LED ಲೈಟ್ ಅಳವಡಿಸಿಕೊಂಡ ವಾಹನ ಸವಾರರ ಗಮನಕ್ಕೆ, ದಂಡ ಕಟ್ಟಲು ಸಜ್ಜಾಗಿ
ಬೆಂಗಳೂರು, ಜೂನ್ 20: ರಸ್ತೆ ಅಪಘಾತಗಳನ್ನು ತಪ್ಪಿಸಲು 'ಕೇಂದ್ರ ಮೋಟಾರು ವಾಹನಗಳ ನಿಯಮ'ಗಳ ಅಡಿಯಲ್ಲಿ ಅನುಮತಿ ನೀಡಿರುವ ದೀಪಗಳನ್ನು (ಹೆಡ್‌ಲೈಟ್) ಮಾತ್ರ ವಾಹನಗಳಿಗೆ ಅಳವಡಿಸಬೇಕು. ಎಲ್‌ಇಡಿ ನಿರ್ಬಂಧಿಸಿರುವ ಬಗ್ಗೆ ಆದೇಶ ಹೊರಡಿಸಿದ್ದಾರೆ. ಪಾಲನೆ ಆಗದಿದ್ದರೆ ಜುಲೈನಿಂದ ದಂಡ ಹೇರಿಕೆ ಪ್ರಕ್ರಿಯೆ ಆರಂಭವಾಗಲಿದೆ.
ಈ ಕುರಿತು ಕರ್ನಾಟಕ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಸಂಚಾರ ಮತ್ತು ರಸ್ತೆ ಸುರಕ್ಷತೆ) ಅಲೋಕ್ ಕುಮಾರ್ ಅವರು ಮಾಹಿತಿ ನೀಡಿದ್ದಾರೆ. ಹೆಚ್ಚು ಬೆಳಕು ನೀಡುವ ಈ LED ಲೈಟ್ಸ್‌ಗಳನ್ನು ನಿಮ್ಮ ವಾಹನಗಳಿಗೆ ಅಳವಡಿಕೆ ಮಾಡುವುದರಿಂದ ಎದುರುಗಡೆ ಬರುವ ವಾಹನ ಸವಾರರಿಗೆ ತೊಂದರೆ ಆಗುತ್ತಿದೆ. ಆದ್ದರಿದ ಈ ಲೈಟ್‌ಗಳ ಅಳವಡಿಕೆಗೆ ನಿರ್ಬಂಧ ವಿಧಿಸಲಾಗಿದೆ ಎಂದು ಅವರು ವಿವರಿಸಿದರು.

ವಾಹನ ಸವಾರರಿಗೆ ಅನಾನುಕುಲ
ಲೈಟ್ ಬ್ಯಾನ್ ಬಗ್ಗೆ ಮಾತನಾಡುತ್ತಿಲ್ಲ. ವಾಹನಗಳಿಗೆ ಹೆಚ್ಚು ಹೊಳೆಯುವ ದೀಪಗಳ ಅಳವಡಿಕೆ ಮಾಡಿದರೆ, ಬಳಸಿದರೆ ಅದು ರಾತ್ರಿ ವೇಳೆ ಮುಂಬರುವ ಚಾಲಕರಿಗೆ ಅನಾನುಕೂಲತೆ ಮಾಡುತ್ತಿದೆ. ಈ ಬಗ್ಗೆ ಅನೇಕ ಅಪಘಾತ ಪ್ರಕರಣಳನ್ನು ದಾಖಲಿಸುವಾಗ ಮಾಹಿತಿ ಪಡೆದಿದ್ದೇವೆ.
ಇತರ ಚಾಲಕರ ಮೇಲೆ ಅನಾನುಕೂಲತೆ ಉಂಟು ಮಾಡುವ, ಪ್ರಜ್ವಲಿಸುವ ಪರಿಣಾಮವನ್ನು ಉಂಟುಮಾಡುವ ಎಲ್ಇಡಿ ದೀಪಗಳನ್ನು ವಾಹನಗಳಿಗೆ ಅಳವಡಿಸಿಕೊಳ್ಳದಂತೆ ಸೂಚನೆ ನೀಡಲಾಗಿದೆ. ಒಂದು ವೇಳೆ ನೀವು ನಿಯಮ ಉಲ್ಲಂಘಿಸಿ ಅಳವಡಿಸಿಕೊಂಡರೆ ಅಪಘಾತಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದರು.

ಮಾರ್ಗಸೂಚಿ ಪಾಲಿಸುವಂತೆ ಸೂಚನೆ
ರಸ್ತೆಯಲ್ಲಿ ಇತ್ತೀಚಿನ ದಿನಗಳಲ್ಲಿ ಲಾರಿ, ಟ್ರಕ್, ಕಾರು, ಅಷ್ಟೇ ಅಲ್ಲದೇ ಬೈಕ್‌ಗಳೂ ಸಹ ಎಲ್‌ಇಡಿ ಲೈಟ್‌ಗಳನ್ನು ಅಳವಡಿಸಿಕೊಂಡಿದ್ದನ್ನು ನೋಡಬಹುದು. ಇವುಗಳ ಪ್ರಖರ ಬೆಳಕು ಇನ್ನಿತರ ವಾಹನಗಳ ಚಾಲಕರಿಗೆ ತೊಂದರೆ ಕೊಡುತ್ತಿವೆ. ಕಣ್ಣಿಗೆ ಕುಕ್ಕುತ್ತವೆ. ಆದ್ದರಿಂದ ಇನ್ನು ಮುಂದೆ ಇಂತಹ ಲೈಟ್‌ಗಳನ್ನು ಬಳಸಬಾರದು. ಎಲ್ಲ ವಾಹನಗಳ ಚಾಲಕರು ಕೇಂದ್ರ ಮೋಟಾರು ವಾಹನ ಕಾಯ್ದೆಯಂತೆ ಮಾರ್ಗಸೂಚಿ ಪಾಲನೆ ಮಾಡಬೇಕು ಎಂದು ಅಲೋಕ್ ಕುಮಾರ್ ಅವರು ತಿಳಿಸಿದ್ದಾರೆ.
ಮಾರ್ಗಸೂಚಿ ಪಾಲಿಸದಿದ್ದರೆ ಐವಿಎಂ ಕಾಯ್ದೆ ಕಲಂ 177 ರಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು. ವಾಹನಗಳ ತಪಾಸಣೆ ಕಾರ್ಯಾಚರಣೆ ನಡೆಸಿ ಜುಲೈ 31ರಂದು ವರದಿ ಸಲ್ಲಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ.












Click it and Unblock the Notifications