ನೂತನ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ಗೆ ಶುಭಾಶಯ ಕೋರಿದ ನಾಯಕರು
ಬೆಂಗಳೂರು, ಜುಲೈ 6: ಕರ್ನಾಟಕ ಸೇರಿದಂತೆ 8 ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಕ ಮಾಡಲಾಗಿದ್ದು, ಕರ್ನಾಟಕದ ನೂತನ ರಾಜ್ಯಪಾಲರಾಗಿ ಥಾವರ್ ಚಂದ್ ಗೆಹ್ಲೋಟ್ ನೇಮಕವಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವರಾಗಿದ್ದ 73 ವರ್ಷದ ಥಾವರ್ ಚಂದ್ ಗೆಹ್ಲೋಟ್, ನಾಲ್ಕು ಬಾರಿ ಸಂಸದರಾಗಿದ್ದರು.
ಕರ್ನಾಟಕ ರಾಜ್ಯಪಾಲರಾಗಿ ನೇಮಕಗೊಂಡ ಥಾವರ್ ಚಂದ್ ಗೆಹ್ಲೋಟ್‌ಗೆ ಸಿಎಂ ಯಡಿಯೂರಪ್ಪ ಸೇರಿ ಹಲವು ರಾಜಕೀಯ ನಾಯಕರು ಶುಭಾಶಯ ತಿಳಿಸಿ, ಆತ್ಮೀಯವಾಗಿ ಸ್ವಾಗತಿಸಿದ್ದಾರೆ.

ಸಿಎಂ ಯಡಿಯೂರಪ್ಪ ಶುಭಾಶಯ
"ಕರ್ನಾಟಕದ ನೂತನ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್‌ಗೆ ನನ್ನ ಆತ್ಮೀಯ ಸ್ವಾಗತ. ಗೆಹ್ಲೋಟ್‌ರವರ ಸಾರ್ವಜನಿಕ ಜೀವನದಲ್ಲಿ ಸುದೀರ್ಘ ಅನುಭವ ಮತ್ತು ಸಾಮಾಜಿಕ ನ್ಯಾಯದ ಬದ್ಧತೆಯಿಂದ ರಾಜ್ಯವು ಪ್ರಯೋಜನ ಪಡೆಯಲಿದೆ. ಅದೇ ರೀತಿ ಇಲ್ಲಿಯವರೆಗೆ ಕರ್ನಾಟಕಕ್ಕೆ ನೀಡಿದ ಕೊಡುಗೆಗಾಗಿ ನಿರ್ಗಮಿತ ರಾಜ್ಯಪಾಲರಾದ ವಜುಭಾಯ್ ವಾಲಾ ಜಿಗೆ ಧನ್ಯವಾದ ಅರ್ಪಿಸುತ್ತೇನೆ,'' ಎಂದು ಸಿಎಂ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.
ಡಿ.ಕೆ. ಶಿವಕುಮಾರ್ ಶುಭಾಶಯ
"ಕರ್ನಾಟಕದ ನೂತನ ರಾಜ್ಯಪಾಲರಾಗಿ ನೇಮಕವಾದ ಥಾವರ್ ಚಂದ್ ಗೆಹ್ಲೋಟ್‌ಗೆ ಹಾರ್ದಿಕ ಶುಭಾಶಯಗಳು. ಇದುವರೆಗೆ ಕರ್ನಾಟಕದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ ವಜುಭಾಯ್ ವಾಲಾರ ಭವಿಷ್ಯದ ಕಾರ್ಯಗಳಿಗೆ ಶುಭ ಕೋರುತ್ತೇನೆ,'' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಆರೋಗ್ಯ ಸಚಿವ ಸುಧಾಕರ್
"ಕರ್ನಾಟಕದ ನೂತನ ರಾಜ್ಯಪಾಲರಾಗಿ ನೇಮಕಗೊಂಡ ಥಾವರ್ ಚಂದ್ ಗೆಹ್ಲೋಟ್‌ರಿಗೆ ಹೃತ್ಪೂರ್ವಕ ಶುಭಾಶಯಗಳು,'' ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ಹೇಳಿದ್ದಾರೆ.
ಪ್ರಹ್ಲಾದ್ ಜೋಶಿ ಭೇಟಿ
ಕರ್ನಾಟಕದ ನೂತನ ರಾಜ್ಯಪಾಲರಾಗಿ ಥಾವರ್ ಚಂದ್ ಗೆಹ್ಲೋಟ್ ನೇಮಕಗೊಂಡಿದ್ದರಿಂದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿಯು ಥಾವರ್ ಚಂದ್ ಗೆಹ್ಲೋಟ್ ನಿವಾಸದಲ್ಲಿ ಸ್ವಾಗತಿಸಿ, ಶುಭಾಶಯ ತಿಳಿಸಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಶುಭಾಶಯ
"ಕರ್ನಾಟಕದ ರಾಜ್ಯಪಾಲರಾಗಿ ನೇಮಕಗೊಂಡಿದ್ದಕ್ಕಾಗಿ ಕೇಂದ್ರ ಸಚಿವ ಥಾವರ್ ಚಂದ್ ಗೆಹ್ಲೋಟ್‌ಗೆ ಅಭಿನಂದನೆಗಳು. ಹೊಸ ಪಾತ್ರದಲ್ಲಿ ಅವರ ಯಶಸ್ಸನ್ನು ಬಯಸುತ್ತೇನೆ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯಲು ಅವರು ಶ್ರದ್ಧೆಯಿಂದ ಕೆಲಸ ಮಾಡುತ್ತಾರೆಂದು ನಾನು ಭಾವಿಸುತ್ತೇನೆ," ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು
"ಕರ್ನಾಟಕದ ನೂತನ ರಾಜ್ಯಪಾಲರಾಗಿ ಆಯ್ಕೆಯಾಗಿರುವ ಥಾವರ್ ಚಂದ್ ಗೆಹ್ಲೋಟ್‌ಗೆ ಅಭಿನಂದನೆಗಳು. ನಿಮ್ಮನ್ನು ರಾಜ್ಯಕ್ಕೆ ಸ್ವಾಗತಿಸುವ ಜೊತೆಗೆ ಹೊಸ ಜವಾಬ್ದಾರಿ ಹೊತ್ತ ನಿಮಗೆ ಶುಭವಾಗಲಿ ಎಂದು ಆಶಿಸುತ್ತೇ," ಎಂದು ಸಚಿವ ಶ್ರೀರಾಮುಲು ತಿಳಿಸಿದ್ದಾರೆ.












Click it and Unblock the Notifications