KSRTC Bus: ದಸರಾ ಪ್ರಯುಕ್ತ ಇಲ್ಲಿಂದ 280 ಹೆಚ್ಚುವರಿ ಬಸ್‌ಗಳ ಕಾರ್ಯಾಚರಣೆ, ವೇಳಾಪಟ್ಟಿ
ಬೆಂಗಳೂರು, ಸೆಪ್ಟಂಬರ್ 27: ದಸರಾ ಹಬ್ಬದ ಸಡಗರ ಜೋರಾಗಿದೆ. ಬೆಂಗಳೂರು ಮತ್ತು ಮೈಸೂರು ಸೇರಿದಂತೆ ರಾಜ್ಯಾದ್ಯಂತ ದಸರಾ ಸಂಭ್ರಮ ಮನೆ ಮಾಡಿದೆ. ಈ ಸಂಬಂಧ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ವಿಶೇಷ ಬಸ್‌ಗಳ ಬಿಟ್ಟಿದೆ. ಇದೀಗ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಮೈಸೂರು ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ದಸರಾ ವಿಶೇಷ ಬಸ್‌ಗಳ ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ.
ನಾಡ ಹಬ್ಬ ಮೈಸೂರು ದಸರಾಗಾಗಿ ಪ್ರಯಾಣಿಕರ ಬೇಡಿಕೆಯಾನುಸಾರ ಸಾರಿಗೆ ಸೌಲಭ್ಯವನ್ನು ಕಲ್ಪಿಸಲಾಗಿದೆ. ಬೆಂಗಳೂರಿನ ಸ್ಯಾಟ್‌ಲೈಟ್ ಬಸ್ ನಿಲ್ದಾಣದಿಂದ ನೀವು ಮೈಸೂರಿಗೆ ತೆರಳಬಹುದು. ಮುಂದಿನ 10 ದಿನಗಳವರೆಗೆ ಮೈಸೂರು ರಸ್ತೆ ಬಸ್ ನಿಲ್ದಾಣದಲ್ಲಿ ದಸರಾ ಕ್ಯಾಂಪ್ ಇರಲಿದೆ. ಬೆಂಗಳೂರು ಕೇಂದ್ರೀಯ ವಿಭಾಗ, ರಾಮನಗರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ವಿಭಾಗಗಳಿಂದ ಒಟ್ಟು 280 ಹೆಚ್ಚುವರಿ ಬಸ್‌ಗಳನ್ನು ಕಾರ್ಯಾಚರಣೆ ಮಾಡುತ್ತವೆ.

ಈ ಸಂದರ್ಭದಲ್ಲಿ ಮುಖ್ಯ ಸಂಚಾರ ವ್ಯವಸ್ಥಾಪಕರು (ಕಾರ್ಯಾಚರಣೆ), ಮುಖ್ಯ ಭದ್ರತಾ ಮತ್ತು ಜಾಗ್ರತಾಧಿಕಾರಿ, ಮುಖ್ಯ ಸಂಚಾರ ವ್ಯವಸ್ಥಾಪಕರು (ವಾಣಿಜ್ಯ) ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಕೆಂಪೇಗೌಡ ಬಸ್ ನಿಲ್ದಾಣ, ವಿಭಾಗೀಯ ನಿಯಂತ್ರಣಾಧಿಕಾರಿ ಬೆಂಗಳೂರು ಕೇಂದ್ರೀಯ ವಿಭಾಗ ಹಾಗೂ ಅಧಿಕಾರಿ ಸಿಬ್ಬಂದಿ ವರ್ಗದವರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಚಾಲಕ ನಿರ್ವಾಹಕರಿಗೆ ಹಾಗೂ ಪ್ರಯಾಣಿಕರಿಗೆ ಸಿಹಿ ವಿತರಿಸಿದರು.
ದಸರಾ ಪ್ರಯುಕ್ತ 2300 ಬಸ್‌ಗಳ ಸಂಚಾರ
ಬೆಂಗಳೂರು ಮಾತ್ರವಲ್ಲದೇ ಮೈಸೂರು ಹಾಗೂ ಮೈಸೂರು ಸುತ್ತಮುತ್ತಲಿನ ಜಿಲ್ಲೆಗಳಿಂದ ವಿಶೇಷ ಬಸ್‌ಗಳನ್ನು ಬಿಡಲಾಗಿದೆ. ದಸರಾ ಪ್ರಯುಕ್ತ ರಾಜ್ಯದ ವಿವಿಧೆಡೆ 2300 ಬಸ್‌ಗಳನ್ನು ಸಾರಿಗೆ ಸಂಸ್ಥೆ ಬಿಡುಗಡೆ ಮಾಡಿದೆ. ವೇಗದೂತ, ರಾಜಹಂಸ, ಸ್ಲೀಪರ್, ಐರಾವತ ಹಾಗೂ ಐರಾವತ ಕ್ಲಬ್ ಕ್ಲಾಸ್, ಪಲ್ಲಕ್ಕಿ ಸೇರಿದಂತೆ ಸಾರಿಗೆ ಬಸ್‌ಗಳು ಒಡಾಡಲಿವೆ.
ಸೆಪ್ಟಂಬರ್ 30ರವರೆಗೆ ವಿವಿಧ ಕಡೆಗಳಿಗೆ ಬಸ್‌ಗಳು ಸಂಚಾರ ಮಾಡಲಿವೆ. ಅಕ್ಟೋಬರ್ 2ರಿಂದ 5ರವರೆಗೆ ಬೆಂಗಳೂರಿಗೆ ಮತ್ತೆ ಮರಳಿ ಬಸ್‌ಗಳು ಬರಲಿವೆ. ಕರ್ನಾಟಕ ಮಾತ್ರವಲ್ಲದೇ, ಬೇರೆ ಬೇರೆ ರಾಜ್ಯಗಳವರೆಗೂ ಬಸ್ ಕಾರ್ಯಾಚರಣೆ ಮಾಡಲಿವೆ. ಪ್ರಯಾಣಿಕರು ಕೆಎಸ್‌ಆರ್‌ಟಿಸಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಟಿಕೆಟ್ ಕಾಯ್ದಿರಿಸಬೇಕು.












Click it and Unblock the Notifications