ಬಿಬಿಎಂಪಿ ವಿಭಜನೆ ವಿರೋಧಿಸಿ ದೇವೇಗೌಡ ಪಾದಯಾತ್ರೆ
ಬೆಂಗಳೂರು, ಏ. 9: ಬಿಬಿಎಂಪಿ ವಿಭಜನೆಗೆ ಮುಂದಾಗಿರುವ ಸರ್ಕಾರದ ಕ್ರಮಕ್ಕೆ ಜೆಡಿಎಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ರಾಜ್ಯಪಾಲರು ಕಡತಕ್ಕೆ ಸಹಿ ಹಾಕವಬಾರದು ಎಂದು ಒತ್ತಾಯಿಸಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಜೆಡಿಎಸ್ ಗುರುವಾರ ಪ್ರತಿಭಟನಾ ಮೆರವಣಿಗೆ ನಡೆಸಿತು.
ನಗರದ ಶೇಷಾದ್ರಿಪುರಂನ ಹೊಸ ಕಚೇರಿಯಿಂದ ಆರಂಭವಾದ ಮೆರವಣಿಗೆ ಫ್ರೀಡಂ ಪಾರ್ಕ್ ವರೆಗೆ ತೆರಳಿ ಸಮಾವೇಶಗೊಂಡಿತು. ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ದೇವೇಗೌಡರು, ಬಿಬಿಎಂಪಿ ವಿಭಜನೆ ಮಾಡಿದರೆ ಸಾಮರಸ್ಯ ಕದಡುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಪಾಲಿಕೆ ಚುನಾವಣೆಯನ್ನು ಮುಂದೂಡುವುದೇ ಸರ್ಕಾರದ ತಂತ್ರ. ಅದಕ್ಕಾಗಿ ಈ ರೀತಿಯ ಅವೈಜ್ಞಾನಿಕ ಸುಗ್ರೀವಾಜ್ಞೆ, ಮೀಸಲು ಪಟ್ಟಿ ಪ್ರಕಟ ಮಾಡಹೊರಟಿದೆ ಎಂದು ದೇವೆಗೌಡ ಗಂಭೀರ ಆರೋಪ ಮಾಡಿದರು.[ಜೆಡಿಎಸ್ ಕಚೇರಿಯಲ್ಲಿ ಗೌಡರಿಂದ ಸುದರ್ಶನ ಹೋಮ]
ಮೆರವಣಿಗೆಯಲ್ಲಿ ಶಾಸಕ ಗೋಪಾಲಯ್ಯ, ವಿಧಾನಪರಿಷತ್ ಸದಸ್ಯ ಶರವಣ, ಅಖಂಡ ಶ್ರೀನಿವಾಸಮೂರ್ತಿ, ಬಿಬಿಎಂಪಿ ಸದಸ್ಯರಾದ ಆರ್.ಪ್ರಕಾಶ್, ಹನುಮಂತೇಗೌಡ, ಗೋವಿಂದೇಗೌಡ, ಪದ್ಮಾವತಿ ಶ್ರೀನಿವಾಸ್ ಮತ್ತಿತರರು ಭಾಗವಹಿಸಿದ್ದರು.

ದೆಹಲಿ ಕತೆ ಏನಾಗಿದೆ?
ದೆಹಲಿಯಲ್ಲಿ ಪಾಲಿಕೆಯನ್ನು ಮೂರು ಭಾಗ ಮಾಡಿ ಆಡಳಿತ ಅತಂತ್ರವಾಗಿದೆ. ಪಾಲಿಕೆ ಹೋಳು ಮಾಡಿದರೆ ಆಡಳಿತ ಸುಗಮವಾಗಲ್ಲ. ಬದಲಗಿ ಮತ್ತಷ್ಟು ಗೊಂದಲ ಉಂಟಾಗಿ ಭ್ರಷ್ಟಾಚಾರ ಹೆಚ್ಚುತ್ತದೆ ಎಂದು ಗೌಡರು ಕಿಡಿಕಾರಿದರು.

ಪ್ರತ್ಯೇಕತಾ ಕೂಗು ಸಲ್ಲ
ಬೆಂಗಳೂರು ಸಂಸ್ಥಾಪಕ ಕೆಂಪೇಗೌಡರ ದೂರದೃಷ್ಟಿಯಂತೆ ಬೆಂಗಳೂರು ಅಖಂಡವಾಗಿಯೇ ಇರಬೇಕು. ಈಗಾಗಲೇ ಉತ್ತರ ಕರ್ನಾಟಕದಲ್ಲಿ ಪ್ರತ್ಯೇಕತಾ ಕೂಗು ಶುರುವಾಗಿದೆ. ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ದೊಡ್ಡ ಅಪಾಯ ಕಾದಿದೆ. ಇಂಥ ಬೆಳವಣಿಗೆಗಳು ರಾಜ್ಯದ ಅಖಂಡತೆಗೆ ಭಂಗ ತರುತ್ತವೆ ಎಂದು ದೇವೆಗೌಡ ಆರೋಪಿಸಿದರು.

ಮೆರವಣಿಗೆ ನಡೆಸಿದ ಗೌಡರು
ಇಳಿವಯಸ್ಸಿನಲ್ಲೂ ಶೇಷಾದ್ರಿಪುರಂ ಕಚೇರಿಯಿಂದ ಕಾಲ್ನಡಿಗೆಯಲ್ಲಿ ಸಾಗಿದ ಗೌಡರು ಸರ್ಕಾರದ ಕ್ರಮವನ್ನು ಖಂಡಿಸಿದರು. ಸರ್ಕಾರದ ಕುತಂತ್ರಗಳಿಗೆ ಜನರು ಕಿವಿ ಕೊಡಬಾರದು ಎಂದು ಹೇಳಿದರು.

ಜನ ವಿರೋಧಿಸಬೇಕು
ಕಾಂಗ್ರಸ್ ಸರ್ಕಾರದ ಇಂಥ ಕುತಂತ್ರಗಳಿಗೆ ರಾಜ್ಯದ ಜನ ತಕ್ಕ ಉತ್ತರ ಕಲಿಸಲಿದ್ದಾರೆ. ಬೆಂಗಳೂರು ಒಡೆಯುವುದು ಅವರಿಗೆ ಮುಖ್ಯವಲ್ಲ, ಚುನಾವಣೆ ಮುಂದೂಡುವುದೇ ಕಾಂಗ್ರೆಸ್ ಗೆ ಮುಖ್ಯ. ರಾಜ್ಯಪಾಲರು ಯಾವ ಕಾರಣಕ್ಕೂ ಇಂಥ ಪ್ರಕರಣಗಳಿಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.












Click it and Unblock the Notifications