Karnataka Major Expressways: ಕರ್ನಾಟಕದ ಪ್ರಮುಖ ಎಕ್ಸ್‌ಪ್ರೆಸ್ ವೇಗಳ ಕಾಮಗಾರಿ ಸ್ಥಿತಿ ಅಪ್ಡೇಟ್
Karnataka Major Expressway: ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಜಾಲ ವಿಸ್ತರಣೆ ಆಗುತ್ತಲಿದೆ. ಅದರಲ್ಲೂ ಬಹುನಿರೀಕ್ಷಿತ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಉದ್ಘಾಟನೆ ಯಾವಾಗ ಎನ್ನುವ ಅಪ್ಡೇಟ್ ಅನ್ನು ಇತ್ತೀಚೆಗಷ್ಟೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಬಹಿರಂಗಪಡಿಸಿದ್ದಾರೆ. ಹಾಗಾದ್ರೆ ಇನ್ನುಳಿದ ಪ್ರಮಯಖ ಎಕ್ಸ್‌ಪ್ರೆಸ್ ವೇಗಳ ಕಾಮಗಾರಿ ಸ್ಥಿತಿ ಯಾವ ಹಂತದಲ್ಲಿದೆ. ಯಾವಾಗ ಪೂರ್ಣಗೊಳ್ಳಲಿವೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ರಾಜ್ಯದಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಉದ್ಘಾಟನೆಯಾಗಿ ವಾಹನಗಳು ಕೂಡ ಸಂಚಾರ ಮಾಡುತ್ತಿವೆ. ಆಗಾಗ ಟೋಲ್ ಶುಲ್ಕ ಹೆಚ್ಚಳ ಸೇರಿದಂತೆ ಹಲವು ವಿಚಾರಕ್ಕೆ ಈ ಎಕ್ಸ್‌ಪ್ರೆಸ್ ವೇ ಸುದ್ದಿಯಲ್ಲಿ ಇರುತ್ತದೆ. ಇದು ಪ್ರಮುಖ ಎಕ್ಸ್‌ಪ್ರೆಸ್ ವೇ ಆಗಿದ್ದು, ಈಗಾಗಲೇ ಕಾರ್ಯನಿರ್ವಹಿಸುತ್ತಿದೆ. ಇನ್ನೂ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಕರ್ನಾಟಕ ಭಾಗದಲ್ಲೂ ಸಂಪೂರ್ಣವಾಗಿ ಪೂರ್ಣಗೊಂಡಿದ್ದು, ವಾಹನಗಳ ಸಂಚಾರಕ್ಕೆ ಮುಕ್ತವಾಗಿದೆ.

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ: ಆದರೆ, ಈ ಎಕ್ಸ್‌ಪ್ರೆಸ್ ವೇ ಉದ್ಘಾಟನೆ ದಿನಾಂಕ ಮುಂದೂಡಿಕೆಯಾಗುತ್ತಲೇ ಬರುತ್ತಿದೆ. ಇದಕ್ಕೂ ಕಾರಣವೂ ಇದೆ. ಆಂಧ್ರಪ್ರದೇಶ ಹಾಗೂ ತಮಿಳುನಾಡು ಭಾಗದಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ವಿಳಂಬವಾದ ಕಾರಣ ಈ ಭಾಗದಲ್ಲು ಕಾಮಗಾರಿ ಪೂರ್ಣಗೊಂಡಿಲ್ಲ. ಈ ಹಿನ್ನೆಲೆ ಉದ್ಘಾಟನೆ ದಿನಾಂಕ ಮುಂದೂಡಿಕೆಯಾಗುತ್ತಾ ಬರುತ್ತಿದೆ. ಈ ವರ್ಷದ ಕೊನೆಗೆಯಲ್ಲಿ ಅಥವಾ 2026ರ ಜುಲೈ ವೇಳೆಗೆ ಕಾಮಗಾರಿ ಎಲ್ಲಾ ಪೂರ್ಣಗೊಂಡು ಲೋಕಾರ್ಪಣೆ ಆಗಲಿದೆ ಎನ್ನುವ ಮಾಹಿತಿ ಇದೆ.
ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ 262 ಕಿಲೋ ಮೀಟರ್ ಉದ್ದ ಇದ್ದು, ನಿರ್ಮಾಣ ವೆಚ್ಚ ಸುಮಾರು ₹17,000ರಿಂದ ₹17,900 ಕೋಟಿ ರೂಪಾಯಿ ಎನ್ನುವ ಮಾಹಿತಿ ಇದೆ. ಇದು ಕರ್ನಾಟಕ, ಆಂಧ್ರ ಪ್ರದೇಶ ಹಾಗೂ ತಮಿಳುನಾಡು ಮೂರು ರಾಜ್ಯಗಳಿಗೆ ಸಂಪರ್ಕ ಕಲ್ಪಿಸಲಿದೆ. ಅಲ್ಲದೆ, ಬೆಂಗಳೂರು-ಚೆನ್ನೈ ನಡುವಿನ ಪ್ರಯಾಣದ ಸಮಯವನ್ನು ಕೂಡ ಕಡಿಮೆ ಮಾಡಲಿದೆ.
ಬೆಂಗಳೂರು-ಹೈದರಾಬಾದ್ ಎಕ್ಸ್‌ಪ್ರೆಸ್‌ವೇ: ಈ ಎಕ್ಸ್‌ಪ್ರೆಸ್‌ವೇ ಒಟ್ಟು ಉದ್ದ ಸುಮಾರು 1,100 ಕಿಲೋ ಮೀಟರ್ ಆಗಿದ್ದು, ಇದರ ನಿರ್ಮಾಣ ವೆಚ್ಚ ₹35,000 ಕೋಟಿ ಎಂದು ಅಂದಾಜು ಮಾಡಲಾಗಿದೆ. ಇದು ಇನ್ನೂ ಡಿಪಿಆರ್ ಹಂತದಲ್ಲಿದೆ. ಈ ಹಂತ ಮುಗಿದರೆ, ಇದರ ನಿರ್ಮಾಣ ಕಾರ್ಯವನ್ನು 2030ರೊಳಗೆ ಪೂರ್ಣಗೊಳಿಸುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ. ಪ್ರಸ್ತುತ ಇದನ್ನು 4-12 ಲೇನ್‌ಗೆ ವಿಸ್ತರಣೆ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ.
ಬೆಂಗಳೂರು-ಪುಣೆ ಎಕ್ಸ್‌ಪ್ರೆಸ್‌ವೇ: ಈ ಎಕ್ಸ್‌ಪ್ರೆಸ್ ವೇ ಯೋಜನೆ ಕೂಡ ಡಿಪಿಆರ್ ಹಂತದಲ್ಲಿದೆ. ಇದರ ಉದ್ದ ಸುಮಾರು 700 ಕಿಲೋ ಮೀಟರ್ ಆಗಿದ್ದು, ನಿರ್ಮಾಣ ವೆಚ್ಚ ₹50,000 ಕೋಟಿ ಅಂದಾಜು ಎಂದು ಅಂದಾಜು ಮಾಡಲಾಗಿದೆ. ಡಿಪಿಆರ್ ಕಾರ್ಯ ಬೇಗ ಮುಗಿದರೆ, ಕಾಮಗಾರಿ ಡಿಸೆಂಬರ್ 2028 ಒಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಬೆಂಗಳೂರು-ವಿಜಯವಾಡ ಎಕ್ಸ್‌ಪ್ರೆಸ್‌ವೇ: ಕರ್ನಾಟಕದ ಬೆಂಗಳೂರಿನಿಂದ ಆಂಧ್ರಪ್ರದೇಶದ ವಿಜಯವಾಡಕ್ಕೆ ಸಂಪರ್ಕ ಕಲ್ಪಿಸುವ 518 ಕಿಲೋ ಮೀಟರ್ ಉದ್ದದ ಪ್ರಮುಖ 6 ಲೇನ್ ಎಕ್ಸ್‌ಪ್ರೆಸ್‌ವೇ ಆಗಿದೆ. ಇನ್ನು ಇದು ನಿರ್ಮಾಣ ಹಂತದಲ್ಲಿದ್ದು, ನಿರ್ಮಾಣ ವೆಚ್ಚ ₹19,320 ಕೋಟಿ ರೂಪಾಯಿ ಆಗಬಹುದು ಎಂದು ಅಂದಾಜು ಮಾಡಲಾಗಿದೆ.
ಬೆಂಗಳೂರು-ವಿಜಯವಾಡ ಎಕ್ಸ್‌ಪ್ರೆಸ್‌ವೇ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 11, 2024ರಂದು ಅಡಿಪಾಯ ಹಾಕಿದ್ದು, ಇದು 2026-27ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಕಾರ್ಯರೂಪಕ್ಕೆ ಬಂದರೆ, ಎರಡು ನಗರಗಳ ನಡುವಿನ ಪ್ರಯಾಣದ ಸಮಯ ಮತ್ತು ದೂರ ಗಮನಾರ್ಹವಾಗಿ ಕಡಿಮೆಯಾಗಲಿದೆ. ಈ ಎಕ್ಸ್‌ಪ್ರೆಸ್‌ವೇಯಲ್ಲಿ ಗಂಟೆಗೆ ಗರಿಷ್ಠ 120 ಕಿಲೋ ಮೀಟರ್ ವೇಗದ ಮಿತಿ ನಿಗದಿಪಡಿಸಲಾಗಿದೆ.
ಬೆಂಗಳೂರು-ಮಂಗಳೂರು ಎಕ್ಸ್‌ಪ್ರೆಸ್ ವೇ: ಸುಮಾರು 320 ಕಿಲೋ ಮೀಟರ್ ಉದ್ದದ ಎಕ್ಸ್‌ಪ್ರೆಸ್‌ವೇ ಇದಾಗಿದೆ. ಇದು ಪೂರ್ಣಗೊಂಡರೆ, ಬೆಂಗಳೂರು-ಮಂಗಳೂರು ಅಥವಾ ಮಂಗಳೂರು-ಬೆಂಗಳೂರು ತಲುಪಲು ಕೇವಲ 3-4 ಗಂಟೆ ಬೇಕಾಗುತ್ತದೆ ಅಷ್ಟೇ. ಈ ಹೆದ್ದಾರಿಯು ಬೆಂಗಳೂರು, ಕುಣಿಗಲ್, ಹಾಸನ, ಸಕಲೇಶಪುರ ಮತ್ತು ಬಂಟ್ವಾಳದ ಮೂಲಕ ಹಾದು ಮಂಗಳೂರನ್ನು ತಲುಪಲಿದೆ. ಈ ಹಿಂದೆ ಡಿಪಿಆರ್ ತಯಾರಿಸಲು 9 ಸಂಸ್ಥೆಗಳು ಬಿಡ್ ಅನ್ನು ಸಲ್ಲಿಕೆ ಮಾಡಿದ್ದವು. ಆ ಪೈಕಿ ಒಂದು ಸಂಸ್ಥೆಗೆ ಗುತ್ತಿಗೆ ನೀಡಲಾಗಿದ್ದು, 2026ರ ಅಂತ್ಯದ ವೇಳೆಗೆ ಡಿಪಿಆರ್ ಸಿದ್ಧ ಆಗಲಿದೆ. ಡಿಪಿಆರ್ ವರದಿ ಸಿದ್ಧವಾಗಿ, ಸಲ್ಲಿಕೆಯಾಗಿ ಅಂತಿಮಗೊಂಡ ಬಳಿಕ ಭೂಸ್ವಾಧೀನ ಮತ್ತು ಪರಿಸರ ಅನುಮೋದನೆಗಳಂತಹ ಪ್ರಕ್ರಿಯೆಗಳು ಆರಂಭವಾಗಲಿವೆ. ಇವೆಲ್ಲಾ ಪ್ರಕ್ರಿಯೆಗಳು ಬೇಗ ಮುಗಿದರೆ, 2028ರ ಒಳಗೆ ಕಾಮಗಾರಿ ಮುಕ್ತವಾಗುವ ನಿರೀಕ್ಷೆಯಿದೆ ಎನ್ನುವ ಮಾಹಿತಿ ಇದೆ.












Click it and Unblock the Notifications