋರುತ್ತಾರೆ. ಹಿಂದಿ ಚಿತ್ರನಟ ಅಜಯ್ ದೇವಗನ್ ಅವರ ಹೇಳಿಕೆ ಹಿಂದಿ ಪಟ್ಟಭದ್ರರ ಯಜಮಾನಿಕೆಯ ಪ್ರದರ್ಶನ. ಹಿಂದಿಗೆ ಪ್ರಾಮುಖ್ಯತೆ ನೀಡುವ ಅಂಶಗಳನ್ನು ಸಂವಿಧಾನದಿಂದ ಕೈಬಿಡದ ಹೊರತು ಈ ಯಜಮಾನಿಕೆ ಪ್ರದರ್ಶನ ನಿಲ್ಲುವುದಿಲ್ಲ" ಎಂದಿದ್ದಾರೆ.

ಮತ್ತೊಂದು ಟ್ವೀಟ್ ನಲ್ಲಿ "ಆಡಳಿತ, ವ್ಯವಹಾರ, ಉದ್ಯೋಗ, ಸಿನೆಮಾ ಹೀಗೆ ಭಾರತದಲ್ಲಿ ಎಲ್ಲೆಡೆ ತಮಗೆ ಬೇರೆಯವರಿಗಿಂದ ಹೆಚ್ಚು ಪ್ರಾಮುಖ್ಯತೆ ಸಿಗಬೇಕೆಂದು ಕೆಲವು ಹಿಂದಿ ಭಾಷಿಕರು ಅಪೇಕ್ಷಿಸುತ್ತಾರೆ, ಅವರ ಅಪೇಕ್ಷೆಯಂತೆ 70 ವರ್ಷದಿಂದಲೂ ಭಾರತ ಸರ್ಕಾರ ನಡೆದುಕೊಂಡು ಬಂದಿದೆ. ಇವರು ಭಾಷಾ ಹೇರಿಕೆ ಮಾಡುತ್ತಾ ಅಸಮಾನ ಭಾರತವನ್ನು ಸೃಷ್ಟಿಸಿದ್ದಾರೆ," ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

KRV President TA Narayan Gowda Angry on Hindi National Language Controversy

"ಭಾರತದ ಎಲ್ಲಾ ಭಾಷೆಗಳನ್ನು ಸಮಾನವಾಗಿ ಕಾಣಬೇಕು. ಹಿಂದಿಗಿರುವ ಹೆಚ್ಚುಗಾರಿಕೆ ಕನ್ನಡಕ್ಕೂ ಸಿಗಬೇಕು ಎಂದು ಕರವೇ 15 ವರ್ಷಕ್ಕೂ ಹೆಚ್ಚು ಕಾಲದಿಂದ ಹೋರಾಟ ನಡೆಸಿಕೊಂಡು ಬಂದಿದೆ. ಮುಂದೆಯೂ ಹೋರಾಟವನ್ನು ನಡೆಸುತ್ತದೆ. ಭಾರತ ಒಕ್ಕೂಟದಲ್ಲಿ ಕನ್ನಡಕ್ಕೆ ಹಿಂದಿಯಷ್ಟೆ ಪ್ರಾಮುಖ್ಯತೆ ಸಿಗಬೇಕು ಹೋರಾಟದ ಮೂಲ ಉದ್ದೇಶ," ಎಂದು ತಿಳಿಸಿದ್ದಾರೆ.

"ಹಿಂದಿ ಹೇರಿಕೆ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಎರಡು ದಶಕಗಳ ಹಿಂದೆ ಹೋರಾಟ ಆರಂಭಿಸಿದಾಗ, ಹಿಂದಿ ಇದ್ದರೆ ಏನು ತಪ್ಪು ಎನ್ನುತ್ತಿದ್ದರು. ಈಗ ಎಲ್ಲರಿಗೂ ಹಿಂದಿ ಸಾಮ್ರಾಜ್ಯಶಾಹಿಯ ಸ್ವರೂಪ ಏನೆಂಬುದು ಅರ್ಥವಾಗಿದೆ. ಹಿಂದಿ ಹೇರಿಕೆ ಈಗ ಕೇವಲ ಸರ್ಕಾರದ ಕೆಟ್ಟನೀತಿ ಮಾತ್ರವಲ್ಲ, ಸಾಮಾಜಿಕ ಪಿಡುಗಾಗಿ ಬದಲಾಗಿದೆ," ಎಂದಿದ್ದಾರೆ.

"ಕರ್ನಾಟಕದಲ್ಲಿ ಡಬ್ಬಿಂಗ್ ಸಿನಿಮಾ ಆರಂಭವಾದ ನಂತರವೂ ಹಿಂದಿ ಚಿತ್ರ ನಿರ್ಮಾಪಕರು, ವಿತರಕರು ಕನ್ನಡಕ್ಕೆ ಡಬ್ ಆದ ಸಿನಿಮಾ ಪ್ರದರ್ಶಿಸದೆ ದುರಹಂಕಾರ ತೋರುತ್ತಿದ್ದಾರೆ. ಕನ್ನಡದ ಸಿನಿಮಾವೊಂದು ಹಿಂದಿಗೆ ಡಬ್ ಆಗಿ ಅಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವುದು ಇವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ‌. ಇದೇ ರೀತಿ ಮುಂದುವರೆದರೆ ಜನ ರೊಚ್ಚಿಗೇಳುವ ಕಾಲ ಬರುತ್ತದೆ," ಎಂದು ಹೇಳಿದ್ದಾರೆ.

KRV President TA Narayan Gowda Angry on Hindi National Language Controversy

"ಹಿಂದಿ ರಾಷ್ಟ್ರಭಾಷೆಯಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೂ ಪದೇಪದೇ ಈ ಸುಳ್ಳನ್ನು ಹೇಳಿ ನಿಜವಾಗಿಸುವ ಪ್ರಯತ್ನಗಳು ನಡೆಯುತ್ತಿವೆ. ಹಿಂದಿ ನುಡಿಗೆ ಈಗಾಗಲೇ ಕೊಟ್ಟಿರುವ ಹೆಚ್ಚುಗಾರಿಕೆಯೇ ಬಹಳವಾಗಿದೆ. ಹಿಂದಿಹೇರಿಕೆ ಈಗ ದೇಶ ಒಡೆಯುವಷ್ಟು ವಿಕಾರರೂಪ ತಾಳಿದೆ. ಇದನ್ನು ಕೂಡಲೇ ನಿಲ್ಲಿಸಬೇಕು," ಎಂದು ಆಗ್ರಹಿಸಿದ್ದಾರೆ.

Recommended Video

ಪುಷ್ಪಾ ಸಿನಿಮಾದ ಹೂಂ ಅಂಟಾವ ಹಾಡಿಗೆ ಸಖತ್ ಸ್ಟೆಪ್ ಹಾಕಿ ಮಿಂಚಿದ Virat Kohli ವಿಡಿಯೋ ವೈರಲ್ | Oneindia Kannada

"ಭಾರತ ಬಹುಭಾಷೆ ಸಂಸ್ಕೃತಿಗಳ ನಾಡು. ಬಹುತ್ವವೇ ದೇಶದ ಹೆಚ್ಚುಗಾರಿಕೆ. ಅದನ್ನು ಉಳಿಸಿಕೊಳ್ಳದೇ ಹೋದರೆ ದೇಶ ಒಂದಾಗಿರಲು ಸಾಧ್ಯವಿಲ್ಲ. ಇದು ಸರ್ಕಾರಕ್ಕೂ ಅರ್ಥವಾಗಬೇಕು, ಜನರಿಗೂ ಅರ್ಥವಾಗಬೇಕು. ಇಲ್ಲವಾದಲ್ಲಿ ನಾವು ಇನ್ನಷ್ಟು ಅಪಾಯಗಳಿಗೆ ತಲೆ ಕೊಡಬೇಕಾಗುತ್ತದೆ‌," ಎಂದು ಟ್ವೀಟರ್‌ನಲ್ಲಿ ಸರಣಿ ಟ್ವೀಟ್‌ ಮಾಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

twitter embed :

English summary
KRV President TA Narayan Gowda Hits Out at Ajay Devgn and Hindi People for Hindi National Language Controversy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X