ಕರ್ನಾಟಕದ ವಿದ್ಯಾರ್ಥಿಗಳಿಗೆ ಐಐಟಿ ಮಾದರಿಯಲ್ಲಿ ಶಿಕ್ಷಣ ದೊರಕಿಸಲು ಕೆಐಟಿ ಸ್ಥಾಪನೆ: ಹೊಸ 9 ವಿವಿ ಉದ್ಘಾಟಿಸಿದ ಸಿಎಂ
ಬೆಂಗಳೂರು, ಮಾರ್ಚ್ 28: ಕರ್ನಾಟಕ ರಾಜ್ಯದಲ್ಲಿನ ಕೆಲವು ಇಂಜಿನಿಯರಿಂಗ್ ಕಾಲೇಜುಗಳನ್ನು ಮೇಲ್ದರ್ಜೆಗೆ ಏರಿಸುವ ಜೊತೆಗೆ ಅವುಗಳನ್ನು ವಿದ್ಯಾರ್ಥಿಗಳಿಗೆ ಪೂರಕವಾಗುವಂತೆ ಐಐಟಿ ಮಾದರಿಯಲ್ಲಿ ಕೆಐಟಿಗಳಾಗಿ ಪರಿವರ್ತಿಸಲು ಸರ್ಕಾರ ನಿರ್ಧರಿಸಿದೆ. ಇದರಿಂದ ಮಕ್ಕಳು ಐಐಟಿ ಮುಂದೆ ನಿಲ್ಲುವುದು ತಪ್ಪಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದೆ.
ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಇಲಾಖೆ ಮಂಗಳವಾರ ಆಯೋಜಿಸಿದ್ದ ಸಮಾರಂಭದಲ್ಲಿ '09 ನೂತನ ವಿಶ್ವವಿದ್ಯಾಲಯಗಳನ್ನು 07 ಇಂಜಿನಿಯರಿಂಗ್ ಕಾಲೇಜುಗಳ ಉನ್ನತೀಕರಣವನ್ನು ವರ್ಚುವಲ್ ಮೂಲಕ ಮುಖ್ಯಮಂತ್ರಿಗಳು ಉದ್ಘಾಟಿಸಿ ಮಾತನಾಡಿದರು.

ಭವಿಷ್ಯದಲ್ಲಿ ರಾಜ್ಯದ ವಿದ್ಯಾರ್ಥಿಗಳು ಐಐಟಿ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವುದು ತಪ್ಪಲಿದೆ. ಉದ್ದೇಶಿತ ಏಳು ಇಂಜಿನಿಯರಿಂಗ್ ಕಾಲೇಜುಗಳನ್ನು ಉನ್ನತೀಕರಿಸಲಿದ್ದೇವೆ. ಅಷ್ಟೇ ಅಲ್ಲದೇ ಅವುಗಳನ್ನು ಭಾರತೀಯ ತಂತ್ರಜ್ಞಾನ ಸಂಸ್ಥೆ (IIT) ಮಾದರಿಯಲ್ಲಿಯೇ ಉನ್ನತೀಕರಣಗೊಂಡ ಕಾಲೇಜುಗಳನ್ನು ಕರ್ನಾಟಕ ತಂತ್ರಜ್ಞಾನ ಸಂಸ್ಥೆ (KIT)ಗಳಾಗಿ ಪರಿವರ್ತಿಸಲಿದ್ದೇವೆ/ಸ್ಥಾಪಿಸಲಿದ್ದೇವೆ.
ಈ ಸಂಬಂಧ ಕರ್ನಾಟಕ ಸರ್ಕಾರ ದೇಶ ವಿದೇಶಗಳ ವಿಶ್ವವಿದ್ಯಾಲಯಗಳ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಇದರಿಂದ ನಮ್ಮಲ್ಲಿಯೇ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಲಭ್ಯವಾಗಲಿದೆ ಎಂದು ಅವರು ವಿವರಿಸಿದರು. ಈ ಹೊಸ ವಿಶ್ವವಿದ್ಯಾಲಯಗಳು ಹಾವೇರಿ, ಮಂಡ್ಯ, ಚಾಮರಾಜನಗರ, ಬೀದರ್, ಬಾಗಲಕೋಟೆ, ಕೊಡಗು, ಕೋಲಾರ ಮತ್ತಿತರ ಕಡೆಗಳಲ್ಲಿ ಸ್ಥಾಪನೆಯಾಗಲಿವೆ.

ನಮ್ಮ ಸರ್ಕಾರ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಇಂದು ಸರ್ಕಾರ ಆರಂಭಿಸಿರವಿಶ್ವವಿದ್ಯಾಲಯಗಳು ಮುಂದಿನ ಭವಿಷ್ಯವನ್ನು ಬರೆಯುವ ಕೇಂದ್ರಗಳಾಗಿವೆ. ಶಿಕ್ಷಣ ಬೆಳವಣಿಗೆ ಹೊಂದಬೇಕು. ಈ ರೀತಿಯ ವಿಶ್ವ ವಿದ್ಯಾಲಯಗಳು ದೇಶದಲ್ಲಿಯೇ ಪ್ರಥಮವಾಗಿ ಪ್ರಾರಂಭವಾಗಿವೆ. ಮುಂದಿನ ದಿನಗಳಲ್ಲಿ ಎಲ್ಲರೂ ಕರ್ನಾಟಕದ ಮಾದರಿ ಅಳವಡಿಸಿಕೊಳ್ಳುವಂತಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ದೇಶದಲ್ಲಿ ಉನ್ನತ ಶಿಕ್ಷಣ ಅಂದರೆ ಐಐಟಿ ಅದಕ್ಕೆ ಸಿಇಟಿ ಮೂಲಕ ಆಯ್ಕೆ ಆಗಬೇಕು. ನಮ್ಮ ಮಕ್ಕಳು ಐಐಟಿ ಮಾದರಿಯಲ್ಲಿ ಶಿಕ್ಷಣ ಪಡೆಯಬೇಕು ಎಂದು ಕೆಐಟಿ ಸ್ಥಾಪನೆ ಮಾಡಲಾಗುವುದು. ಮುಂದಿನ ಐದು ವರ್ಷಗಳಲ್ಲಿ ಎಲ್ಲಾ ಸಂಸ್ಥೆಗಳು ಐಐಟಿ ಮಾದರಿಯಲ್ಲಿ ಇರಲಿವೆ. ಐಐಟಿ ಹುಡುಕಿಕೊಂಡು ಹೋಗುವ ಬದಲು ಇಲ್ಲಿಯೇ ಐಐಟಿ ಸೃಷ್ಟಿಸುತ್ತಿದ್ದೇವೆ ಎಂದು ಪುನರುಚ್ಚರಿಸಿದರು.
ವಿದ್ಯಾರ್ಥಿಗಳು ನಾಡಿನ ಭವಿಷ್ಯ
ಪ್ರಸ್ತುತ 21ನೇ ಶತಮಾನದಲ್ಲಿ ನಾವಿದ್ದೇವೆ. ಮುಂದಿನ ದಿನಗಳಲ್ಲಿ ಭಾರತ ದೇಶ ವಿಶ್ವ ಗುರುವಾಗಲಿದೆ. ಪಾಕಿಸ್ತಾನದ ಪ್ರಜೆಗಳು ಮೋದಿಯಂಥ ಪ್ರಧಾನಿ ಬೇಕು ಎಂದು ಬಯಸುತ್ತಿದ್ದಾರೆ. ಚೀನಾ ದೇಶ ಕೂಡ ಭಾರತ ಕೊರೊನಾ ನಿಯಂತ್ರಣ ಮಾಡಿದ್ದನ್ನು ಮೆಚ್ಚಿಕೊಂಡಿದೆ ಎಂದು ದೇಶ ಹಾಗೂ ಪ್ರಧಾನಿಗಳ ಕಾರ್ಯ ವೈಖರಿ ಶ್ಲಾಘಿಸಿದರು. ಶಿಕ್ಷಣ ಸಂಸ್ಥೆ ಅಂದರೆ ಪಾವಿತ್ಯತೆ. ಸಂಸ್ಥೆಗಳು ಸರಸ್ವತಿಯ ವಾಹನ ಪರಮಹಂಸ ಕೂಡ ಪವಿತ್ರವಾಗಿದ್ದು ವಿದ್ಯಾರ್ಥಿಗಳು ಅಷ್ಟೇ ಎತ್ತರಕ್ಕೆ ಬೆಳೆಯಬೇಕು ಎಂದರು.
ರಾಜ್ಯ ಬಿಜೆಪಿ ಸರ್ಕಾರ ಪ್ರಸ್ತಕ ವರ್ಷದ ಬಜೆಟ್ ನಲ್ಲಿ ಶೇಕಡಾ 12ರಷ್ಟು ಅನುದಾನವನ್ನು ಶಿಕ್ಷಣ ಮತ್ತು ಆರೋಗ್ಯಕ್ಕೆ ಮೀಸಲಾಗಿಟ್ಟಿದೆ. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್ ಅಶ್ವಥ್ ನಾರಾಯಣ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ. ಕೆಲವೊಬ್ಬ ರಾಜಕಾರಣಿಯ ಕಣ್ಣು ಮುಂದಿನ ಚುನಾವಣೆ ಮೇಲಿರುತ್ತದೆ. ಇನ್ನೂ ಕೆಲ ಮುತ್ಸದ್ಧಿಯ ಕಣ್ಣು ಮುಂದಿನ ಜನಾಂಗದ ಮೇಲಿರುತ್ತದೆ.
ಅದೇ ರೀತಿ ಸಚಿವರ ದೃಷ್ಟಿ ಉನ್ನತ ಶಿಕ್ಷಣ ಇಲಾಖೆ ಮೇಲಿದ್ದು, ಸಾಕಷ್ಟು ಉತ್ತಮ ಕೆಲಸ ಮಾಡಿದ್ದಾರೆ ಎಂದು ಹೊಗಳಿದರು. ಸಚಿವರು ಸಾಕಷ್ಟು ಉತ್ತಮ ಕೆಲಸ ಮಾಡಿದ್ದಾರೆ. ಅಶ್ವಥ್ ಅವರ ಯೋಜನೆಗಳು ವೇಗವಾಗಿ ಅನುಷ್ಠಾನಗೊಳ್ಳುತ್ತವೆ ಎಂದು ಅವರು ಸಚಿವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಉನ್ನತ ಶಿಕ್ಷಣ ಸಚಿವ ಡಾ ಸಿ.ಎನ್.ಅಶ್ವಥ್ ನಾರಾಯಣ, ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಶಿಕ್ಷಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಉಪಸ್ಥಿತರಿದ್ದರು.












Click it and Unblock the Notifications