KRS Dam: ಭಾರೀ ಮಳೆ ಎಚ್ಚರಿಕೆ, ಇಂದು ಜಲಾಶಯದ ಹೊರ ಹರಿವು ಹೆಚ್ಚಳ: ಒಳಹರಿವು ಎಷ್ಟಿದೆ?
ಬೆಂಗಳೂರು, ಜೂನ್ 23: ರಾಜ್ಯದಲ್ಲಿ ಕೆಲವು ದಿನಗಳಿಂದ ಮಳೆ ಪ್ರಯಾಣ ಅಲ್ಲಲ್ಲಿ ತಗ್ಗಿದರೂ ಸಹ ಕೆಲವು ಜಲಾಶಯಗಳ ಒಳಹರಿವು ಮಾತ್ರ ಯಥಾ ಸ್ಥಿತಿಯಲ್ಲಿದೆ. ಈ ಪೈಕಿ ಕೆಆರ್‌ಎಸ್ ಜಲಾಶಯದ ನೀರಿನ ಒಳಹರಿವಿನ ಪ್ರಮಾಣ ಏರಿಕೆ ಆಗುತ್ತಲೇ ಇದೆ. ಹಾಗಾದರೆ ಇಂದಿನ ಭಾನುವಾರದ (ಜೂನ್ 23) ಕೆಆರ್‌ಎಸ್ ನೀರಿನ ಮಟ್ಟ ಎಷ್ಟಿದೆ ಎಂದು ಇಲ್ಲಿ ತಿಳಿಯೋಣ.
ಜೂನ್ ಮೊದಲ ವಾರದ ಇದ್ದ ಮಳೆ, ಜೂನ್ ಮೂರನೇ ವಾರದ ಹೊತ್ತಿಗೆ ಕಾಣೆ ಆಯಿತು. ಕಾವೇರಿ ಜಲಾನಯನ, ಜಲಾಶಯಗಳ ಸುತ್ತಮುತ್ತಲಿನ ಒಂದಷ್ಟು ಕಡೆಗಳಲ್ಲಿ ಆಗಾಗ ಮಳೆ ಬಿದ್ದ ಪರಿಣಾಮ ಕೆಲವು ಆಣೆಕಟ್ಟುಗಳು ಭರ್ತಿಯಾಗಿವೆ. ನದಿ, ಕೆರೆ ಕಟ್ಟೆಗಳು, ಕೊಳ್ಳಗಳು ಮೈದುಂಬಿಕೊಂಡಿವೆ. ಇದೆಲ್ಲವು ನೀರಾವರಿಯ ರೈತರಿಗೆ ಸಾಕಷ್ಟು ಅನುಕೂಲ ಮಾಡಿಕೊಟ್ಟಿವೆ. ಮುಂದಿನ ವಾರ ಭಾರೀ ಮಳೆಗೆ ಮತ್ತಷ್ಟು ನೀರಿನ ಸಂಗ್ರಹಕ್ಕೆ ಆಣೆಕಟ್ಟುಗಳು ಸಾಕ್ಷಿಯಾಗಲಿವೆ.

ಒಳಹರಿವು 1214 ಕ್ಯೂಸೆಕ್
ಅದೇ ರೀತಿ ಕಾವೇರಿ ನದಿ ನೀರು ಸಹ ಮಂಡ್ಯ, ಮೈಸೂರು, ಮದ್ದೂರು, ಬೆಂಗಳೂರು, ರಾಮನಗರ ಇನ್ನಿತರ ಪ್ರದೇಶಗಳಲ್ಲಿ ರೈತರಿಗೆ ನೀರಾವರಿಗೆ, ಜನರಿಗೆ ಕುಡಿಯುವ ನೀರೊದಗಿಸುವ ಪ್ರಮುಖ ಮೂಲವಾಗಿದೆ. ಈ ನದಿಗೆ ಅಡ್ಡಲಾಗಿ ಕಟ್ಟಿರುವ ಕೃಷ್ಣ ರಾಜ ಸಾಗರ (KRS) ಜಲಾಶಯದಲ್ಲಿ ಇಂದು 1214 ಕ್ಯೂಸೆಕ್ ನಷ್ಟು ಒಳಹರಿವು ಕಂಡು ಬಂದಿದೆ.
ಈ ಆಣೆಕಟ್ಟು ಒಟ್ಟು (49.452 ಟಿಎಂಸಿ) ನೀರು ಸಂಗ್ರಹದ ಸಾಮರ್ಥ್ಯ ಹೊಂದಿದೆ. ಜೂನ್ ಅಂತ್ಯದ ಹೊತ್ತಿಗೆ ಜಲಾಶಯದಲ್ಲಿ ನೀರು ಗರಿಷ್ಠ ಮಟ್ಟ ತಲುಪಲಿದೆ. ಇಂದಿನ ಹೊರ ಹರಿವು ಹೆಚ್ಚಾಗಿದ್ದು, 933 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ.
ಹೊರ ಹರಿವಿನಲ್ಲಿ ಭಾರೀ ಏರಿಕೆ
ಬಿಡುಗಡೆ ಮಾಡಿದ 933 ಕ್ಯೂಸೆಕ್ (ಹೊರಹರಿವಿನ) ಪೈಕಿ 883 ಕ್ಯೂಸೆಕ್ ನೀರನ್ನು ಕಾವೇರಿ ನದಿಗೆ ಮತ್ತು ನೀರಾವರಿಯ ಕಾಲುವೆಗಳಿಗೆ 50 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಕಳೆದ ವಾರ ಕೆಆರ್‌ಎಸ್ ನಿಂದ 400 ರಿಂದ 500 ಕ್ಯೂಸೆಕ್ ಕ್ಕಿಂತಲೂ ಕಡಿಮೆ ಹೊರ ಹರಿವು ಇತ್ತು. ಅದು ಈ ಭಾನುವಾರಕ್ಕೆ ದುಪ್ಪಟ್ಟಾಗಿದೆ.
ಇದಕ್ಕೆ ಕಾರಣವೇನೆಂದರೆ, ಕೆಲವು ದಿನಗಳಿಂದ ಮುಂಗಾರು ಮಳೆ ಕಡಿಮೆ ಆಗಿರುವುದು. ಅಲ್ಲಲ್ಲಿ ಸಾಮಾನ್ಯ ಮುಂಗಾರು ಮಳೆ ಆಗುತ್ತದೆಯಾದರೂ ನಿರೀಕ್ಷೆಯಷ್ಟು ಮಳೆ ಆಗಿಲ್ಲ. ಹೀಗಾಗಿ ಒಳಹರಿವು ಸಾಮಾನ್ಯವಾಗಿದೆ. ಹೆಚ್ಚುವರಿ ನೀರನ್ನು ನೀರಾವರಿಗೆ, ನದಿ ಪಾತ್ರದ ಜನರಿಗೆ ಅನುಕೂಲ ಆಗಲೆಂದು ಬಿಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮುಂದಿನ ಒಂದು ವಾರ ರಾಜ್ಯದಲ್ಲಿ ಜೋರು ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ರಾಜ್ಯದ ಬಹುತೇಕ ಎಲ್ಲ ಆಣೆಕಟ್ಟುಗಳ ಒಳಹರಿವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.












Click it and Unblock the Notifications