ಕೆಪಿಎಸ್ಸಿ ಹಗರಣ : ರಾಜ್ಯಪಾಲರಿಗೆ ಲೋಕಸತ್ತಾ ದೂರು
ಬೆಂಗಳೂರು, ಜ.16 : ಕೆಪಿಎಸ್‍ಸಿ ನೇಮಕಾತಿ ಹಗರಣದ ವಿರುದ್ಧ ಸತತ ಹೋರಾಟ ನಡೆಸುತ್ತಿರುವ ಲೋಕಸತ್ತಾ ಪಕ್ಷವು, ಸರ್ಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ರಾಜ್ಯಪಾಲರಿಗೆ ದೂರು ನೀಡಿದೆ. ಹಗರಣದ ಕುರಿತು ತುರ್ತು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ರಾಜ್ಯಪಾಲರಿಗೆ ಮನವಿ ಮಾಡಿದೆ.
ಬುಧವಾರ ಲೋಕಸತ್ತಾ ಪಕ್ಷದ ರವಿ ಕೃಷ್ಣಾರೆಡ್ಡಿ, ಪಕ್ಷದ ಕಾರ್ಯದರ್ಶಿ ದೀಪಕ್ ಸಿ. ಎನ್., ಕಾರ್ಯಕಾರಿ ಸಮಿತಿ ಸದಸ್ಯರಾದ ರೋಹಿಣಿ ಚಂದ್ರಕಾಂತ್, ಶಾಂತಲಾ ದಾಮ್ಲೆ ಮತ್ತು ಕೆಪಿಎಸ್‍ಸಿ ಹಗರಣದಿಂದ ಅನ್ಯಾಯಕ್ಕೊಳಗಾಗಿರುವ ಅಭ್ಯರ್ಥಿ ರೇಣುಕ ಮುಂತಾದವರು ರಾಜ್ಯಪಾಲರನ್ನು ಭೇಟಿ ಮಾಡಿದ್ದರು. [ಕೆಪಿಎಸ್ಸಿ ಅಕ್ರಮ ಲೋಕಸತ್ತಾ ಹೋರಾಟ]

ಈ ಸಂದರ್ಭದಲ್ಲಿ ಹಗರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೋಲಿಸರು ಸಲ್ಲಿಸಿರುವ ಮಧ್ಯಂತರ ವರದಿಯನ್ನು ರಾಜ್ಯಪಾಲರಿಗೆ ಸಲ್ಲಿಸಿದ ಪಕ್ಷದ ನಾಯಕರು, ನೇಮಕಾತಿಗಳಲ್ಲಿ ಆಗಿರುವ ಹಗರಣಗಳು, ನ್ಯಾಯಾಲಯದಲ್ಲಿ ನಡೆಯುತ್ತಿರುವ ಹೋರಾಟಗಳು, ಮುಂತಾದ ವಿವರಗಳನ್ನು ಅವರಿಗೆ ನೀಡಿತು. ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ಅಭ್ಯರ್ಥಿಗಳಿಗೆ ಅನ್ಯಾಯವಾಗಲಿಗೆ ಎಂದು ಮನವರಿಕೆ ಮಾಡಿಕೊಟ್ಟಿತು. [ಗೋನಾಳ ಭೀಮಪ್ಪ ಮನೆ ಮುಂದೆ ಲೋಕಸತ್ತಾ ಧರಣಿ]
ಲೋಕಸತ್ತಾ ಪಕ್ಷದ ಮನವಿಯನ್ನು ಆಲಿಸಿದ ರಾಜ್ಯಪಾಲ ಎಚ್.ಆರ್.ಭಾರದ್ವಾಜ್, ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಕ್ರಮ ಕೈಗೊಳ್ಳುವಂತೆ ಪತ್ರ ಬರೆಯುವುದಾಗಿ ಭರವಸೆ ನೀಡಿದ್ದಾರೆ. ಕರ್ನಾಟಕದಲ್ಲಿ ಕುಸಿತ ಕಂಡಿರುವ ಆಡಳಿತ ಮತ್ತು ಭ್ರಷ್ಟಾಚಾರವನ್ನು ಹತೋಟಿಗೆ ತರಲು ತಮಗೆ ಸಾಧ್ಯವಾಗುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಪಕ್ಷದ ನಿರಂತರ ಹೋರಾಟ : 2011ರ ಕೆಪಿಎಸ್‍ಸಿ ನೇಮಕಾತಿ ಪ್ರಕ್ರಿಯೆಯನ್ನು ವಾಪಸ್ ಪಡೆಯಬೇಕು, ಪ್ರಾಮಾಣಿಕ ಅಭ್ಯರ್ಥಿಗಳ ಹಿತವನ್ನು ಕಾಪಾಡಬೇಕು, ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಲೋಕಸತ್ತಾ ಪಕ್ಷ ಕಳೆದ ಒಂದೂವರೆ ತಿಂಗಳಿನಿಂದ ನಿರಂತರವಾಗಿ ಹೋರಾಟ ನಡೆಸುತ್ತಿದೆ.












Click it and Unblock the Notifications