ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆ.ಸಿ.ಕೊಂಡಯ್ಯ ಕೊರಳಿಗೆ ಮತ್ತೊಂದು ಹಗರಣ

|
Google Oneindia Kannada News

ಬೆಂಗಳೂರು, ಜ.13 : ಪಕ್ಷದ ಜಾಗದಲ್ಲಿ ಕಾಂಪ್ಲೆಕ್ಸ್ ಕಟ್ಟಿದ್ದ ಆರೋಪ ಎದುರಿಸುತ್ತಿರುವ ಹಿರಿಯ ಕಾಂಗ್ರೆಸ್ ಮುಖಂಡ ಕೆ.ಸಿ.ಕೊಂಡಯ್ಯ ಕೊರಳಿಗೆ ಮತ್ತೊಂದು ಹಗರಣ ಸುತ್ತಿಕೊಂಡಿದೆ. ಬೆಂಗಳೂರಿನ ಕೆಂಪೇಗೌಡರಸ್ತೆಯಲ್ಲಿರುವ ಕೆಂಪೇಗೌಡ ಮಹಾರಾಜ್ ಕಾಂಪ್ಲೆಕ್ಸ್‌ನ್ನು ಅಕ್ರಮವಾಗಿ ಕ್ರಯಕ್ಕೆ ಪಡೆದು ಬೇರೆಯವರಿಗೆ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಎನ್‌.ಆರ್.ರಮೇಶ್ ಅವರು ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಈ ಕುರಿತು ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಈ ಅವ್ಯವಹಾರ ನಡೆದಿದೆ ಎಂದು ರಮೇಶ್ ಆರೋಪಿಸಿದ್ದಾರೆ.

KC Kondaiah

ಈ ಹಗರಣದ ಕುರಿತು ಲೋಕಾಯುಕ್ತ ಮತ್ತು ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್‌)ಗೆ ದೂರು ನೀಡಿರುವ ರಮೇಶ್ ಅವರು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಕೆ.ಸಿ.ಕೊಂಡಯ್ಯ ಅವರ ಜೊತೆ ಆಯುಕ್ತರಾಗಿದ್ದ ಎಂ.ಆರ್.ಶ್ರೀನಿವಾಸ್ ಮೂರ್ತಿ ಅವರು ಶಾಮೀಲಾಗಿದ್ದಾರೆ ಎಂದು ರಮೇಶ್‌ ದೂರಿನಲ್ಲಿ ತಿಳಿಸಿದ್ದಾರೆ. [ಬಳ್ಳಾರಿಯಲ್ಲಿ ಅನಿಲ್ ಲಾಡ್, ಕೊಂಡಯ್ಯ ಜಟಾಪಟಿ]

ಏನಿದು ಹಗರಣ : ಮಹಾರಾಜ ಬಿಲ್ಡ್ ಟೆಕ್ ಡೆವಲಪ್‌ಮೆಂಟ್ ಮತ್ತು ಪಾಲಿಕೆಯ ಜಂಟಿ ಸಹಯೋಗದೊಂದಿಗೆ ಕೆಂಪೇಗೌಡರಸ್ತೆಯಲ್ಲಿ ಕೆಂಪೇಗೌಡ ಮಹಾರಾಜ್ ಕಾಂಪ್ಲೆಕ್ಸ್‌ನ್ನು ನಿರ್ಮಾಣ ಮಾಡಲಾಯಿತು. 83:17ರ ಅನುಪಾತದ ಒಡೆತನದಲ್ಲಿ ಕರಾರುಪತ್ರವನ್ನು ಮಾಡಲಾಗಿತ್ತು.

ಬಿಲ್ಡ್ ಟೆಕ್ ಸಂಸ್ಥೆಗೆ ಶೇ.17 ಮತ್ತು ಪಾಲಿಕೆಗೆ ಶೇ.83ರ ಒಡೆತನ ಪಾಲಿಕೆಗೆ ಸೇರಿದ್ದು, ಒಟ್ಟು 4 ಮಹಡಿಗಳು ನಿರ್ಮಾಣವಾದವು. ಪಾರ್ಕಿಂಗ್, ನೆಲಮಹಡಿ ಮತ್ತು 1ನೇ ಮಹಡಿಯಲ್ಲಿ ವಾಣಿಜ್ಯ ಸಂಕೀರ್ಣಗಳು, ಎರಡು ಮೂರು ಮತ್ತು 4ನೇ ಮಹಡಿಯಲ್ಲಿ ಪಾರ್ಕಿಂಗ್ ಮುಂತಾದ ಸ್ಥಳಗಳು ಪಾಲಿಕೆಗೆ ಸೇರಿವೆ.ಮಹಾರಾಜ್ ಬಿಲ್ಡ್ ಟೆಕ್ ಸಂಸ್ಥೆಗೆ 3,103 ಚದರ ಅಡಿ ಜಾಗ ಮಾತ್ರ ಸೇರಿರುತ್ತದೆ.

2003ರ ಏಪ್ರಿಲ್‌ನಲ್ಲಿ ಆಯುಕ್ತರಾಗಿದ್ದ ಎಂ.ಆರ್.ಶ್ರೀನಿವಾಸ್‌ಮೂರ್ತಿ ಅವರು ಪಾಲಿಕೆಯ ಆಸ್ತಿಯನ್ನು ಮಾರಾಟ ಮಾಡಲು ಜಿಪಿಎ ಮಾಡಿಕೊಟ್ಟಿದ್ದರು. ಪಾಲಿಕೆಯ ಆಸ್ತಿ ಮಾರಾಟ ಮಾಡುವಾಗ ಕೌನ್ಸಿಲ್ ಸಭೆಯ ಗಮನಕ್ಕೆ ತರಬೇಕು. ಆದರೆ, ಸಭೆಯಲ್ಲಿ ಈ ಬಗ್ಗೆ ಚರ್ಚಿಸದೇ 350 ಕೋಟಿ ಆಸ್ತಿ ಮಾರಾಟಕ್ಕೆ ಜಿಪಿಎ ಕೊಟ್ಟಿದ್ದಾರೆ.

ಕೆ.ಸಿ.ಕೊಂಡಯ್ಯ, ಭವರ್‌ ಲಾಲ್ ಕಿವರ್ಸಿಯವರು ಮನೀಶ್, ಮಜೀತ್ ಎಂಬುವರ ಜೊತೆ ಶಾಮೀಲಾಗಿ, 2006ರಲ್ಲಿ ಮುಖೇಶ್ ಬಾಯ್, ಅಮೃತ್ ಲಾಲ್ ಗೋಖಾನಿ ಎಂಬುವರಿಗೆ ಒಂದು ಮಳಿಗೆಯನ್ನು ಕ್ರಯಕ್ಕೆ ಮಾರಾಟ ಮಾಡಿದ್ದಾರೆ. 65 ಮಳಿಗೆಗಳಲ್ಲಿ ಭವರ್‌ಲಾಲ್ ಪತ್ನಿಗೆ 11 ಮಳಿಗೆ ಸೇರಿದಂತೆ 14 ಮಳಿಗೆಗಳನ್ನು ವಿವಿಧ ಸೇಠ್‌ಗಳಿಗೆ ಕಾನೂನು ಬಾಹಿರವಾಗಿ ಮಾರಾಟ ಮಾಡಲಾಗಿದೆ.

ಕಾಂಪ್ಲೆಕ್ಸ್‌ನಲ್ಲಿ ಪ್ರತಿ ಚದರ ಅಡಿ ಜಾಗಕ್ಕೆ 120ರಿಂದ 150 ರೂ. ಮಾಸಿಕ ಬಾಡಿಗೆ ಬರುತ್ತದೆ. ಈ ಜಾಗವನ್ನು ವಶಪಡಿಸಿಕೊಂಡರೆ ಬಿಬಿಎಂಪಿಗೆ ನೂರು ಕೋಟಿ ರೂ. ಆಸ್ತಿ ಸಿಗುತ್ತದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಮೇಶ್ ಒತ್ತಾಯಿಸಿದ್ದಾರೆ.

English summary
Congress Leader K.C. Kondaiah encroached Bruhat Bangalore Mahanagara Palike (BBMP) Complex in Kempegowda Maharaja Shopping Complex in Bengaluru and illegally hand over to others alleged BBMP Yediyur corporator N.R.Ramesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X