DA ಕೇಸ್: ಸಚಿವ ವಿ.ಸೋಮಣ್ಣ ವಿರುದ್ಧದ ಸಮನ್ಸ್ ರದ್ದು
ಬೆಂಗಳೂರು, ಸೆ.5: ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಸಂಬಂಧ ವಸತಿ ಸಚಿವ ವಿ.ಸೋಮಣ್ಣ ಸದ್ಯಕ್ಕೆ ಬಚಾವಾಗಿದ್ದಾರೆ. ಅವರ ವಿರುದ್ಧ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಜಾರಿಗೊಳಿಸಿದ್ದ ಸಮನ್ಸ್ ಅನ್ನು ಹೈಕೋರ್ಟ್ ರದ್ದುಪಡಿಸಿದೆ. ಅಲ್ಲದೆ, ಪ್ರಕರಣವನ್ನು ಮತ್ತೆ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಿರುವ ನ್ಯಾಯಾಲಯ ಹೊಸದಾಗಿ ವಿಚಾರಣೆ ನಡೆಸಿ ತೀರ್ಪು ನೀಡುವಂತೆ ಸೂಚಿಸಿದೆ.
ಜನಪ್ರತಿನಿಧಿಗಳ ವಿಶೇಷ ಕೋರ್ಟ್ ತಮ್ಮ ವಿರುದ್ಧ ಜಾರಿಗೊಳಿಸಿರುವ ಸಮನ್ಸ್ ರದ್ದುಪಡಿಸುವಂತೆ ಕೋರಿ ಸಚಿವ ವಿ.ಸೋಮಣ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಸುನಿಲ್ ದತ್ತ ಯಾದವ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ಮಾಡಿದೆ.
ವಾದ-ಪ್ರತಿವಾದ ಆಲಿಸಿದ ಬಳಿಕ ಹೈಕೋರ್ಟ್, ಸಚಿವರ ವಿರುದ್ಧದ ಸಮನ್ಸ್ ರದ್ದುಪಡಿಸಿ ಪ್ರಕರಣವನ್ನು ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಿದೆ. ಅಲ್ಲದೆ, ತನಿಖೆಯು ಕುರಿತು ತನಿಖಾಧಿಕಾರಿಯಿಂದ ಸ್ಪಷ್ಟನೆ ಪಡೆದು, ಪ್ರಕರಣವನ್ನು ಹೊಸದಾಗಿ ವಿಚಾರಣೆ ನಡೆಸಿ ಕಾನೂನು ಪ್ರಕಾರ ನಿರ್ಣಯ ಕೈಗೊಳ್ಳುವಂತೆ ನಿರ್ದೇಶನ ನೀಡಿದೆ.

ಪ್ರಕರಣದ ವಿವರ: ನಗರದ ನಿವಾಸಿ ರಾಮಕೃಷ್ಣ ಎಂಬುವರು 2013ರಲ್ಲಿ ಲೋಕಾಯುಕ್ತ ನ್ಯಾಯಾಲಯದಲ್ಲಿ ಸಚಿವ ಸೋಮಣ್ಣ ಆದಾಯ ಮೀರಿ ಆಸ್ತಿ ಗಳಿಸಿದ್ದಾರೆ ಎಂದು ಆರೋಪಿಸಿ ಖಾಸಗಿ ದೂರು ದಾಖಲಿಸಿದ್ದರು. ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯ ತನಿಖೆಗೆ ಆದೇಶಿಸಿತ್ತು. ಅದರಂತೆ ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು, ದೂರುದಾರರ ಆರೋಪದಲ್ಲಿ ಯಾವುದೇ ಹುರಳಿಲ್ಲ ಎಂದು ತಿಳಿಸಿ ಬಿ ರಿಪೋರ್ಟ್ ಸಲ್ಲಿಸಿದ್ದರು.
ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿದ್ದರು. ಸೋಮಣ್ಣ ಯಾವುದೇ ರೀತಿಯಲ್ಲಿ ಅಕ್ರಮ ಆಸ್ತಿ ಗಳಿಸಿಲ್ಲ ಎಂದು ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ 'ಬಿ' ವರದಿ ಸಲ್ಲಿಸಿದ್ದರು. ಲೋಕಾಯುಕ್ತ ಪೊಲೀಸರ ಈ ವರದಿಯನ್ನು ತಿರಸ್ಕರಿಸಿರುವ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇದೀಗ ಸಮನ್ಸ್ ಜಾರಿ ಮಾಡಿತ್ತು.
ಆದರೆ, ತನಿಖೆ ಅಸಮರ್ಪಕವಾಗಿದೆ. ಸೋಮಣ್ಣ ಶಾಸಕರಾಗುವ ಮೊದಲು ಹೊಂದಿದ್ದ ಆದಾಯ ಹಾಗೂ ಶಾಸಕರಾದ ನಂತರ ಹೊಂದಿದ ಆದಾಯ ಮತ್ತು ಆಸ್ತಿ ಕುರಿತು ತನಿಖಾಧಿಕಾರಿಗಳು ಸೂಕ್ತ ವಿವರಣೆ ನೀಡಿಲ್ಲ ಎಂದು ಅಭಿಪ್ರಾಯಪಟ್ಟಿದ್ದ ಲೋಕಾಯುಕ್ತ ನ್ಯಾಯಾಲಯವು ಬಿ ರಿಪೋರ್ಟ್ ಅನ್ನು ರದ್ದುಗೊಳಿಸಿತ್ತು.
ವಿ. ಸೋಮಣ್ಣ ಶಾಸಕರಾಗುವ ಮೊದಲಿನ ಆದಾಯ, ನಂತರದ ಆದಾಯ, ಗಳಿಸಿದ ಆಸ್ತಿಯ ಸೂಕ್ತ ವಿವರಗಳನ್ನು ಲೋಕಾಯುಕ್ತ ಪೊಲೀಸರು ತನಿಖಾ ವರದಿಯಲ್ಲಿ ಉಲ್ಲೇಖಿಸಿಲ್ಲ. ಲೋಕಾಯುಕ್ತ ಪೊಲೀಸರು ಅಸಮರ್ಥ ತನಿಖೆ ನಡೆಸಿದ್ದಾರೆ ಎಂದು ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿತ್ತು. ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಲೋಕಾಯುಕ್ತ ಪೊಲೀಸರ ತನಿಖೆಯನ್ನು ತಿರಸ್ಕರಿಸಿ ಸಮನ್ಸ್ ಜಾರಿಗೊಳಿಸಿತ್ತು.
ಜತೆಗೆ, ನ್ಯಾಯಾಲಯ ವಿಚಾರಣೆಗೆ ಹಾಜರಾಗುವಂತೆ ಸೋಮಣ್ಣ ಅವರಿಗೆ ಸಮನ್ಸ್ ಜಾರಿಗೊಳಿಸಿತ್ತು. ಈ ಆದೇಶ ರದ್ದು ಕೋರಿ ಸೋಮಣ್ಣ ಹೈಕೋರ್ಟ್ ಮೊರೆ ಹೋಗಿದ್ದರು. ಹಿಂದೆ ಸಮನ್ಸ್ ಗೆ ತಡೆ ನೀಡಿದ್ದ ನ್ಯಾಯಾಲಯ ಇದೀಗ ಅರ್ಜಿ ಪುರಸ್ಕರಿಸಿ ಸಮನ್ಸ್ ರದ್ದು ಮಾಡಿದೆ.












Click it and Unblock the Notifications