ಚಿಕ್ಕಪೇಟೆ ರಾಜಕೀಯ; ಈ ಸಲ ಫೈಟ್ ಬಿಜೆಪಿ vs ಕಾಂಗ್ರೆಸ್ ಮಾತ್ರವಲ್ಲ!
ಬೆಂಗಳೂರು, ಮೇ 01; ಈ ಬಾರಿಯ ಚುನಾವಣೆಯಲ್ಲಿ ಚಿಕ್ಕಪೇಟೆ ಕ್ಷೇತ್ರದ ಚುನಾವಣಾ ಚಿತ್ರಣ ಕುತೂಹಲಕ್ಕೆ ಕಾರಣವಾಗಿದೆ. ಬೆಂಗಳೂರು ನಗರದ ಹಳೆಯ ಬಡಾವಣೆಯಲ್ಲಿ ಗೆಲುವು ಯಾರಿಗೆ ಎಂಬುದು ಎಲ್ಲರ ಪ್ರಶ್ನೆ. ಬಿಜೆಪಿ, ಕಾಂಗ್ರೆಸ್ ನಡುವಿನ ಸ್ಪರ್ಧೆಗೆ ಸ್ವತಂತ್ರ ಅಭ್ಯರ್ಥಿ ಯೂಸಫ್ ಷರೀಫ್ ಅಲಿಯಾಸ್ ಕೆಜಿಎಫ್ ಬಾಬು ತಿರುವು ನೀಡುವ ನಿರೀಕ್ಷೆ ಇದೆ.
2018ರಲ್ಲಿ ಕಾಂಗ್ರೆಸ್‌ನ ಆರ್. ವಿ. ದೇವರಾಜ್ ಸೋಲಿಸಿ ಬಿಜೆಪಿಯ ಉದಯ್ ಗರುಡಾಚಾರ್ ಶಾಸಕರಾಗಿ ಆಯ್ಕೆಯಾಗಿದ್ದರು. ಈ ಬಾರಿಯ ಚುನಾವಣೆಯಲ್ಲಿಯೂ ಅವರಿಗೆ ಪಕ್ಷ ಟಿಕೆಟ್ ನೀಡಿದೆ. ಮಧ್ಯಮ ವರ್ಗ, ಕೆಳ ಮಧ್ಯಮ ವರ್ಗ ಮತ್ತು ಸ್ಲಂ ನಿವಾಸಿಗಳು ಇರುವ ಕ್ಷೇತ್ರ ಚಿಕ್ಕಪೇಟೆ. ಎಎಪಿ, ಎಸ್‌ಡಿಪಿಐ ಅಭ್ಯರ್ಥಿಗಳು ಸಹ ಕಣದಲ್ಲಿದ್ದಾರೆ.

ಆರ್. ವಿ. ದೇವರಾಜ್ ಕಳೆದ ಚುನಾವಣೆಯಲ್ಲಿ 7,934 ಮತಗಳಿಂದ ಸೋಲು ಕಂಡಿದ್ದರು. ಈ ಬಾರಿ ಕಾಂಗ್ರೆಸ್ ಟಿಕೆಟ್‌ಗೆ ಪೈಪೋಟಿ ಇತ್ತು. ಬೆಂಗಳೂರಿನ ಮಾಜಿ ಮೇಯರ್ ಗಂಗಾಬಿಕೆ ಮಲ್ಲಿಕಾರ್ಜುನ್ ಬಿ-ಫಾರಂ ಇಲ್ಲದೇ ನಾಮಪತ್ರ ಸಲ್ಲಿಸಿದ್ದರು. ಕೆಜಿಎಫ್ ಬಾಬು ಸಹ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿ ನಾಮಪತ್ರ ಸಲ್ಲಿಸಿದ್ದರು. ಆದರೆ ಪಕ್ಷ ಆರ್. ವಿ. ದೇವರಾಜ್‌ಗೆ ಟಿಕೆಟ್ ನೀಡಿತು.
ಕಣದಲ್ಲಿ ಉಳಿದ ಕೆಜಿಎಫ್ ಬಾಬು; ಕಾಂಗ್ರೆಸ್‌ಗೆ ಬಂಡಾಯದ ಬಿಸಿ ತಟ್ಟಿದರೂ ಸಹ ಗಂಗಾಬಿಕೆ ಮಲ್ಲಿಕಾರ್ಜುನ್ ನಾಮಪತ್ರ ವಾಪಸ್ ಪಡೆದರು. ಯೂಸಫ್ ಷರೀಫ್ ಅಲಿಯಾಸ್ ಕೆಜಿಎಫ್ ಬಾಬು ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿಯೇ ಉಳಿದರು. ಈಗ ಕಣದಲ್ಲಿ ಮುಸ್ಲಿಂ ಅಭ್ಯರ್ಥಿಗಳಾಗಿ ಜೆಡಿಎಸ್‌ನ ಇಮ್ರಾನ್ ಪಾಷ, ಎಸ್‌ಡಿಪಿಎಐ ಮತ್ತು ಕೆಜಿಎಫ್ ಬಾಬು ಇದ್ದಾರೆ. ಚಿಕ್ಕಪೇಟೆ ಕ್ಷೇತ್ರದ ಸುಮಾರು 2.20 ಲಕ್ಷ ಮತಗಳಲ್ಲಿ ಸುಮಾರು 65 ಸಾವಿರ ಮುಸ್ಲಿಂ ಮತಗಳಿವೆ. ಆದ್ದರಿಂದ ಮತಗಳು ವಿಭಜನೆಗೊಳ್ಳುವ ಭೀತಿ ಎದುರಾಗಿದೆ.
ಆರ್. ವಿ. ದೇವರಾಜ್, ಇಮ್ರಾನ ಪಾಷ, ಉದಯ್ ಗರುಡಾಚಾರ್, ಕೆಜಿಎಫ್ ಬಾಬು, ಎಎಪಿಯ ಬ್ರಿಜೇಶ್ ಕಾಳಪ್ಪ ಮತ್ತು ಎಸ್‌ಡಿಪಿಐ ಅಭ್ಯರ್ಥಿ ಸೇರಿಕೊಂಡು ಚಿಕ್ಕಪೇಟೆಯ ಹೋರಾಟ ಕೇವಲ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಅಲ್ಲ ಎಂಬುದು ಸಾಬೀತಾಗಿದೆ. ಬಹುಭಾಷಿಕರ ನೆಲ, ಜವಳಿ ವ್ಯಾಪಾರಕ್ಕೆ ಪ್ರಸಿದ್ಧಿ ಪಡೆದಿರುವ ಚಿಕ್ಕಪೇಟೆಯಲ್ಲಿ ಕೇವಲ ಶ್ರೀಮಂತರು ಇಲ್ಲ. 2004 ಮತ್ತು 2008ರಲ್ಲಿ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿತು. 2013ರಲ್ಲಿ ಜಯ ಕಾಂಗ್ರೆಸ್ ಪಾಲಾಯಿತು. 2018ರಲ್ಲಿ ಮತ್ತೆ ಗೆದ್ದಿರುವ ಬಿಜೆಪಿ ಈ ಬಾರಿಯೂ ಗೆಲ್ಲುವ ಉತ್ಸಾಹದಲ್ಲಿದೆ.

ರಾಜಸ್ಥಾನ ಮತ್ತು ಗುಜರಾತಿನ ವ್ಯಾಪಾರಿಗಳು, ತೆಲಗು ಮತ್ತು ತಮಿಳು ಭಾಷಿಗರು ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕ್ಷೇತ್ರದಲ್ಲಿ ವ್ಯಾಪಾರಿಗಳ ಜೊತೆ ಕೊಳಗೇರಿ ನಿವಾಸಿಗಳು ಸಹ ಇದ್ದಾರೆ. ಜಾತಿ ಸಮೀಕರಣಕ್ಕಿಂತ ವೈಯಕ್ತಿಕ ವರ್ಚಸ್ಸು ಸಹ ಕೆಲಸ ಮಾಡುತ್ತದೆ. ಆದ್ದರಿಂದ ಆರ್. ವಿ. ದೇವರಾಜ್ ಈ ಬಾರಿ ಗೆಲುವಿನ ವಿಶ್ವಾಸದಲ್ಲಿದ್ದಾರೆ. ಚಿಕ್ಕಪೇಟೆ ಕ್ಷೇತ್ರ ಜಯನಗರ, ಬಸವನಗುಡಿ, ಶಾಂತಿನಗರ, ವಿಲ್ಸನ್ ಗಾರ್ಡನ್‌ನ ಕೆಲವು ಪ್ರದೇಶಗಳನ್ನು ತನ್ನ ಒಡಲಲ್ಲಿ ಹೊಂದಿದೆ. ಆದ್ದರಿಂದ ಗೆಲುವಿಗೆ ಇಂತಹ ಮಾನದಂಡವೇ ಇದೆ ಎಂದು ತೀರ್ಮಾನಿಸುವುದು ಕಷ್ಟ.
ಜೆಡಿಎಸ್ 2018ರಲ್ಲಿ 6,286. 2013ರಲ್ಲಿ 24,382 ಮತ್ತು 2008ರಲ್ಲಿ 23,662 ಮತಗಳನ್ನು ಪಡೆದಿತ್ತು. ಎಸ್‌ಡಿಪಿಐ 2018ರಲ್ಲಿ 11,700 ಮತ್ತು 2013ರಲ್ಲಿ 4,821 ಮತವನ್ನು ಪಡೆದಿತ್ತು. ಆದ್ದರಿಂದ ಈ ಎರಡೂ ಪಕ್ಷಗಳ ಜೊತೆಗೆ ಕೆಜಿಎಫ್ ಬಾಬು ಸಹ ಕಣದಲ್ಲಿರುವುದು ಈ ಬಾರಿಯ ಚಿತ್ರಣವನ್ನು ಬದಲಾವಣೆ ಮಾಡಿದೆ. ಐಟಿ ದಾಳಿ, ಮತದಾರರರಿಗೆ ಹಂಚಲು ಇಟ್ಟಿದ್ದ ಡಿಡಿ ವಶಕ್ಕೆ ಸೇರಿದಂತೆ ವಿವಿಧ ವಿಚಾರಗಳಿಂದ ಕೆಜಿಎಫ್ ಬಾಬು ಸುದ್ದಿಯಲ್ಲಿದ್ದಾರೆ.
"ಕೆಜಿಎಫ್ ಬಾಬು ಮನೆಯಲ್ಲಿ ಮತದಾರರ ಗುರುತಿನ ಚೀಟಿಗಳು ಸಿಕ್ಕಿವೆ. ಅವರ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ. ಕ್ಷೇತ್ರದಲ್ಲಿ ಬಂಡಾಯವಿಲ್ಲ. ನಮ್ಮಲ್ಲಿ ಒಡಕು ಮೂಡಿಸಲು ಬಿಜೆಪಿ ಸುಳ್ಳುಸುದ್ದಿ ಹಬ್ಬಿಸುತ್ತಿದೆ. ಗಂಗಾಬಿಕೆ ಮಲ್ಲಿಕಾರ್ಜುನ್ ಸಹ ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ" ಎಂದು ಪ್ರಜಾವಾಣಿಗೆ ನೀಡಿರುವ ಸಂದರ್ಶನದಲ್ಲಿ ಆರ್. ವಿ. ದೇವರಾಜ್ ಹೇಳಿದ್ದಾರೆ.












Click it and Unblock the Notifications