ಅಕ್ರಮ ಕಳ್ಳ ಸಾಗಾಣೆ: ಉದ್ಯಮಿ ಗುರುಮೀತ್ ಸಿಂಗ್ ಕೊಹ್ಲಿ ಬಂಧನ ಊರ್ಜಿತ
ಬೆಂಗಳೂರು, ಜ.26: ವಸ್ತುಗಳ ಅಕ್ರಮ ಕಳ್ಳ ಸಾಗಾಣೆ ಪ್ರಕರಣದಲ್ಲಿ ಮುಂಬೈ ಮೂಲದ ಗುರುಮೀತ್ ಸಿಂಗ್ ಕೊಹ್ಲಿಯನ್ನು ಬಂಧಿಸಿ ಕೇಂದ್ರೀಯ ಆರ್ಥಿಕ ಜಾಗೃತ ದಳ ಹೊರಡಿಸಿದ್ದ ಬಂಧನ ಆದೇಶವನ್ನು ಹೈಕೋರ್ಟ್ ಊರ್ಜಿತಗೊಳಿಸಿದೆ.
ಕೊಹ್ಲಿಯ ಪುತ್ರಿ ಕಿರಣ್ ಇಚ್ಛ ಕೌರ್ ಬಶೀನ್ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾ. ಅಲೋಕ್ ಅರಾಧೆ ನೇತೃತ್ವದ ವಿಭಾಗೀಯಪೀಠ ಈ ಆದೇಶವನ್ನು ಹೊರಡಿಸಿದೆ.
''ಆರೋಪಿ ನಕಲಿ ಕಂಪನಿಗಳ ಮೂಲಕ ಮತ್ತಷ್ಟು ಕಳ್ಳ ಸಾಗಾಣೆ ಮಾಡದಂತೆ ತಡೆಯಲು ಮತ್ತು ಅಂತಯ ಪ್ರಯತ್ನಗಳಿಗೆ ಪ್ರಚೋದನೆ ನೀಡುವುದನ್ನು ತಪ್ಪಿಸಲು ವಿದೇಶಿ ವಿನಿಮಯ ಮತ್ತು ಪದಾರ್ಥಗಳ ಕಳ್ಳ ಸಾಗಾಣೆ ನಿಯಂತ್ರಣ ಕಾಯಿದೆ 1974ರಡಿ ಬಂಧನಕ್ಕೆ ಆದೇಶ ಹೊರಡಿಸಿರುವುದು ಸರಿ ಇದೆ,'' ಎಂದು ನ್ಯಾಯಪೀಠ ಹೇಳಿದೆ.

''ಬಂಧನ ಆದೇಶದಿಂದ ಆರೋಪಿ ಮುಂದೆ ಮಾಡಬಹುದಾದ ಅಪರಾಧಗಳ ಸಂಭವನೀಯತೆ ತಪ್ಪಿದೆ. ಕಂದ್ರೀಯ ಆರ್ಥಿಕ ಜಾಗೃತ ದಳ ಸಮನ್ಸ್ ಜಾರಿಗೊಳಿಸಿದ್ದರೂ ಆರೋಪಿ ಅಕ್ರಮ ಕಳ್ಳ ಸಾಗಾಣೆಯಲ್ಲಿ ತೊಡಗಿದ್ದು ಕಂಡು ಬಂದಿದೆ. ಹಾಗಾಗಿ ಬಂಧನ ಆದೇಶ ಎತ್ತಿಹಿಡಿಲಾಗಿದೆ,'' ಎಂದು ನ್ಯಾಯಾಲಯ ಆದೇಶಿಸಿ ಪುತ್ರಿಯ ಅರ್ಜಿಯನ್ನು ವಜಾಗೊಳಿಸಿದೆ.
ಸಿಇಐಬಿ ಪರ ವಾದ ಮಂಡಿಸಿದ್ದವಕೀಲರು ''ಬಂಧಿತ ಆರೋಪಿ ದೇಶದೊಳಕ್ಕೆ ಸರಕುಗಳ ಕಳ್ಳ ಸಾಗಾಣೆ ಮೂಲಕ ಬೊಕ್ಕಸಕ್ಕೆ ಭಾರಿ ಹಾನಿಯನ್ನು ಮಾಡಿದ್ದಾರೆ. ಆ ನಿಯಮಗಳನ್ನು ಉಲ್ಲಂಘಿಸಿರುವುದಕ್ಕೆ ಆತನ ವಿರುದ್ಧ ಹಲವು ಕಾನೂನುಗಳಡಿ ಕ್ರಮಗಳನ್ನು ಜರುಗಿಸಲಾಗುತ್ತಿದೆ,'' ಎಂದು ಹೇಳಿದ್ದರು.
ಅಲ್ಲದೆ, ಗುರುಮೀತ್ ಸಿಂಗ್ ಕೊಹ್ಲಿ ಸಂಘಟಿತ ಕಳ್ಳ ಸಾಗಾಣೆ ಜಾಲದ ರೂವಾರಿಯಾಗಿದ್ದಾನೆ. ಆತನ ಪುತ್ರ ಅಮಾನ್ ಪುನೀತ್ ಸಿಂಗ್ ಕೊಹ್ಲಿ ಕೂಡ ಇಂತಹುದೇ ಆರೋಪದಡಿ ಬಂಧನಕ್ಕೆ ಒಳಗಾಗಿದ್ದಾನೆ. ಇವರು ಇಂಡಿಯನ್ ಹ್ಯಾಂಡ್ ನಿಟ್ಟೆಡ್ ಸಿಲ್ಕ್ ಕಾರ್ಪೆಟ್ಸ್ ಹೆಸರಿನಲ್ಲಿ ರಫ್ತು ವಹಿವಾಟು ನಡೆಸುತ್ತಿದ್ದು, 12ಕ್ಕೂ ಅಧಿಕ ಅಕ್ರಮ ಕಂಪನಿಗಳ ಮೂಲಕ ಅಕ್ರಮವಾಗಿ ವಸ್ತುಗಳ ಕಳ್ಳ ಸಾಗಾಣೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಲಾಗಿದೆ.
ಬೆಂಗಳೂರಿನ ಕಂದಾಯ ಜಾಗೃತ ನಿರ್ದೇಶನಾಲಯ, ಆರೋಪಿಯ ಚಟುವಟಿಕೆಗಳ ಬಗ್ಗೆ ಮತ್ತು ಆತನ ನಕಲಿ ಕಂಪನಿಗಳ ಬಗ್ಗೆ ಮಾಹಿತಿಯನ್ನು ಕಲೆ ಹಾಕಿತ್ತು.












Click it and Unblock the Notifications