ಕೆಪಿಎಸ್‌ಸಿ ಹಗರಣದ ಬಗ್ಗೆ ಕ್ರಮ ಕೈಗೊಳ್ಳಿ : ಲೋಕಸತ್ತಾ
ಬೆಂಗಳೂರು, ಡಿ. 22 : ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ನಡೆದಿರುವ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ 2011ರ ನೇಮಕಾತಿ ಅಕ್ರಮಗಳ ಕುರಿತು ಸಿಇಡಿ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆದರೆ, ಈ ಕುರಿತು ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಲೋಕಸತ್ತಾ ಪಕ್ಷವು ಸಿಎಂ ಸಿದ್ದರಾಮಯ್ಯ ನಿವಾಸದ ಮುಂದೆ ಪ್ರತಿಭಟನೆ ನಡೆಸಿತು.
ಶನಿವಾರ ಕೆಪಿಎಸ್‌ಸಿಯ ಭ್ರಷ್ಟರ ಮೇಲೆ ಕ್ರಮ ಕೈಗೊಳ್ಳಲು ಆಗ್ರಹಿಸಿ, ಅದರ ನೇಮಕಾತಿ ಪ್ರಕ್ರಿಯೆಯನ್ನು ಅಮೂಲಾಗ್ರವಾಗಿ ಬದಲಾಯಿಸಲು ಒತ್ತಾಯಿಸಿ ಮುಖ್ಯಮಂತ್ರಿ ಮನೆಯ ಮುಂದೆ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಲೋಕಸತ್ತಾ ಪಕ್ಷದ ಮುಖಂಡರು ಮತ್ತು ಕೆಪಿಎಸ್ಸಿ ಆಕಾಂಕ್ಷಿಗಳನ್ನು ಪೊಲೀಸರು ಬಂಧಿಸಿದರು.
ಲೋಕಸತ್ತಾ ಪಕ್ಷದ ರಾಜ್ಯಾಧ್ಯಕ್ಷರಾದ ಅಶ್ವಿನ್ ಮಹೇಶ್, ಕಾರ್ಯದರ್ಶಿ ದೀಪಕ್ ಸಿ.ಎನ್, ಕಾರ್ಯಕಾರಿ ಸಮಿತಿಯ ಸದಸ್ಯರಾದ ರವಿಕೃಷ್ಣ ರೆಡ್ಡಿ, ಶಾಂತಲಾ ದಾಮ್ಲೆ, ರೋಹಿಣಿ ಚಂದ್ರಕಾಂತ್, ಪಕ್ಷದ ಹಲವಾರು ಸದಸ್ಯರು ಹಾಗೂ ಕೆಪಿಎಸ್ಸಿ ಆಕಾಂಕ್ಷಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಈ ಕುರಿತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿರುವ ಪಕ್ಷ, 5 ಬೇಡಿಕೆಗಳನ್ನು ಮುಂದಿಟ್ಟಿದೆ.
ಪಕ್ಷದ ಈ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ, ಸರ್ಕಾರ ಸಿಐಡಿ ತನಿಖಾ ವರದಿಯ ಆಧಾರದ ಮೇಲೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳವವರೆಗೂ ಹಾಗೂ ಕೆಪಿಎಸ್ಸಿ ನೇಮಕಾತಿ ಪ್ರಕ್ರಿಯೆಯಲ್ಲಿ ಅಮೂಲಾಗ್ರ ಬದಲಾವಣೆ ತರುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಪಕ್ಷದ ಮುಖಂಡ ರವಿಕೃಷ್ಣ ರೆಡ್ಡಿ ಹೇಳಿದ್ದಾರೆ. [ಐದು ಬೇಡಿಕೆಗಳು]

ನೇಮಕಾತಿ ಆದೇಶ ಹಿಂಪಡೆಯುವುದು
2011ರ ನೇಮಕಾತಿ ಪ್ರಕ್ರಿಯೆಯ ಉತ್ತರ ಪತ್ರಿಕೆಗಳನ್ನು ಪುನರ್ ಪರಿಶೀಲಿಸಿ, ಹೊಸದಾಗಿ ಸಂದರ್ಶನ ಕರೆಯಬೇಕೆಂದು ಲೋಕಸೇವಾ ಆಯೋಗಕ್ಕೆ ಸರ್ಕಾರ ಸೂಚನೆ ನೀಡಿದೆ. ಆದರೆ, ಲೋಕಸೇವಾ ಆಯೋಗ ಇದನ್ನು ತಿರಸ್ಕರಿಸಿದೆ ಮತ್ತು ಸರ್ಕಾರಕ್ಕೆ ಈ ಕುರಿತು ಸೂಚನೆ ನೀಡುವ ಅಧಿಕಾರವಿಲ್ಲ ಎಂದು ಹೇಳಿದೆ. ಆದ್ದರಿಂದ ಸರ್ಕಾರ ನೇಮಕಾತಿ ಪ್ರಕ್ರಿಯೆ ಹಿಂಪಡೆಯಬೇಕು ಎಂದು ಪಕ್ಷ ಆಗ್ರಹಿಸಿದೆ.

ಪ್ರಾಮಾಣಿಕ ಅಭ್ಯರ್ಥಿಗಳ ಹಿತ ಕಾಪಾಡಿ
2011ರ ನೇಮಕಾತಿ ಪ್ರಕ್ರಿಯೆಯನ್ನು ಸರ್ಕಾರ ಹಿಂಪಡೆಯುವಾಗ ಪ್ರಾಮಾಣಿಕವಾಗಿ ಆಯ್ಕೆ ಆಗಿರುವ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆ ಆಗದಂತೆ ಎಚ್ಚರವಹಿಸಬೇಕೆಂದು ಲೋಕಸತ್ತಾ ಪಕ್ಷ ಆಗ್ರಹಿಸಿದೆ.

ಅಕ್ರಮದಲ್ಲಿ ಭಾಗಿಯಾದವರ ಮೇಲೆ ಕ್ರಮ
ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆಸಿದವರ ವಿರುದ್ಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲು ಸಿಐಡಿ ಸರ್ಕಾರದ ಅನುಮತಿ ಕೋರಿದೆ. ಈ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿ 3 ತಿಂಗಳು ಕಳೆದರೂ ಸರ್ಕಾರ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಶೀಘ್ರವೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪಕ್ಷ ಒತ್ತಾಯಿಸಿದೆ.

ಕೇಂದ್ರ ಲೋಕಸೇವಾ ಆಯೋಗದಂತೆ ರಚಿಸಿ
ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಅಕ್ರಮಗಳನ್ನು ತಡೆಗಟ್ಟಲು ಸರ್ಕಾರ ಹಲವಾರು ಮಾರ್ಪಡುಗಳನ್ನು ಮಾಡಲು ಹೊರಟಿದೆ. ಕೇಂದ್ರ ಲೋಕಸೇವಾ ಆಯೋಗದಂತೆ ರಾಜ್ಯ ಲೋಕಸೇವಾ ಆಯೋಗವನ್ನು ಪುನರ್ ರಚನೆ ಮಾಡಿ ಮತ್ತು ಅಲ್ಲಿನ ನೇಮಕಾತಿ ಪ್ರಕ್ರಿಯೆಯಂತೆ ಇಲ್ಲಿಯೂ ಆಗುವಂತೆ ತಿದ್ದುಪಡಿ ಮಾಡಬೇಕೆಂದು ಪಕ್ಷ ಆಗ್ರಹಿಸಿದೆ.

ಶೀಘ್ರ ನೇಮಕಾತಿ ಪ್ರಕ್ರಿಯೆ ಮಾಡಿ
ಎರಡು ವರ್ಷಗಳಿಂದ ಕೆಪಿಎಸ್ ಸಿಯಲ್ಲಿ ಯಾವುದೇ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. ಆದ್ದರಿಂದ ಸರ್ಕಾರ ಲೋಕಸೇವಾ ಆಯೋಗದಿಂದ ಶೀಘ್ರದಲ್ಲೇ ನೇಮಕಾತಿ ಪ್ರಕ್ರಿಯೆ ಆರಂಭಿಸುವಂತೆ ಪಕ್ಷ ಒತ್ತಾಯಿಸಿದೆ.












Click it and Unblock the Notifications