ಬೆಲೆ ಏರಿಕೆಯಿಂದ ಕಂಗೆಟ್ಟ ಜನರಿಗೆ, ಈಗ ಹಾಲಿನ ದರ ಏರಿಕೆ ಬಿಸಿ
ಬೆಂಗಳೂರು, ಏಪ್ರಿಲ್ 27: ಪೆಟ್ರೋಲ್, ಡೀಸೆಲ್, ತರಕಾರಿ ಬೆಲೆಯಿಂದ ಕಂಗೆಟ್ಟಿರುವ ಜನರಿಗೆ ಹಾಲಿನ ದರ ಏರಿಕೆಯ ಬಿಸಿಯೂ ತಟ್ಟುವ ಸಾಧ್ಯತೆ ಇದೆ. ಕರ್ನಾಟಕ ಹಾಲು ಮಾರಾಟ ಮಹಾಮಂಡಳವು ಹಾಲಿನ ದರ ಹೆಚ್ಚಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ಅವರಿಗೆ ಮನವಿ ಮಾಡಿದೆ. ಪ್ರತಿ ಲೀಟರ್‌ಗೆ 3 ರೂಪಾಯಿ ಹೆಚ್ಚಿಸಬೇಕೆಂದು ಕೆಎಂಎಫ್‌ನ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮನವಿ ಸಲ್ಲಿಸಿದ್ದಾರೆ. ಸದ್ಯ ಮೇ 1 ರಿಂದಲೇ ಪರಿಷ್ಕೃತ ದರ ಜಾರಿಯಾಗುವ ಸಾಧ್ಯತ ಇದೆ ಎನ್ನಲಾಗುತ್ತಿದೆ.
ಈಗಾಗಲೇ ಅಮೂಲ್ ಸೇರಿದಂತೆ ವಿವಿಧ ಖಾಸಗಿ ಸಂಸ್ಥೆಗಳು ಹಾಲಿನ ದರವನ್ನ ಹೆಚ್ಚಿಸಿವೆ. ನಂದಿನಿ ಹಾಲಿನ ದರಕ್ಕೆ ಹೋಲಿಸಿದರೆ ಇತರ ಸಂಸ್ಥೆಗಳ ಹಾಲಿನ ದರವು ಲೀಟರ್‌ಗೆ 8 ರಿಂದ 10 ರೂಪಾಯಿ ಹೆಚ್ಚಿದೆ. ಹೀಗಾಗಿ ನಂದಿನಿ ಹಾಲಿನ ದರವನ್ನು ಕೂಡ ಲೀಟರ್‌ಗೆ 3 ರೂಪಾಯಿ ಹೆಚ್ಚಿಸಬೇಕು ಎಂದು ಮುಖ್ಯಮಂತ್ರಿ ಬೊಮ್ಮಾಯಿಗೆ ಮನವಿ ಮಾಡಲಾಗಿದೆ.
ಈ ಹಿಂದೆ ಕರ್ನಾಟಕದ 14 ಹಾಲು ಒಕ್ಕೂಟಗಳು ಪ್ರತಿ ಲೀಟರ್‌ಗೆ 5 ರೂಪಾಯಿ ಹೆಚ್ಚಿಸಬೇಕೆಂದು ಮನವಿ ಮಾಡಿಕೊಂಡಿತ್ತು. ಆದರೆ, ಒಂದೇ ಬಾರಿಗೆ ಇಷ್ಟೋಂದು ದರವನ್ನ ಹೆಚ್ಚಿಸಿದರೆ ಗ್ರಾಹಕರಿಗೆ ತೊಂದರೆಯಾಗಬಹುದು ಎಂಬ ಕಾರಣಕ್ಕೆ ಈಗ 3 ರೂಪಾಯಿ ಹೆಚ್ಚಿಸಲು ಸಿಎಂ ಬೊಮ್ಮಾಯಿ ಬಳಿ ಬಾಲಚಂದ್ರ ಜಾರಕಿಹೊಳಿ ಕೇಳಿಕೊಂಡಿದ್ದಾರೆ.

ಹಾಲಿನ ದರ ಹೆಚ್ಚಿಸಬೇಕೆಂದು ಹಲವು ತಿಂಗಳುಗಳಿಂದ ಕೆಎಂಎಫ್ ಸರ್ಕಾರದ ಬಳಿ ಮನವಿ ಮಾಡುತ್ತಲೇ ಇತ್ತು. ಹಾಲಿನ ಸಂಸ್ಕರಣೆ, ಕಚ್ಚಾ ಸಾಮಾಗ್ರಿ, ವಿದ್ಯುತ್, ಸಾಗಾಣಿಕಾ ವೆಚ್ಚ ಸೇರಿದಂತೆ ಎಲ್ಲಾ ವೆಚ್ಚಗಳೂ ಶೇ 30 ರಷ್ಟು ಏರಿಕೆಯಾಗಿದೆ. ಹೀಗಾಗಿ ರೈತರಿಗೆ ಹೆಚ್ಚುವರಿ ದರ ನೀಡಲು ಅನುಕೂಲವಾಗುವ ನಿಟ್ಟಿನಲ್ಲಿ ನಂದಿನಿ ಹಾಲಿನ ದರ ಹೆಚ್ಚಳ ಮಾಡುವಂತೆ ಕೆಎಂಎಫ್ ಬೇಡಿಕೆ ಇಟ್ಟಿದೆ. ಈ ಬಾರಿಯಾದರೂ ಸರ್ಕಾರ 3 ರೂಪಾಯಿ ದರ ಹೆಚ್ಚಿಸಿದರೆ. ಅದರಲ್ಲಿ 2 ರೂಪಾಯಿ ರೈತರಿಗೆ ಮತ್ತು 1 ರೂಪಾಯಿಯನ್ನು ಹಾಲು ಒಕ್ಕೂಟಗಳಿಗೆ ನೀಡಲಾಗುವುದು ಎಂದು ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.

ಸದ್ಯ ಕೆಎಂಎಫ್ ಅಧ್ಯಕ್ಷರು ನೀಡಿರುವ ಮನವಿಯನ್ನ ಸ್ವೀಕರಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಈ ವಿಚಾರದ ಬಗ್ಗೆ ಅಧಿಕಾರಿಗಳು ಹಾಗೂ ಸಂಬಂಧ ಪಟ್ಟವರ ಜೊತೆ ಚರ್ಚಿಸಿ ನಿರ್ಣಯ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ. ಹಲವು ತಿಂಗಳುಗಳಿಂದ ಕೇಳಿ ಬರುತ್ತಿರುವ ಈ ಬೆಲೆ ಏರಿಕೆ ಬೇಡಿಕೆಗೆ ಈ ಬಾರಿಯಾದರೂ ಸರ್ಕಾರ ಸಹಮತ ಸೂಚಿಸುವ ಎಲ್ಲಾ ಸಾಧ್ಯತೆಗಳಿರುವುದರಿಂದ ನಂದಿನಿ ಹಾಲಿನ ದರ ಏರಿಕೆಯಾಗುವ ಸಾಧ್ಯತೆ ಇದೆ. ಒಂದು ವೇಳೇ ಹೆಚ್ಚಾದರೆ, ಈಗಾಗಲೇ ಆರ್ಥಿಕ ಸಂಕಷ್ಟದಿಂದ ನಲುಗುತ್ತಿರುವ ಜನರಿಗೆ ಮತ್ತೊಂದು ಹೊರೆ ಬೀಳಲಿದ್ದು, ಅಂಗಡಿಗಳಲ್ಲಿ ಒಂದು ಲೀಟರ್ ಹಾಲಿನ ದರ 25 ರಿಂದ 28 ರೂಪಾಯಿಗೆ ಹೆಚ್ಚಾಗುವ ಸಾಧ್ಯತೆ ಇದೆ. ಇದರ ಜೊತೆಗೆ ಹೋಟೆಲ್‌ಗಳಲ್ಲೂ ಸಹ ಟೀ, ಕಾಫಿ ದರವೂ ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ.












Click it and Unblock the Notifications