ಸಿಎಂ ಪ್ರಮಾಣವಚನ: ಬೆಳಗ್ಗೆ 8.30ಕ್ಕೆ ಈ ಸಿಇಟಿ ಪರೀಕ್ಷಾ ಕೇಂದ್ರಗಳಿಗೆ ಬರಲು ಅಭ್ಯರ್ಥಿಗಳಿಗೆ ಸೂಚನೆ
ಬೆಂಗಳೂರು ಮೇ 19: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನೂತನ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ಪ್ರಮಾಣವಚನ ಸ್ವೀಕಾರ ಸಮಾರಂಭ ನಿಗದಿಯಾಗಿದೆ. ಇತ್ತ ಸಿಇಟಿ ಪರೀಕ್ಷೆ ಸಹ ನಾಳೆಯೇ ಇದ್ದು, ಅಭ್ಯರ್ಥಿಗಳ ಅನುಕೂಲಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಹಲವು ಕ್ರಮಗಳನ್ನು ಕೈಗೊಂಡಿದೆ.
ನಗರದ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಆಗಮಿಸಲಿರುವ ಸಿಇಟಿ ಅಭ್ಯರ್ಥಿಗಳಿಗೆ ಸುರಕ್ಷತೆಗೆ ಆದ್ಯತೆ ವಹಿಸಲಾಗಿದೆ.

ಮುಖ್ಯವಾಗಿ ಕಾರ್ಯಕ್ರಮ ನಡೆಯಲಿರುವ ಕಂಠೀರವ ಕ್ರೀಡಾಂಗಣದ ಸಮೀಪದಲ್ಲಿರುವ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿರುವ ಅಭ್ಯರ್ಥಿಗಳಿಗೆ ಬೆಳಗ್ಗೆ 8.30ರ ಹೊತ್ತಿಗೆ ಪರೀಕ್ಷಾ ಕೇಂದ್ರಗಳನ್ನು ತಲುಪುವಂತೆ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಸೂಚಿಸಿದ್ದಾರೆ.
ಈ ಕುರಿತು ಶುಕ್ರವಾರ ಪ್ರಕಟಣೆ ಹೊರಿಡಿಸಿರುವ ಅವರು, ಮಧ್ಯಾಹ್ನ ನಡೆಯಲಿರುವ ಗಣಿತದ ಪರೀಕ್ಷೆಗೆ ಹಾಜರಾಗುವವರು ಸಹ ನಿಗದಿತ ಪರೀಕ್ಷಾ ಕೇಂದ್ರಗಳನ್ನು ಬೆಳಗ್ಗೆಯೇ ತಲುಪಿದರೆ ಒಳ್ಳೆಯದು. ಪ್ರಮಾಣವಚನ ಸಮಾರಂಭದಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಂಭವವಿದೆ. ಈ ಕಾರಣದಕ್ಕೆ ಗಣಿತ ಪರೀಕ್ಷೆ ಅಭ್ಯರ್ಥಿಗಳಿಗೆ ಕೊನೆಗಳಿಗೆಯಲ್ಲಿ ಸಮಸ್ಯೆಗೆ ಸಿಲುಕುವುದು ಬೇಡ ಎಂದು ಅವರು ಸಲಹೆ ನೀಡಿದ್ದಾರೆ.
ಒಂದು ವೇಳೆ ಅಭ್ಯರ್ಥಿಗಳು ಸಂಚಾರ ದಟ್ಟಣೆಗೆ ಸಿಲುಕಿಕೊಂಡಲ್ಲಿ ಪರೀಕ್ಷಾ ಪ್ರವೇಶಪತ್ರವನ್ನು ಪೊಲೀಸರಿಗೆ ತೋರಿಸಿದರೆ ಅಂತಹವರನ್ನು ಆದಷ್ಟು ಬೇಗ ಪರೀಕ್ಷಾ ಕೇಂದ್ರಗಳಿಗೆ ತಲುಪಿಸಲು ಅಗತ್ಯ ವ್ಯವಸ್ಥೆ ಮಾಡಿಕೊಡಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಅಷ್ಟೇ ಅಲ್ಲದೇ ವಿಠಲ ಮಲ್ಯ ರಸ್ತೆಯಲ್ಲಿನ ಸೆಂಟ್ ಜೋಸೆಫ್ಸ್ ಇಂಡಿಯನ್ ಪಿಯು ಕಾಲೇಜು ಕಂಠೀರವ ಕ್ರೀಡಾಂಗಣಕ್ಕೆ ತುಂಬಾ ಹತ್ತಿರದಲ್ಲಿದೆ. ಹೀಗಾಗಿ ಈ ಕೇಂದ್ರದಲ್ಲಿ ಸಿಇಟಿ ಬರೆಯುತ್ತಿರುವವರಿಗೆ ಮಾತ್ರ ಬೆಳಗ್ಗೆ ಉಪಾಹಾರ ಮತ್ತು ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಪ್ರಾಧಿಕಾರದ ವತಿಯಿಂದ ಏರ್ಪಡಿಸಿದೆ ಎಂದು ಅವರು ವಿವರಿಸಿದರು.
ಸಿಇಟಿ ವಿದ್ಯಾರ್ಥಿಗಳಿಗೆ ಬೆಳಗ್ಗೆ 8.30ಕ್ಕೆ ಬರಲು ಸೂಚನೆ
* ಬಿಷಪ್ ಕಾಟನ್ ಮಹಿಳಾ ಪದವಿಪೂರ್ವ ಕಾಲೇಜು, 3ನೇ ಅಡ್ಡರಸ್ತೆ, ಸಿಎಸ್ಐ ಕಾಂಪೌಂಡ್.
* ಗುಡ್ ವಿಲ್ ಬಾಲಕಿಯರ ಪದವಿಪೂರ್ವ ಕಾಲೇಜು, ಪ್ರೊಮೆನೇಡ್ ರಸ್ತೆ, ಫ್ರೇಸರ್ ಟೌನ್.
* ಸೆಂಟ್ ಜೋಸೆಫ್ಸ್ ಪದವಿಪೂರ್ವ ಕಾಲೇಜು, ರೆಸಿಡೆನ್ಸಿ ರಸ್ತೆ.
* ಸೆಂಟ್ ಜೋಸೆಫ್ಸ್ ಇಂಡಿಯನ್ ಪಿಯು ಕಾಲೇಜು, ವಿಠಲ್ ಮಲ್ಯ ರಸ್ತೆ.
* ಸೆಂಟ್ ಆ್ಯನ್ಸ್ ಬಾಲಕಿಯರ ಪಿಯು ಕಾಲೇಜು, ಮಿಲ್ಲರ್ಸ್ ರಸ್ತೆ.
* ಆರ್. ಬಿ.ಎ.ಎನ್.ಎಂ.ಎಸ್ ಪಿಯು ಕಾಲೇಜು, ಅಣ್ಣಾಸ್ವಾಮಿ ಮೊದಲಿಯಾರ್ ರಸ್ತೆ.
* ಎಸ್.ಜೆ.ಆರ್.ಸಿ. ಬಿಐಎಫ್ಆರ್ ಪಿಯು ಕಾಲೇಜು, ಆನಂದರಾವ್ ವೃತ್ತ.
* ಕ್ಯಾಥೆಡ್ರಲ್ ಕಾಂಪೋಸಿಟ್ ಪಿಯು ಕಾಲೇಜು, ರಿಚ್ಮಂಡ್ ರಸ್ತೆ.
* ಸೆಂಟ್ ಯುಫ್ರಿಶಿಯಸ್ ಬಾಲಕಿಯರ ಪ್ರೌಢಶಾಲೆ ಮತ್ತು ಕಾಂಪೋಸಿಟ್ ಪಿಯು ಕಾಲೇಜು, ಆಲ್ಬರ್ಟ್ ಸ್ಟ್ರೀಟ್, ರಿಚ್ಮಂಡ್ ಟೌನ್.
* ಸ್ಟ್ರೇಸಿ ಮೆಮೋರಿಯಲ್ ಕಾಂಪೋಸಿಟ್ ಪಿಯು ಕಾಲೇಜು, ಸೆಂಟ್ ಮಾರ್ಕ್ಸ್ ರಸ್ತೆ.
* ಹಸನತ್ ಮಹಿಳಾ ಪಿಯು ಕಾಲೇಜು, ಡಿಕನ್ಸನ್ ರಸ್ತೆ.












Click it and Unblock the Notifications