ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಪಿ.ಬಿ ವರಾಳೆ : ಕೊಲಿಜಿಯಂ
ಬೆಂಗಳೂರು, ಜನವರಿ 20: ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲು ಸುಪ್ರೀಂ ಕೋರ್ಟ್ ಕೊಲಿಜಿಯಂನಲ್ಲಿ ತೀರ್ಮಾನಿಸಿದೆ.
ಅಲ್ಲದೇ ಪಿ.ಬಿ.ವರಾಳೆ ಅವರ ಪದೋನ್ನತಿಯಿಂದ ತೆರವಾಗುವ ಹೈಕೋರ್ಟ್ ಸಿಜೆ ಸ್ಥಾನಕ್ಕೆ ಹೈಕೋರ್ಟ್‌ನಲ್ಲಿಹಾಲಿ ಎರಡನೇ ಹಿರಿಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿರುವ ಪಿ.ಎಸ್.ದಿನೇಶ್ ಕುಮಾರ ಅವರನ್ನು ನೇಮಕ ಮಾಡಲು ಸುಪ್ರೀಂ ಕೋರ್ಟ್ ನಿರ್ಧರಿಸಲಾಗಿದೆ.

ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸುಪ್ರೀಂ ಕೋರ್ಟ್ ಕೊಲಿಜಿಯಂನಲ್ಲಿಈ ತೀರ್ಮಾನ ಕೈಗೊಳ್ಳಲಾಗಿದೆ.
ಎಲ್ಲ ರೀತಿಯಲ್ಲೂ ಅರ್ಹ
ಸುಪ್ರೀಂ ಕೋರ್ಟ್ ನ್ಯಾ. ಸಂಜಯ್ ಕಿಶನ್ ಕೌಲ್ ಕಳೆದ ಡಿ.25ರಂದು ನಿವೃತ್ತರಾಗಿದ್ದರು. ಆ ಖಾಲಿ ಇದ್ದ ಸ್ಥಾನಕ್ಕೆ ಹೈಕೋರ್ಟ್‌ಗಳಲ್ಲಿ ಮುಖ್ಯ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸುತ್ತಿರುವವರ ಸೇವಾ ಹಿರಿತನ, ಜೇಷ್ಠತೆ, ಲಿಂಗ, ಪ್ರದೇಶ, ಜಾತಿ ಪ್ರಾತಿನಿಧ್ಯಗಳನ್ನು ಪರಿಗಣಿಸಿ ಪಿ.ಬಿ.ವರಾಳೆ ಅವರಿಗೆ ಬಡ್ತಿ ನೀಡಲು ನಿರ್ಧರಿಸಲಾಗಿದೆ.
ಮೂಲತಃ ಬಾಂಬೆ ಹೈಕೋರ್ಟ್‌ನ ಪಿ.ಬಿ.ವರಾಳೆ ಅವರು ಅತ್ಯಂತ ಹಿರಿಯ ನ್ಯಾಯಮೂರ್ತಿಗಳು ಹಾಗೂ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ. ಅವರು ಎಲ್ಲ ರೀತಿಯಲ್ಲೂಸುಪ್ರಿಂ ಕೋರ್ಟ್ ನ್ಯಾಯಮೂರ್ತಿಗಳಾಗಲು ಅರ್ಹರಾಗಿದ್ದಾರೆ. ಕಳೆದ ಒಂದು ವರ್ಷದಿಂದ ಅವರು ಕರ್ನಾಟಕ ಹೈಕೋರ್ಟ್ ಸಿಜೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನಿವೃತ್ತಿಗೂ ಮುನ್ನ ಸಿಜೆ ಹುದ್ದೆ
ಸಿಜೆ ಪಿ.ಬಿ.ವರಾಳೆ ಅವರ ಪದೋನ್ನತಿಯಿಂದ ತೆರವಾದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಕರ್ನಾಟಕದ ಹಿರಿಯ ನ್ಯಾ. ಪಿ.ಎಸ್. ದಿನೇಶ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ. ದಿನೇಶ್ ಕುಮಾರ್ ಅವರು ಇದೇ ಫೆ.24ಕ್ಕೆ ಸೇವೆಯಿಂದ ನಿವೃತ್ತರಾಗಲಿದ್ದಾರೆ. ಅತ್ಯಲ್ಪ ಅವಧಿ ಅಂದರೆ ಬಹುತೇಕ ಒಂದು ತಿಂಗಳು ಅವರು ಸಿಜೆಯಾಗಲಿದ್ದಾರೆ.
ಸಾಮಾನ್ಯವಾಗಿ ಹೈಕೋರ್ಟ್‌ನ ಸಿಜೆಯನ್ನಾಗಿ ಬೇರೆ ಹೈಕೋರ್ಟ್‌ನ ನ್ಯಾಯಮೂರ್ತಿಗಳನ್ನು ನೇಮಕ ಮಾಡುವುದು ವಾಡಿಕೆ. ಆದರೆ ದಿನೇಶ್ ಕುಮಾರ್ ಅವರ ನ್ಯಾಯಾಂಗ ಹಾಗೂ ಆಡಳಿತದ ಅನುಭವ, ದಕ್ಷತೆ, ಪ್ರಮಾಣಿಕತೆಯನ್ನು ಪರಿಗಣಿಸಿ ಅವರನ್ನು ಹೈಕೋರ್ಟ್ ಸಿಜೆಯನ್ನಾಗಿ ನೇಮಕ ಮಾಡಲಾಗುತ್ತಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಕೇಂದ್ರದಿಂದ ಆದೇಶ ನಿರೀಕ್ಷೆ
ಸುಪ್ರೀಂ ಕೋರ್ಟ್ ಕೊಲಿಜಿಯಂ ಕೈಗೊಂಡಿರುವ ತೀರ್ಮಾನವನ್ನು ಕೇಂದ್ರ ಸರ್ಕಾರಕ್ಕೆ ಮುಂದಿನ ಆದೇಶಕ್ಕಾಗಿ ಶಿಫಾರಸು ಮಾಡಲಾಗುವುದು. ಆನಂತರ ಕೇಂದ್ರ ಕಾನೂನು ಸಚಿವಾಲಯ ಮುಂದಿನ ಪ್ರಕ್ರಿಯೆ ನಡೆಸಿ, ನೇಮಕ ಪ್ರಸ್ತಾವವನ್ನು ರಾಷ್ಟ್ರಪತಿಗೆ ಕಳುಹಿಸಲಿದೆ. ಅವರು ನೇಮಕದ ಅಧಿಕೃತ ಆದೇಶವನ್ನು ಹೊರಡಿಸಲಿದ್ದಾರೆ.












Click it and Unblock the Notifications