KRS Dam Outflow: ಕೆ.ಆರ್.ಎಸ್ ನಿಂದ ಈ ಅಣೆಕಟ್ಟಿಗೆ ಹರಿಯುತ್ತಿದ್ದ ನೀರಿನ ಪ್ರಮಾಣದಲ್ಲಿ ಇಳಿಮುಖ, ಬೆಂಗ್ಳೂರು ಜನರಿಗೆ ಆತಂಕ
KRS Dam Outflow: ಬೆಂಗಳೂರು, ಸೆಪ್ಟೆಂಬರ್, 13: ಈ ಬಾರಿ ವಾಡಿಕೆಯಷ್ಟು ಮಳೆಯಾಗದ ಕಾರಣ ಒಂದಲ್ಲ ಒಂದು ಸಮಸ್ಯೆಗಳು ಎದುರಾಗುತ್ತಲೇ ಇವೆ. ಇದೀಗ ಬಹುತೇಕ ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಅದರಲ್ಲೂ ಕೆಆರ್‌ಎಸ್‌ನಿಂದ ಶಿವ ಅಣೆಕಟ್ಟಿಗೆ ಹರಿಯುತ್ತಿದ್ದ ನೀರಿನ ಪ್ರಮಾಣ ಇಳಿಮುಖವಾಗಿದ್ದು, ಬೆಂಗಳೂರಿನ ಜನರು ಸಂಕಷ್ಟದ ಭೀತಿ ಎದುರಿಸುವಂತಾಗಿದೆ. ಮತ್ತೊಂದೆಡೆ ಜಲಮಂಡಳಿಗೂ ಇದು ತಲೆನೋವಾಗಿ ಪರಿಣಮಿಸಿದೆ.
ಕನ್ನಡ ನಾಡಿನ ಜನರ ಜೀವನಾಡಿ ಆಗಿರುವ ಕಾವೇರಿ ಈ ಬಾರಿ ತನ್ನ ಅಸಲಿ ಸೌಂದರ್ಯವನ್ನು ಕಳೆದುಕೊಂಡಿದ್ದಾಳೆ. ಧುಮ್ಮುಕ್ಕುತ್ತಾ ಥಳಕು ಬಳಕಿನಿಂದ ಭೋರ್ಗರೆಯಬೇಕಿದ್ದ, ಹಾಲ್ನೊರೆಯಂತೆ ಮೈ ತುಂಬಿ ಹರಿಯಬೇಕಿದ್ದ ಕಾವೇರಿ ನದಿಯ ಒಡಲು ಜಲಾಧಿಪತಿಯ ಮುನಿಸಿನಿಂದ ಅಸಲಿ ರಮಣೀಯತೆಯನ್ನು ಕಳೆದುಕೊಂಡಿದೆ. ಪರಿಣಾಮ ಕೆಆರ್‌ಎಸ್‌ನಿಂದ ನಗರದ ಮಂದಿಗೆ ದಿನನಿತ್ಯಕ್ಕೆ ಬೇಕಾಗುವಷ್ಟು ನೀರು ತರಲು ಬೆಂಗಳೂರಿನ ಜಲ ಮಂಡಳಿಗೆ ಮತ್ತೊಂದು ಸಮಸ್ಯೆ ಉಂಟಾಗಿದೆ.

ನಗರದ 1 ಕೋಟಿ 29 ಲಕ್ಷ ಮಂದಿಗೆ ಪ್ರತಿದಿನ 1450 MLD ಶುದ್ಧ ಕುಡಿಯುವ ನೀರು ಬೇಕು. 1450 ದಶ ಲಕ್ಷ ಲೀಟರ್ ಶುದ್ದೀಕರಿಸಿದ ಕುಡಿಯುವ ನೀರನ್ನು ಮಳವಳ್ಳಿಯ ಶಿವ ಅಣೆಕಟ್ಟೆ ಪಡೆಯಲಾಗುತ್ತೆ. ಆದರೆ ಈ ಬಾರಿ ವಾಡಿಕೆ ಮಳೆಯಾಗದ ಕಾರಣ ಕೆಆರ್‌ಎಸ್ (KRS)ನಿಂದ ಶಿವ ಅಣೆ ಕಟ್ಟಿಗೆ ಹರಿಯುತ್ತಿದ್ದ ನೀರಿನಲ್ಲಿ ಇಳಿಮುಖವಾಗಿದೆ. ಅಣೆಕಟ್ಟಿನಲ್ಲಿ ಕನಿಷ್ಟ 700 ಕ್ಯೂಸೆಕ್ ನೀರಿನ ಹರಿವು ಇದ್ದಲ್ಲಿ ಮಾತ್ರ, ಶಿವ ಅಣೆಕಟ್ಟಿನಿಂದ ಬೆಂಗಳೂರು ಜಲಮಂಡಳಿ 1450 ದಶಲಕ್ಷ ನೀರು ಪಡೆಯಲು ಸಾಧ್ಯ.
ಆದರೆ ಈ ಬಾರಿ 700 ಕ್ಯೂಸೆಕ್‌ಗಿಂತ ಕಡಿಮೆ ನೀರಿನ ಹರಿವು ಇರುವುದರಿಂದ ಬೆಂಗಳೂರು ಜಲಮಂಡಳಿಯ ತಲೆ ನೋವಾಗಿ ಪರಿಣಮಿಸಿದೆ. ಇದೇ ಕಾರಣಕ್ಕೆ ಮುಂಜಾಗೃತವಾಗಿ ಪತ್ರದ ಮೂಲಕ ಮನವಿ ಮಾಡಿದೆ.
ಮುಂದಿನ ದಿನಗಳಲ್ಲಿ ನಗರದ ಮಂದಿಗೆ ನೀರಿನ ಸಮಸ್ಯೆಯಾಗಬಾರದು ಅನ್ನುವ ಕಾರಣಕ್ಕೆ, ಬೆಂಗಳೂರು ಜಲಮಂಡಳಿಯು ಕಾವೇರಿ ನೀರಾವರಿ ನಿಗಮಕ್ಕೆ ಪತ್ರದ ಮೂಲಕ ಮನವಿ ಮಾಡಿದೆ. ಬೆಂಗಳೂರು ಜಲಮಂಡಳಿಗೆ ಅಗತ್ಯ ಇರುವಷ್ಟು ನೀರನ್ನು ಕಬಿನಿ ಮತ್ತು ಕೆ.ಆರ್.ಎಸ್ ಜಲಾಶಯಗಳಲ್ಲಿ ಶೇಖರಿಸಿ ಕಾಯ್ದಿರಿಸುವಂತೆ ಪತ್ರದ ಮೂಲಕ ಮನವಿ ಮಾಡಿದೆ.
ಮುಂಬರುವ ವರ್ಷದಿಂದ ಕಾವೇರಿಯ 5ನೇ ಹಂತದ ಯೋಜನೆಯನ್ನು ಅನುಷ್ಠಾನಗೊಳಿಸುವ ಸಲುವಾಗಿ, ಹೆಚ್ಚುವರಿ 10 ಟಿಎಂಸಿ ನೀರು ಬೇಕಾಗುತ್ತದೆ. ಮುಂಬರುವ ವರ್ಷಗಳಿಂದ ಬೃಹತ್ ಬೆಂಗಳೂರು ವ್ಯಾಪ್ತಿಯ 110 ಹಳ್ಳಿಗಳಿಗೆ ನೀರು ಸರಬರಾಜು ಮಾಡಬೇಕಾದ ಪರಿಣಾಮ ಪ್ರತಿ ತಿಂಗಳು 1.6 TMC ಬದಲಾಗಿ 2.42 TMC ನೀರು ಬೇಕಾಗುತ್ತೆ. ಇದೇ ಕಾರಣಕ್ಕೆ ಬೆಂಗಳೂರು ಜಲಮಂಡಳಿಗೆ ಬೇಕಾಗುವ ನೀರನ್ನು ಶೇಕರಿಸಿಡುವಂತೆ ಮನವಿ ಮಾಡಿದೆ.
ಒಟ್ಟಿನಲ್ಲಿ ಅದೇನೆ ಇರಲಿ, ಕರುನಾಡಿನ ಜನರ ಜೀವನಾಡಿಯ ಒಡಲು ಎಂದೂ ಬತ್ತಿಹೋಗದಿರಲಿ, ನಗರದ ಮಂದಿಯ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಿರಲಿ ಅನಿವುದೇ ನಮ್ಮೆಲ್ಲರ ಆಶಯ ಆಗಿದೆ.












Click it and Unblock the Notifications