ಮುಸ್ಲಿಮರ 4% ಮೀಸಲಾತಿಯನ್ನು ಒಕ್ಕಲಿಗರು, ಲಿಂಗಾಯತರಿಗೆ ಹಂಚಿದ ಬಿಜೆಪಿ ಸರ್ಕಾರ
ಬೆಂಗಳೂರು, ಮಾರ್ಚ್. 25: ಮುಂಬರುವ ಕರ್ನಾಟಕ ಚುನಾವಣೆಗೆ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟ ತನ್ನ ಕೊನೆಯ ನಿರ್ಧಾರವೊಂದರಲ್ಲಿ, ಒಬಿಸಿ ಕೋಟಾದಡಿಯಲ್ಲಿ ಮುಸ್ಲಿಮರಿಗೆ ಶೇಕಡಾ 4 ರಷ್ಟು ಮೀಸಲಾತಿಯನ್ನು ರದ್ದುಗೊಳಿದೆ. ಮುಸ್ಲಿಮರನ್ನು ಆರ್ಥಿಕವಾಗಿ ದುರ್ಬಲ ವಿಭಾಗ (ಇಡಬ್ಲ್ಯೂಎಸ್) ಅಡಿಯಲ್ಲಿ ಸೇರಿಸಿದೆ.
ಇತರ ಹಿಂದುಳಿದ ವರ್ಗಗಳ (ಒಬಿಸಿ) ಕೋಟಾದಡಿಯಲ್ಲಿದ್ದ ಮುಸ್ಲಿಮರ ಶೇಕಡಾ 4 ರಷ್ಟು ಮೀಸಲಾತಿಯನ್ನು ರದ್ದುಗೊಳಿಸಲು ಕರ್ನಾಟಕ ಸಂಪುಟ ಶುಕ್ರವಾರ ನಿರ್ಧರಿಸಿದೆ. ಈ 4 ಪ್ರತಿಶತ ಕೋಟಾವನ್ನು ಈಗ ಪ್ರಬಲ ಸಮುದಾಯಗಳಾದ ಒಕ್ಕಲಿಗರು ಮತ್ತು ಲಿಂಗಾಯತ ಸಮುದಾಯಗಳ ಪಾಲಾಗಲಿದೆ. ಚುನಾವಣೆಯಲ್ಲಿ ಈ ಎರಡು ಸಮುದಾಯಗಳು ಪ್ರಭಾವ ಬೀರಲಿವೆ.

ಒಬಿಸಿ ವರ್ಗದಿಂದ ಮುಸ್ಲಿಮರನ್ನು ತೆಗೆದುಹಾಕಿ ಶೇಕಡಾ 10 ರಷ್ಟು ಮೀಸಲಾತಿ ಇರುವ ಆರ್ಥಿಕವಾಗಿ ದುರ್ಬಲ ವಿಭಾಗ (ಇಡಬ್ಲ್ಯೂಎಸ್) ಅಡಿಯಲ್ಲಿ ಅವರಿಗೆ ಅವಕಾಶ ಕಲ್ಪಿಸಲು ಸರ್ಕಾರ ನಿರ್ಧರಿಸಿದೆ. "ಕ್ಯಾಬಿನೆಟ್ ಉಪಸಮಿತಿ ಕೋಟಾ ವಿಭಾಗಗಳಲ್ಲಿ ಬದಲಾವಣೆಗಳನ್ನು ಶಿಫಾರಸು ಮಾಡಿದೆ. ಈ ಕಾರಣದಿಂದ ನಾವು ಮೀಸಲಾತಿ ಬದಲಾವನೆ ಮಾಡಿದ್ದೇವೆ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮುಸ್ಲಿಮರು ಈ ಹಿಂದೆ ರಾಜ್ಯದಲ್ಲಿ ಇತರ ಹಿಂದುಳಿದ ವರ್ಗಗಳ (ಒಬಿಸಿ) 2B ಗುಂಪಿನ ಅಡಿಯಲ್ಲಿದ್ದರು. ಇದರಲ್ಲಿ ಈ ಸಮುದಾಯಕ್ಕೆ 4% ಮೀಸಲಿತ್ತು. ಪ್ರವರ್ಗ 2 ಬಿಯಲ್ಲಿರುವ ಮುಸ್ಲಿಮರ ಮೀಸಲಾತಿಗೆ ಕತ್ತರಿ ಪ್ರಯೋಗ ಮಾಡಿ ಒಕ್ಕಲಿಗರಿಗೆ ಹಾಗೂ ವೀರಶೈವ ಲಿಂಗಾಯತರಿಗೆ ತಲಾ ಎರಡು ಪ್ರತಿಶತದಷ್ಟು ಹಂಚಿಕೆ ಮಾಡಿ ರಾಜ್ಯ ಸಚಿವ ಸಂಪುಟ ಮಹತ್ವದ ನಿರ್ಧಾರ ಕೈಗೊಂಡಿದೆ.
ಪ್ರಸ್ತುತ, ಒಕ್ಕಲಿಗರು 4 ಪ್ರತಿಶತ ಮತ್ತು ಲಿಂಗಾಯತರು 5 ಪ್ರತಿಶತ ಮೀಸಲಾತಿ ಹೊಂದಿದ್ದಾರೆ. ಕ್ಯಾಬಿನೆಟ್ ನಿರ್ಧಾರದ ನಂತರ, ಒಕ್ಕಲಿಗರು ಕ್ರಮವಾಗಿ 2 (ಸಿ) ಮತ್ತು 2 (ಡಿ) ಅಡಿಯಲ್ಲಿ ಕ್ರಮವಾಗಿ ಶೇಕಡಾ 6 ರಷ್ಟು ಮೀಸಲಾತಿ ಮತ್ತು ಲಿಂಗಾಯತರು ಶೇಕಡಾ 7 ರಷ್ಟು ಮೀಸಲಾತಿಯನ್ನು ಪಡೆಯುತ್ತಾರೆ. ಈ ಸಮುದಾಯಗಳು ಈ ಹಿಂದೆ 3A ಮತ್ತು 3B ವರ್ಗಗಳ ಅಡಿಯಲ್ಲಿದ್ದರು, ಅದನ್ನು ರದ್ದುಗೊಳಿಸಲಾಗಿದೆ.

ಹೀಗೆ ಮೀಸಲಾತಿ ಹೆಚ್ಚಳ ಬಯಸಿದ್ದ ರಾಜಕೀಯವಾಗಿ ಪ್ರಬಲವಾಗಿರುವ ಸಮುದಾಯಗಳನ್ನು ಸಮಾಧಾನಪಡಿಸಲು ಬಿಜೆಪಿ ಸರ್ಕಾರವು ಪ್ರಯತ್ನಿಸಿದೆ. ಸರ್ಕಾರವು ವಿಶೇಷವಾಗಿ ಲಿಂಗಾಯತರಲ್ಲಿ ಸಂಖ್ಯಾತ್ಮಕವಾಗಿ ಪ್ರಬಲವಾದ ಉಪ-ಪಂಗಡವಾದ ಪಂಚಮಸಾಲಿ ಸಮುದಾಯದಿಂದ ತೀವ್ರ ಒತ್ತಡಕ್ಕೆ ಒಳಗಾಗಿತ್ತು. 10 % ಇಡಬ್ಲ್ಯೂಎಸ್ ಕೋಟಾದಡಿಯಲ್ಲಿ ಇರುವ ಬ್ರಾಹ್ಮಣರು, ಜೈನರು, ಆರ್ಯ ವೈಶ್ಯರು, ನಗರ್ತರು ಮತ್ತು ಮುದಲಿಯಾರ್‌ಗಳ ಜೊತೆಗೆ ಮುಸ್ಲಿಮರು ಈಗ ಪೈಪೋಟಿ ನಡೆಸಬೇಕಿದೆ.
"ಸಂವಿಧಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಿಗೆ ಮೀಸಲಾತಿ ಇಲ್ಲ. ಯಾವುದೇ ರಾಜ್ಯದಲ್ಲೂ ಇಲ್ಲ. ಆಂಧ್ರಪ್ರದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಿಗೆ ಮೀಸಲಾತಿಯನ್ನು ನ್ಯಾಯಾಲಯ ರದ್ದುಪಡಿಸಿತು. ಬಿ.ಆರ್. ಅಂಬೇಡ್ಕರ್ ಕೂಡ ಜಾತಿಗಳಿಗೆ ಮೀಸಲಾತಿ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಈ ಸಮುದಾಯದವರನ್ನು ಕೈಬಿಟ್ಟರೆ ಅವರು ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆ ಇದೆ. ಅದಕ್ಕಾಗಿ, ಮುಸ್ಲಿಮರನ್ನು ಆರ್ಥಿಕವಾಗಿ ದುರ್ಬಲ ವರ್ಗದ ಪಟ್ಟಿಗೆ ಸೇರಿಸಲಾಗಿದೆ. ಅಲ್ಪಸಂಖ್ಯಾತರಿಗೆ ಸಹ ಒಬಿಸಿ ಮೀಸಲಾತಿಯನ್ನು ಪಡೆಯಲು ಆರ್ಥಿಕ ಮಾನದಂಡಗಳಿವೆ " ಎಂದು ಬಸವರಾಜ ಬೊಮ್ಮಾಯಿ ವಿವರಿಸಿದ್ದಾರೆ.
ಇದರ ಜೊತೆಗೆ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಅಧ್ಯಯನ ಮಾಡಿದ್ದ ಸಂಪುಟ ಉಪಸಮಿತಿ ಪರಿಶಿಷ್ಟ ಜಾತಿಗೆ ಒಳಮೀಸಲಾತಿ ಕುರಿತು ಮಾಡಿರುವ ಶಿಫಾರಸುಗಳನ್ನು ಅಂಗೀಕರಿಸಲು ಸಂಪುಟ ಸಭೆ ನಿರ್ಧರಿಸಿದೆ.












Click it and Unblock the Notifications