ಸರ್ವಜ್ಞನಗರ: ಅಭಿವೃದ್ಧಿ ಮತ್ತು ಕಾಂಗ್ರೆಸ್ ಗ್ಯಾರೆಂಟಿಗಳ ಹೆಸರಿನಲ್ಲಿ ಮತಯಾಚಿಸಿದ ಕೆ.ಜೆ.ಜಾರ್ಜ್
ಬೆಂಗಳೂರು, ಮೇ. 06: ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಕೆ.ಜೆ.ಜಾರ್ಜ್ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಬೆಂಗಳೂರಿನ ಸರ್ವಜ್ಞನಗರ ಕ್ಷೇತ್ರದಾದ್ಯಂತ ಸಂಚರಿಸಿ ಕಲ್ಯಾಣನಗರ, ಲಿಂಗರಾಜಪುರ ಮತ್ತು ಕನಕದಾಸ ಲೇಔಟ್‌ನಲ್ಲಿ ಮತದಾರರೊಂದಿಗೆ ಸಂವಾದ ನಡೆಸಿದ್ದಾರೆ. ಹೆಣ್ಣೂರು ಮತ್ತು ಕೆ.ಜಿ.ಹಳ್ಳಿ ವಾರ್ಡ್‌ಗಳಲ್ಲಿ ಮಸೀದಿ ಸಮಿತಿ ಸದಸ್ಯರನ್ನು ಭೇಟಿ ಮಾಡಿ ಮತಯಾಚಿಸಿದ್ದಾರೆ.
ಹೆಣ್ಣೂರು ಟ್ರೀ ಪಾರ್ಕ್‌ನಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳನ್ನು ಪರಿಗಣಿಸಿ ತಮಗೆ ಮತ ನೀಡುವಂತೆ ಮನವಿ ಮಾಡಿದ್ದಾರೆ. ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಜೊತೆಗೆ ಮಾತನಾಡಿರುವ ಕೆಜೆ ಜಾರ್ಜ್, ತಮ್ಮ ಅಸೆಂಬ್ಲಿ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳ ಕೊರತೆಯಿದೆ. ಅನೇಕ ನಾಗರಿಕರ ಕುಡಿಯುವ ನೀರಿನ ಅಗತ್ಯಗಳನ್ನು ಇನ್ನೂ ಪೂರೈಸಬೇಕಾಗಿದೆ ಎಂದು ಹೇಳಿದ್ದಾರೆ.

ಶಾಸಕ, ಸಚಿವರಾಗಿದ್ದ ಅವಧಿಯಲ್ಲಿ ಹಲವು ಯೋಜನೆಗಳನ್ನು ಜಾರಿಗೆ ತಂದಿರುವುದಾಗಿ ತಿಳಿಸಿದ್ದಾರೆ. ವಿವಿಧ ಕಂಪನಿಗಳ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ನಿಧಿಯಿಂದ 20 ಸರ್ಕಾರಿ ಶಾಲೆಗಳ ಸ್ಥಿತಿಯನ್ನು ಸುಧಾರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಬಿರುಸಿನ ರೋಡ್ ಶೋಗಳು ಮತ್ತು ಪಿಎಫ್‌ಐ ಮತ್ತು ಬಜರಂಗದಳವನ್ನು ನಿಷೇಧಿಸುವ ಭರವಸೆಯ ಕಾಂಗ್ರೆಸ್ ಪ್ರಣಾಳಿಕೆಯನ್ನು ಬಿಜೆಪಿ ಪ್ರಮುಖ ಚುನಾವಣಾ ವಿಷಯವಾಗಿ ಪರಿವರ್ತಿಸುವುದರಿಂದ ಯಾವುದೇ ವ್ಯತ್ಯಾಸವಾಗುವುದಿಲ್ಲ. ಜನರು ಬೆಲೆ ಏರಿಕೆ ಮತ್ತು ಕೋಮು ಸಮಸ್ಯೆಗಳನ್ನು ನೋಡಿದ್ದಾರೆ ಎಂದು ಕಾಂಗ್ರೆಸ್ ಪ್ರಣಾಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಸರ್ವಜ್ಞನಗರ ವಿಧಾನಸಭಾ ಕ್ಷೇತ್ರವು ನಾಗವಾರ, ಎಚ್‌ಬಿಆರ್ ಲೇಔಟ್, ಕೆಜಿಹಳ್ಳಿ, ಲಿಂಗರಾಜಪುರ, ಮಾರುತಿಸೇವಾ ನಗರ, ಕಚರಕನಹಳ್ಳಿ, ಬಾಣಸವಾಡಿ ಮತ್ತು ಕಮ್ಮನಹಳ್ಳಿಯ ಎಂಟು ಬಿಬಿಎಂಪಿ ವಾರ್ಡ್‌ಗಳನ್ನು ಹೊಂದಿದ್ದು, ಒಂದು ಲಕ್ಷ ಮುಸ್ಲಿಮರು ಸೇರಿದಂತೆ 3.5 ಲಕ್ಷಕ್ಕೂ ಹೆಚ್ಚು ಮತದಾರರನ್ನು ಹೊಂದಿದೆ. ಲಿಂಗರಾಜಪುರಂ, ಮಾರುತಿ ಸೇವಾನಗರ ಮತ್ತು ಬಾಣಸವಾಡಿ ವಾರ್ಡ್‌ಗಳಲ್ಲಿ ಸಾಕಷ್ಟು ಕ್ರಿಶ್ಚಿಯನ್ ಮತ್ತು ತಮಿಳು ಮತದಾರರಿದ್ದಾರೆ.

ಈ ವಿಭಾಗವು ಕೆಲವು ಸೂಕ್ಷ್ಮ ಪ್ರದೇಶಗಳನ್ನು ಹೊಂದಿದೆ, ಅಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಅಪಾಯವಾಗುವ ಘಟನೆಗಳು ವರದಿಯಾಗಿವೆ. ಕಮ್ಮನಹಳ್ಳಿ, ಬಾಣಸವಾಡಿ, ಹೆಣ್ಣೂರು ಬಡಾವಣೆಗಳಲ್ಲಿ ಗಲಾಟೆ, ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂದು ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳು ದೂರು ನೀಡಿವೆ. ಕೆಜೆ ಜಾರ್ಜ್ ಎದುರು ಪ್ರಮುಖ ಪೈಪೋಟಿ ನೀಡಲು ಪದ್ಮನಾಭ ರೆಡ್ಡಿ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದಾರೆ.
2018 ರ ಚುನಾವಣೆಯಲ್ಲಿ ಕೆಜೆ ಜಾರ್ಜ್ ವಿರುದ್ಧ ಬಿಜೆಪಿಯು ಡಿವೈಎಸ್ಪಿ ಗಣಪತಿ ಅವರ ಆತ್ಮಹತ್ಯೆ ಮತ್ತು ಮಾಜಿ ಐಪಿಎಸ್ ಅಧಿಕಾರಿ ಕೆಂಪಯ್ಯ ಅವರ ಪ್ರಕರಣಗಳನ್ನು ಎತ್ತಿದ್ದರೂ, ಅವರು ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಚುನಾವಣೆಯಲ್ಲೂ ಗೆಲುವು ಪುನರಾವರ್ತನೆಯಾಗುವ ನಿರೀಕ್ಷೆಯಲ್ಲಿದ್ದಾರೆ. ಮೂಲತಃ ಕೋಲಾರದವರಾದ ಮುಸ್ತಫಾ ಎಂಬ ಮುಸ್ಲಿಂ ಅಭ್ಯರ್ಥಿಯನ್ನು ಜೆಡಿಎಸ್ ಕಣಕ್ಕಿಳಿಸಿದೆ. ಎಸ್‌ಡಿಪಿಐ ಅಬ್ದುಲ್ ಹನ್ನಾನ್‌ರನ್ನು ಕಣಕ್ಕಿಳಿಸಿದ್ದು, ಮುಸ್ಲಿಂ ಮತಗಳನ್ನು ಕಸಿದುಕೊಳ್ಳುವ ನಿರೀಕ್ಷೆಯಲ್ಲಿದೆ.












Click it and Unblock the Notifications